ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ನಾವು ಹೇಳಿದ್ದು ಕೇಳಲ್ಲ, ನಡೆದಂತೆ ನಡೆಯುತ್ತಾರೆ: ಸಚಿವ ಸುರೇಶ್ ಕುಮಾರ್

ಮುಖ್ಯ ಶಿಕ್ಷಕರ ಜೊತೆಗಿನ ಸಂವಾದ
Last Updated 28 ಫೆಬ್ರುವರಿ 2021, 5:25 IST
ಅಕ್ಷರ ಗಾತ್ರ

ಮಂಗಳೂರು: ‘ಮಕ್ಕಳು ನಾವು ಹೇಳಿದ್ದನ್ನು ಕೇಳುವುದಿಲ್ಲ. ಆದರೆ, ನಮ್ಮ ನಡೆಯಂತೆ ನಡೆಯುತ್ತಾರೆ. ಅದಕ್ಕಾಗಿ ಶಿಕ್ಷಕರು ಮೇಲ್ಪಂಕ್ತಿ ಹಾಕಿ ಕೊಡಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಹೇಳಿದರು.

ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ 2020ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಪ್ರಮಾಣ ಪತ್ರ ವಿತರಣೆ, ಟ್ಯಾಬ್‌ ವಿತರಣೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕರಾವಳಿ ಮತ್ತು ಮಲೆನಾಡಿನಲ್ಲಿ ಶಿಕ್ಷಕರು ಬದ್ಧತೆಯಿಂದ ಪಾಠ ಮಾಡುತ್ತಿದ್ದಾರೆ. ಅದಕ್ಕಾಗಿ ಉತ್ತಮ ಫಲಿತಾಂಶ ಬರುತ್ತಿದೆ. ಮಕ್ಕಳು ಅಂಕ ತೆಗೆದರೆ ಸಾಲದು, ಸಮಾಜಕ್ಕೆ ಆಸ್ತಿ ಆಗಬೇಕು’ ಎಂದರು.

ಸಂವಾದ: ಸಂವಾದದಲ್ಲಿ ಪ್ರತಿಕ್ರಿಯಿಸಿದ ಸಚಿವರು, ‘ಶಾಲೆ ಅಂಕಾಲಯ ಆಗಬಾರದು. ಅದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು.

‘ಮೌಲ್ಯಮಾಪನದಲ್ಲಿ ಉಡಾಫೆ ತೋರಿದರೆ, ವಿದ್ಯಾರ್ಥಿಗಳ ಬದುಕಿನ ಜೊತೆ ಆಟವಾಡಿದಂತೆ. ಆ ಹಕ್ಕು ಯಾರಿಗೂ ಇಲ್ಲ’ ಎಂದು ಎಚ್ಚರಿಸಿದರು.

‘ಮಕ್ಕಳು ಇಷ್ಟಪಟ್ಟು ಕಲಿಯಬೇಕು. ಕಷ್ಟಪಟ್ಟು ಅಲ್ಲ. ಹೀಗಾಗಿ, ಅಧಿಕಾರಿಗಳು ಶಿಕ್ಷಕರ ಮೇಲೆ, ಶಿಕ್ಷಕರು ಮಕ್ಕಳ ಮೇಲೆ ಒತ್ತಡ ಹಾಕಬಾರದು’ ಎಂದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂಪೋಷಕರ ನಡುವೆ ಶಿಕ್ಷಣ ಸಚಿವರಿಗೆ ಕತ್ತಿಯ ಅಲಗಿನ ಮೇಲಿನ ನಡಿಗೆಯಾಗಿದೆ. ಪೋಷಕರ ವಿಶ್ವಾಸ ಗಳಿಸಿದ ಶಿಕ್ಷಣ ಸಂಸ್ಥೆಗಳಿಗೆ ಈ ಸಮಸ್ಯೆ ಇಲ್ಲ. ಉತ್ತಮ ಪರಿಹಾರ ಕಂಡುಕೊಂಡರೆ ಸಂಪೂರ್ಣ ಬೆಂಬಲ ಇದೆ’ ಎಂದರು.

‘ಸಂಬಳ ನೀಡಿಲ್ಲ’ ಎಂಬ ಖಾಸಗಿ ಶಾಲೆಯ ಶಿಕ್ಷಕರ ಅಳಲು.‘ಸ್ವಲ್ಪ ಶುಲ್ಕ ಬಾಕಿ ಇರಿಸಿದ್ದಾನೆ’ ಎಂದು ಆಡಳಿತ ಮಂಡಳಿ ಕಿರಿಕಿರಿ ಮಾಡಿದ ಕಾರಣ ಆತ್ಮಹತ್ಯೆಗೆ ಯತ್ನಿಸಿದ ಬಾಲಕ. ಮಕ್ಕಳಿಂದ ಶುಲ್ಕ ಬಂದರೂ ವೇತನ ನೀಡದ ಆಡಳಿತ ಮಂಡಳಿ. ಇಂತಹ ಹಲವಾರು ಸಮಸ್ಯೆಗಳು ಗಮನಕ್ಕೆ ಬಂದಿವೆ. ಕೋವಿಡ್‌ ಸಂದಿಗ್ಧತೆ ನಿಭಾಯಿಸಲು ಸಾಕಷ್ಟು ಯತ್ನಿಸುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶಿಕ್ಷಣ ಸಂಸ್ಥೆಗಳು ನವೀಕರಣಕ್ಕೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ. ಆದರೆ, ಅದರ ಹೆಸರಲ್ಲಿ ಬೇರೆ ಅಧಿಕಾರಿಗಳು ಶ್ರೀಮಂತ ಆಗುತ್ತಿರುವ ಬಗ್ಗೆ ದೂರುಗಳಿದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ನಿಮ್ಮ ಇಲಾಖೆಯಲ್ಲಿ’ ಎಂದು ಶಿಕ್ಷಕರೊಬ್ಬರು ಉಲ್ಲೇಖಿಸಿದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನಾನೇ ತಾತ್ಕಾಲಿಕ. ನೀವೇ ಕಾಯಂ. ಆದರೂ ನೀವು ‘ನಮ್ಮ ಇಲಾಖೆ’ ಎಂದು ಏಕೆ ಹೇಳುತ್ತಿಲ್ಲ?’ ಎಂದು ಪ್ರಶ್ನಿಸಿದರು.

ರಾಮಕೃಷ್ಣ ಭಟ್ಧರ್ಮಸ್ಥಳ, ಹರಿಪ್ರಸಾದ್ ಪುತ್ತೂರು, ಪ್ರಕಾಶ್ ಮೂಡಿತ್ತಾಯ ಸುಳ್ಯ, ಜಯಶ್ರೀ, ಜಯರಾಮ ರೈ, ಜಯಮಾಲ ವಿ.ಎಂ. ಪುತ್ತೂರು, ಸ್ಟಾನ್ಲಿ ತೌರೊ, ಝೆನಿತ್, ವೇದಾವತಿ ಕಡಬ, ಗೋಪಿನಾಥ ಸುಳ್ಯ ಪ್ರಶ್ನೆಗಳನ್ನು ಕೇಳಿದರು.

ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್ ದಿವಾಕರ ಪಾಂಡೇಶ್ವರ, ರಂಗನಾಥ ಭಟ್, ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ಡಿಡಿಪಿಐ ಮಲ್ಲೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT