ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮರ್ಪಕ ರಸ್ತೆಯಿಂದ ನಗರದ ಅಭಿವೃದ್ಧಿ: ಶಾಸಕ ಅಶೋಕ್ ಕುಮಾರ್ ರೈ

Published 11 ಮೇ 2024, 14:18 IST
Last Updated 11 ಮೇ 2024, 14:18 IST
ಅಕ್ಷರ ಗಾತ್ರ

ಪುತ್ತೂರು: ನಗರ ಬೆಳೆಯಬೇಕಾದರೆ ರಸ್ತೆಗಳು ಸಮರ್ಪಕವಾಗಿರಬೇಕು. ಎಲ್ಲೆಲ್ಲಿ ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳು, ತಕರಾರುಗಳಿವೆಯೋ ಅವುಗಳನ್ನು ಗುರುತಿಸಿ ನ್ಯಾಯಮಾರ್ಗದಲ್ಲಿ ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಪ್ಪಳಿಗೆಯ ಅಂಬಿಕಾ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ರಸ್ತೆಯ ಬಗೆಗಿದ್ದ ತಕರಾರನ್ನು ಮಾತುಕತೆಯ ಮೂಲಕ ಪರಿಹರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರಿನ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಕ್ಯಾಂಪಸ್‌ಗೆ ತೆರಳುವ ವಿಸ್ತರಿತ ರಸ್ತೆಯನ್ನು ಶನಿವಾರ ಅವರು ಉದ್ಘಾಟಿಸಿ ಮಾತನಾಡಿದರು.

‘ಅಂಬಿಕಾ ಶಿಕ್ಷಣ ಸಂಸ್ಥೆ ಪುತ್ತೂರಿನ ಹೆಮ್ಮೆಗಳಲ್ಲೊಂದು. ಹಾಗಾಗಿ ಸಂಸ್ಥೆಗೆ ನ್ಯಾಯಯುತವಾಗಿ ನೀಡಬಹುದಾದ ಸಹಕಾರವನ್ನು ಸರ್ಕಾರದಿಂದ ನೀಡಲಾಗುತ್ತದೆ. ಸದ್ಯದಲ್ಲೇ ವಿಸ್ತರಿತ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗುವುದು’ ಎಂದು ಹೇಳಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ‌ಮಾತನಾಡಿ, ಹನ್ನೊಂದು ವರ್ಷಗಳಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿದ್ದರೂ ರಸ್ತೆ ವಿಸ್ತರಣೆಗೆ ವ್ಯವಸ್ಥಿತ ಜಾಲವೊಂದು ಕಾರ್ಯನಿರ್ವಹಿಸುತ್ತಿತ್ತು. ಕಿರಿದಾದ ರಸ್ತೆಯಲ್ಲಿ ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳೂ, ಪೋಷಕರು ನಡೆಯಬೇಕಾದ ಸ್ಥಿತಿ ಇತ್ತು. ಶಾಸಕರು ಸಮಸ್ಯೆಯನ್ನು ಬಗೆಹರಿಸಿ ಅನುಕೂಲ ಕಲ್ಪಿಸಿದ್ದಾರೆ ಎಂದರು.

ವಕೀಲ ಎನ್.ಕೆ.ಜಗನ್ನಿವಾಸ ರಾವ್, ಸ್ಥಳೀಯ ಮುಖಂಡರಾದ ಶಿವರಾಮ ಆಳ್ವ ಬಳ್ಳಮಜಲು, ಜಯಪ್ರಕಾಶ್ ಬದಿನಾರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್.ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ ಶೆಟ್ಟಿ, ಪ್ರಸನ್ನ ಭಟ್, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಕ್ಯಾಂಪಸ್ ನಿರ್ದೇಶಕ ರಾಜೇಂದ್ರ ಭಾಗವಹಿಸಿದ್ದರು.

ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ.ಸ್ವಾಗತಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT