ಬುಧವಾರ, ಅಕ್ಟೋಬರ್ 28, 2020
28 °C
15 ರಿಂದ 20 ದಿನಗಳವರೆಗೆ ವೈದ್ಯಕೀಯ ವ್ಯವಸ್ಥೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ

ಮಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೌಸ್ ಸರ್ಜನ್‌ಗಳು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್–19 ಸೋಂಕಿಗೆ ಒಳಗಾಗುತ್ತಿದ್ದು, ರೋಗಿಗಳ ಚಿಕಿತ್ಸೆಗೆ ಹಿನ್ನಡೆಯಾಗಿದೆ.

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳೇ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಬೆನ್ನೆಲುಬಾಗಿದ್ದು, ಅವರಿಗೇ ಕೋವಿಡ್–19 ಸೋಂಕು ಬಾಧಿಸುತ್ತಿದೆ. ಇದರಿಂದಾಗಿ ಹೋಂ ಐಸೋಲೇಷನ್‌ಗೆ ಒಳಗಾಗುವಂತಾಗಿದೆ. ಅಲ್ಲದೇ ಕೋವಿಡ್–19 ನೆಗೆಟಿವ್‌ ಬಂದು, ಕರ್ತವ್ಯಕ್ಕೆ ಮರಳಲು ಸಮಯವೂ ಬೇಕಾಗುತ್ತದೆ. ಈ ಅವಧಿಯಲ್ಲಿ ರೋಗಿಗಳ ಚಿಕಿತ್ಸೆಗೆ ವೈದ್ಯರು, ಸಿಬ್ಬಂದಿಯ ಕೊರತೆ ಎದುರಾಗುತ್ತಿದೆ.

ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಪದವಿ ಇಂಟರ್ನಿಗಳು ಸೋಂಕಿಗೆ ಒಳಗಾಗಿದ್ದಾರೆ. ಒಂದು ಕಾಲೇಜಿನಲ್ಲಿ 70 ಮಂದಿ ಇದ್ದರೆ, ಇನ್ನೊಂದು ಕಾಲೇಜಿನಲ್ಲಿ 125 ಮಂದಿಗೆ ಕೋವಿಡ್–19 ಬಾಧಿಸಿದೆ. ಇದರ ಜತೆಗೆ ಕೆಲವು ವೈದ್ಯರಿಗೂ ಕೋವಿಡ್–19 ತಗಲಿದೆ.

‘ನಮ್ಮ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಂಕಿತರಿಗೆ ಪ್ರತ್ಯೇಕ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು ತಗಲಿದರೆ, ಸುಮಾರು 15–20 ದಿನಗಳವರೆಗೆ ವೈದ್ಯಕೀಯ ವ್ಯವಸ್ಥೆಗೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಕೆಎಂಸಿ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ವೆಂಕಟರಾಯ ಪ್ರಭು ತಿಳಿಸಿದ್ದಾರೆ.

ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ಸೋಂಕಿಗೆ ಒಳಗಾಗದಂತೆ ತಡೆಯಲಾಗಿದೆ. ಅದಾಗ್ಯೂ ಸಣ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸೋಂಕಿತರಾಗಿದ್ದಾರೆ ಎಂದು ಫಾದರ್ ಮುಲ್ಲರ್‌ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಜಯಪ್ರಕಾಶ್‌ ಆಳ್ವ ತಿಳಿಸಿದ್ದಾರೆ.

‘ನಾವು ಅಳವಡಿಸಿಕೊಂಡಿರುವ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಸೋಂಕಿಗೆ ಒಳಗಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸಿಬ್ಬಂದಿ ಅಥವಾ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರಿಗೆ ಕೋವಿಡ್–19 ತಗಲಿದರೆ, ಅವರಿಗಾಗಿ ಪ್ರತ್ಯೇಕ ಐಸೋಲೇಷನ್‌ ವ್ಯವಸ್ಥೆಗಾಗಿ ಒಂದು ಮಹಡಿಯನ್ನು ಮೀಸಲಿಡಲಾಗಿದೆ’ ಎಂದು ಯೇನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ. ವಿಜಯಕುಮಾರ್ ಹೇಳಿದ್ದಾರೆ.

‘ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರ್ವಹಿಸುವ ವೈದ್ಯರ ಅವಧಿಯನ್ನೂ 8 ಗಂಟೆಯಿಂದ 6 ಗಂಟೆಗೆ ಇಳಿಸಲಾಗಿದೆ. ಅಲ್ಲದೇ ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು, ಸಿಬ್ಬಂದಿಗೆ ಆರೋಗ್ಯ ವಿಮೆ ಮಾಡಲಾಗಿದೆ’ ಎಂದು ಡಾ.ವಿಜಯಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು