ಬುಧವಾರ, ಜನವರಿ 29, 2020
27 °C

ಮಂಗಳೂರು ಗೋಲಿಬಾರ್‌ ಪ್ರಕರಣ: ಮೃತರ ವಿರುದ್ಧವೂ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದಲ್ಲಿ ಗುರುವಾರ ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಮೃತಪಟ್ಟ ಕಂದಕ್‌ ನಿವಾಸಿ ಜಲೀಲ್‌ ಮತ್ತು ಕುದ್ರೋಳಿ ನಿವಾಸಿ ನೌಶೀನ್‌ ಅವರನ್ನೂ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ನಡೆಸಿ, ಪೊಲೀಸರ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ, ಮಾರಕಾಸ್ತ್ರಗಳೊಂದಿಗೆ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯ ಮೇಲೆ ದಾಳಿಮಾಡಿ, ಠಾಣೆಗೆ ಬೆಂಕಿಹಚ್ಚಿ ಪೊಲೀಸರ ಕೊಲೆಗೆ ಯತ್ನಿಸಿದ ಆರೋಪದಡಿ ಅದೇ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ಇಬ್ಬರನ್ನೂ ಆರೋಪಿಗಳೆಂದು ಗುರುತಿಸಲಾಗಿದೆ. ಜಲೀಲ್‌ ಮೂರನೇ ಆರೋಪಿಯಾದರೆ, ನೌಶೀನ್‌ ಎಂಟನೇ ಆರೋಪಿ ಎಂದು ಗುರುವಾರ ರಾತ್ರಿ ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘1,500ರಿಂದ 2000 ಮುಸ್ಲಿಂ ಯುವಕರಿದ್ದ ಗುಂಪು ಪ್ರತಿಭಟನೆ ನಿರತವಾಗಿತ್ತು. ಜಲ್ಲಿಕಲ್ಲು, ದೊಣ್ಣೆ, ಸೋಡಾ ಬಾಟಲಿ, ಗಾಜಿನ ತುಂಡುಗಳೊಂದಿಗೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಗೆ ಬೆಂಕಿಹಚ್ಚಿ, ಪೊಲೀಸರನ್ನು ಕೊಲ್ಲಲು ಯತ್ನಿಸಿತು. ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿ, ಟಯರ್‌ ಬೆಂಕಿ ಹಚ್ಚಿ ಎಸೆಯುತ್ತಿದ್ದರು. ಮೆಗಾ ಫೋನ್‌ ಮೂಲಕ ಸೂಚನೆ ನೀಡಿದರೂ ಚದುರಲಿಲ್ಲ. ಲಾಠಿ ಪ್ರಹಾರ ಮಾಡಿದಾಗ ಚದುರಿ ಹೋದ ಗುಂಪು ಮತ್ತೆ ಸೇರಿಕೊಂಡು ಗಲಭೆ ಮುಂದುವರಿಸಿತ್ತು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಗಲಭೆಯನ್ನು ಹತ್ತಿಕ್ಕಲು ಗಾಳಿಯಲು ಗುಂಡು ಹಾರಿಸಿದಾಗ ಗಲಭೆ ನಿರತರ ಪೈಕಿ ಇಬ್ಬರು ಗಾಯಗೊಂಡರು. ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ಐವರು ಗಾಯಗೊಂಡಿದ್ದರು’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಅವರು ನೀಡಿರುವ ದೂರನ್ನು ಆಧರಿಸಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ, ಹಿಂಸಾಚಾರ, ಪೊಲೀಸ್‌ ಠಾಣೆ ಮೇಲಿನ ದಾಳಿ, ರಸ್ತೆ ತಡೆ, ಪೊಲೀಸರ ಕೊಲೆಗೆ ಯತ್ನಿಸಿದ ಆರೋಪದಡಿ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಇನ್ನೂ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿರುವುದು, ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನ ಮತ್ತು ಹೈಲ್ಯಾಂಡ್‌ ಆಸ್ಪತ್ರೆ ಬಳಿ ಗಲಭೆ ನಡೆಸಿ, ಪೊಲೀಸರ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಪಿಎಫ್‌ಐ, ಎಸ್‌ಡಿಪಿಐ ನಂಟು
ಪ್ರತಿಭಟನೆ ಮತ್ತು ಗಲಭೆಗೆ ಸಂಬಂಧಿಸಿದ ಎಫ್‌ಐಆರ್‌ಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್ಐ) ಮತ್ತು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಹೆಸರನ್ನು ಉಲ್ಲೇಖಿಸಲಾಗಿದೆ.

ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ರವಾನಿಸಿ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಸ್‌ಡಿಪಿಐ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಿಯಾಝ್‌ ಫರಂಗಿಪೇಟೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಸಾಹುಲ್‌ ಎಸ್‌.ಎಚ್‌. ವಿರುದ್ಧ ದೇಶದ್ರೋಹ ಆರೋಪದಡಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು