ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಗಳ ಹಬ್ಬಕ್ಕೆ ಖರೀದಿ ಜೋರು

ಗೂಡು ದೀಪ, ಹೊಸ ಬಟ್ಟೆ ಖರೀದಿ ಭರಾಟೆ: ಸೆಗಣಿ, ಮಣ್ಣಿನ ಹಣತೆಗಳಿಗೆ ಬೇಡಿಕೆ ಹೆಚ್ಚಳ
Last Updated 13 ನವೆಂಬರ್ 2020, 16:59 IST
ಅಕ್ಷರ ಗಾತ್ರ

ಮಂಗಳೂರು: ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ನಗರ ಸಜ್ಜಾಗಿದ್ದು, ಶುಕ್ರವಾರ ಮಾರುಕಟ್ಟೆಯಲ್ಲಿ ಭರ್ಜರಿ ಖರೀದಿ ನಡೆಯಿತು. ಗೂಡುದೀಪ, ಮಣ್ಣಿನ ಹಣತೆ ಮತ್ತು ಸೆಗಣಿಯ ಹಣತೆಗಳಿಗೆ ಉತ್ತಮ ಬೇಡಿಕೆ ಬಂದಿದ್ದು, ವ್ಯಾಪಾರಿಗಳು ಕೂಡ ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ದೀಪಾವಳಿಗೆ ವಾರದಿಂದಲೇ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಶುಕ್ರವಾರ ಖರೀದಿ ಇನ್ನಷ್ಟು ಬಿರುಸುಗೊಂಡಿತ್ತು. ನಗರದ ಫ್ಯಾನ್ಸಿ ಅಂಗಡಿ, ಬಟ್ಟೆ ಅಂಗಡಿಗಳು, ಮಾಲ್‌ಗಳು, ಗೂಡುದೀಪಗಳ ಅಂಗಡಿಗಳ ಎದುರು ಜನರ ದಟ್ಟಣೆ ಹೆಚ್ಚಾಗಿತ್ತು. ವಿವಿಧ ಬಣ್ಣಗಳ ವೈವಿಧ್ಯಮಯ ಗೂಡುದೀಪಗಳು ರಾರಾಜಿಸುತ್ತಿದ್ದು, ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದವು. ಸಣ್ಣ ಗೂಡುದೀಪಗಳಿಗೆ ₹150 ಬೆಲೆ ಇತ್ತು.

ದೀಪಾವಳಿಗೆ ಮಾರುಕಟ್ಟೆಯಲ್ಲಿ ಸೆಗಣಿಯ ಹಣತೆಗೆ ಬೇಡಿಕೆ ಕೇಳಿಬರುತ್ತಿದೆ. ಹಂಪನಕಟ್ಟೆ, ರಥಬೀದಿ ಮುಂತಾದೆಡೆಗಳಲ್ಲಿ ಸೆಗಣಿಯಿಂದ ಮಾಡಿದ ಹಣತೆಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಮಾರಾಟಗಾರರು.

‘ಸುರತ್ಕಲ್‌ನ ಎಚ್ಚಣ್ಣ ಡೈರಿ ಸರ್ವಿಸಸ್‌ ಮೂಲಕ ಸೆಗಣಿಯ ಹಣತೆಗಳನ್ನು ತಯಾರಿಸಿ, ನಗರದ ವಿವಿಧ ಅಂಗಡಿಗಳಿಗೆ ಒದಗಿಸಲಾಗುತ್ತಿದ್ದು, ದಿನಕ್ಕೆ ಸಾವಿರಾರು ಹಣತೆಗಳು ಮಾರಾಟವಾಗುತ್ತಿವೆ. ಮಣ್ಣಿನ ಹಣತೆಗಳಿಗೂ ಬೇಡಿಕೆ ಹೆಚ್ಚಾಗಿದೆ. ವಿವಿಧ ಬಣ್ಣ, ಆಕಾರಗಳಲ್ಲಿ ಅಲಂಕೃತಗೊಂಡ ಹಣತೆಗಳನ್ನು ಖರೀದಿಸುವಲ್ಲಿ ಜನರು ಆಸಕ್ತಿ ತೋರುತ್ತಿದ್ದಾರೆ’ ಎನ್ನುತ್ತಾರೆ ಸಂಸ್ಥೆಯ ಮಾಲೀಕ ಹರಿಕೃಷ್ಣ.

‘ಬಟ್ಟೆ ವ್ಯಾಪಾರವೂ ಭರ್ಜರಿಯಾಗಿಯೇ ನಡೆದಿದೆ. ಕಳೆದ ನಾಲ್ಕೈದು ತಿಂಗಳಿಗೆ ಹೋಲಿಸಿದರೆ, ವ್ಯಾಪಾರ ಚೇತರಿಸಿಕೊಂಡಿದೆ. ಕಳೆದ ವರ್ಷಕ್ಕಿಂತ ಸ್ವಲ್ಪ ವ್ಯಾಪಾರ ಕಡಿಮೆ ಇದ್ದರೂ, ಜನ ಖರೀದಿಗೆ ಬರುತ್ತಿದ್ದಾರೆ. ಶುಕ್ರವಾರವೂ ಖರೀದಿ ಹೆಚ್ಚಾಗಿತ್ತು’ ಎಂದು ಬಟ್ಟೆ ಅಂಗಡಿಯ ಶೇಖರ ಪೂಜಾರಿ ಹೇಳುತ್ತಾರೆ.

ಹಬ್ಬದ ಖರೀದಿಗೆ ಟ್ರಾಫಿಕ್‌ ಕಿರಿಕಿರಿ

ನಗರದ ಹಲವೆಡೆ ಸ್ಮಾರ್ಟ್‌ ಸಿಟಿ ಕಾಮಗಾರಿ ನಡೆಯುತ್ತಿದ್ದು, ಸಂಚಾರ ವ್ಯವಸ್ಥೆ ಸ್ಥಗಿತವಾಗಿದೆ. ಇರುವ ರಸ್ತೆಗಳಲ್ಲಿ ಮಾರುಕಟ್ಟೆಗೆ ಹೋಗುವುದೇ ಜನರಿಗೆ ದುಸ್ತರವಾಗಿ ಪರಿಣಮಿಸಿತ್ತು.

‘ಮಂಗಳೂರಿನ ಟ್ರಾಫಿಕ್‌ ದಟ್ಟಣೆಯೂ ಬೆಂಗಳೂರಿನಂತಾಗಿದೆ. ಹಬ್ಬದ ಸಂದರ್ಭದಲ್ಲಿ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಮಾರುಕಟ್ಟೆಗೆ ಹೋಗುವುದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ’ ಎಂದು ನಗರದ ನಿವಾಸಿ ರಮೇಶ್ ಪೆರ್ಣಂಕಿಲ ಅಸಮಾಧಾನ ವ್ಯಕ್ತಪಡಿಸಿದರು.

ಜನರು ಮಾರುಕಟ್ಟೆಗೆ ಬರುವುದೇ ಹರಸಾಹಸ ಎನ್ನುವಂತಾಗಿದೆ. ಸದ್ಯಕ್ಕೆ ವ್ಯಾಪಾರ ಇದೆ. ಆದರೆ, ರಸ್ತೆಗಳು ಎಂದಿನಂತೆ ಇದ್ದರೆ, ಮತ್ತಷ್ಟು ಜನರು ಖರೀದಿಗೆ ಬರುತ್ತಿದ್ದರು ಎನ್ನುವುದು ಬಟ್ಟೆ ವ್ಯಾಪಾರಿಗಳ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT