ಮಂಗಳೂರು | ಗಾಂಜಾ ಮಾರಾಟ: ಮತ್ತಿಬ್ಬರು ವೈದ್ಯ ವಿದ್ಯಾರ್ಥಿಗಳ ಬಂಧನ

ಮಂಗಳೂರು: ಗಾಂಜಾ ಸೇವನೆ ಹಾಗೂ ಮಾರಾಟ ಸಂಬಂಧ ಮತ್ತಿಬ್ಬರು ವೈದ್ಯಕೀಯ ವಿದ್ಯಾರ್ಥಿಗಳನ್ನು ನಗರದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 15 ಮಂದಿಯ ಬಂಧನವಾದಂತಾಗಿದೆ.
ಬಂಧಿತರನ್ನು ಅತ್ತಾವರದ ನಿವಾಸಿ ಡಾ.ರಾಘವ ದತ್ತ ಹಾಗೂ ಫಳ್ನೀರ್ ನಿವಾಸಿ ಡಾ.ಬಾಲಾಜಿ ಎಂದು ಗುರುತಿಸಲಾಗಿದೆ. ಡಾ.ರಾಘವ ದತ್ತ ಅರಿವಳಿಕೆ ವಿಜ್ಞಾನದಲ್ಲಿ ಸ್ಮಾತಕೋತ್ತರ ಪದವಿ ವಿದ್ಯಾರ್ಥಿ. ಡಾ.ಬಾಲಾಜಿ ಜನರಲ್ ಮೆಡಿಸೀನ್ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ.
ಅನಿವಾಸಿ ಭಾರತೀಯ ಪ್ರಜೆ ಕಿಶೋರಿಲಾಲ್ ರಾಮ್‌ಜಿ ಷಾ ಬಂಧನದಿಂದ ನಗರದ ವೈದ್ಯಕೀಯ ಕಾಲೇಜುಗಳ ವೈದ್ಯ ಹಾಗೂ ವೈದ್ಯ ವಿದ್ಯರ್ಥಿಗಳೂ ಗಾಂಜಾ ಮಾರಾಟ ಮತ್ತು ಸೇವನೆ ಜಾಲದಲ್ಲಿ ಸಕ್ರಕಿಯರಾಗಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ನಗರದ ವೈದ್ಯಕೀಯ ಕಾಲೇಜುಗಳ ಇಬ್ಬರು ವೈದ್ಯರು, ಏಳು ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ಆರೋಪಿಗಳನ್ನು ಮೊದಲು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ವೈದ್ಯ ವಿದ್ಯಾರ್ಥಿನಿಯರು ಇದ್ದರು. ಬಳಿಕ ಗುರುವಾರ ಮತ್ತೆ ಮೂವರನ್ನು ಬಂಧಿಸಿದ್ದರು.
ಅನಿವಾಸಿ ಭಾರತೀಯ, ಇಂಗ್ಲೆಂಡ್‌ನ ಪ್ರಜೆ ನೀಲ್‌ಕಿಶೋರ್ ರಾಮ್‌ಜಿ ಷಾ (38), ನಗರದ ವೈದ್ಯಕೀಯ ಕಾಲೇಜೊಂದರ ವೈದ್ಯಕೀಯ ಅಧಿಕಾರಿ ಕೇರಳದ ಡಾ.ಸಮೀರ್ (32), ಶಸ್ತ್ರಚಿಕಿತ್ಸಕ, ತಮಿಳುನಾಡಿನ ಡಾ.ಮಣಿಮಾರನ್ ಮುತ್ತು (28), ಎಂಬಿಬಿಎಸ್ ಇಂಟರ್ನ್‌ಷಿಪ್ ವಿದ್ಯಾರ್ಥಿನಿ ಕೇರಳದ ನದಿಯಾ ಸಿರಾಜ್ (24), ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಮಹಾರಾಷ್ಟ್ರದ ಪುಣೆಯ ಇರಾ ಬಾಸಿನ್ (23), ನಾಲ್ಕನೇ ವರ್ಷದ ಬಿಡಿಎ ವಿದ್ಯಾರ್ತಿನಿ ಪಂಜಾಬಿನ ಚಂಡೀಗಢದ ರಿಯಾ ಚಡ್ಡಾ (22), ಎಂಬಿಬಿಎಸ್ ಇಂಟರ್ನ್‌ಷಿಪ್ ವಿದ್ಯಾರ್ಥಿನಿ ಆಂಧ್ರಪ್ರದೇಶದ ವರ್ಷಿಣಿ ಪ್ರಾಥಿ (26), ಮನೋವಿಜ್ಞಾನ (ಸೈಕಿಯಾಟ್ರಿ) ಮೂರನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಚಂಡೀಗಢದ ಭಾನು ದಹಿಯಾ (27), ಎಂ.ಎಸ್. ಆರ್ಥೊ ಮೂರನೇ ವರ್ಷದ ವಿದ್ಯಾರ್ಥಿ ದೆಹಲಿಯ ಕ್ಷಿತಿಜ್ ಗುಪ್ತ (25) ಹಾಗೂ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಬಂಟ್ವಾಳ ತಾಲ್ಲೂಕಿನ ಮಾರಿಪಳ್ಳದ ಮಹಮ್ಮದ್ ರವೂಫ್ ಅಲಿಯಾಸ್ ಗೌಸ್ (34) ವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು.
ನಗರದ ಹಣ್ಣಿನ ಅಂಗಡಿ ವ್ಯಾಪಾರಿ ಕಸಬ ಬೆಂಗ್ರೆಯ ನಿವಾಸಿ ಮಹಮ್ಮದ್ ಅಫ್ರಾರ್, ಡಿ–ಫಾರ್ಮಾ ಅಂತಿಮ ವರ್ಷದ ವಿದ್ಯಾರ್ಥಿ ಕೇರಳದ ಕೊಚ್ಚಿಯ ಆಡೋನ್ ದೇವ್ ಹಗೂ ಪ್ಯಾಥೋಲಜಿ ಎಂಡಿ ವಿದ್ಯಾರ್ಥಿ ತುಮಕೂರಿನ ಹರ್ಷ ಕುಮಾರ್‌ನನ್ನು ಗುರುವಾರ ಬಂಧಿಸಲಾಗಿತ್ತು.
ಚರಸ್, ಗಾಂಜಾ ವಶ– ಮೂವರ ಬಂಧನ
ಮಂಗಳೂರು: ಹಿಮಾಚಲ ಪ್ರದೇಶದಿಂದ ಚರಸ್ ಹಾಗೂ ಗಾಂಜಾವನ್ನು ಕಳ್ಳಸಾಗಣೆ ಮಾಡಿ ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಿದ ಮೂವರು ಆರೋಪಿಗಳನ್ನು ನಗರದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿಗಳಿಂದ 500 ಗ್ರಾಂ ಚರಸ್ ಹಾಗೂ 1 ಕೆ.ಜಿ. ಗಾಂಜಾ, ಅದರ ಸಾಗಾಟಕ್ಕೆ ಬಳಸಿದ ರಿಡ್ಜ್ ಕಾರು ಹಾಗೂ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹ 8 ಲಕ್ಷ ಎಂದು ಅಂದಾಜಿಸಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕು ಬಜಗೋಳಿಯ ಸುಕೇತ್ ಕಾವ ಅಲಿಯಾಸ್ ಚುಕ್ಕಿ (33), ಕೊಯಮತ್ತೂರಿನ ಕೆ.ಅರವಿಂದ (24), ಕಾರ್ಕಳ ಪುಲ್ಕೇರಿಯ ಸುನಿಲ್ (32) ಬಂಧಿತರು. ಆರೋಪಿಗಳಲ್ಲಿ ಸುಕೇತ್ ಪ್ರವಾಸಿ ಮಾರ್ಗದರ್ಶಿಯಾಗಿ, ಅರವಿಂದ್ ವಸ್ತ್ರವಿನ್ಯಾಸಗಾರನಾಗಿ ಹಾಗೂ ಸುನಿಲ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು.
‘ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪಾರ್ವತಿ ಕಣಿವೆಯಲ್ಲಿ ಬೆಳೆದ ಗಾಂಜಾವನ್ನು ಮತ್ತು ಅದರಿಂದ ತಯಾರಿಸಿದ ಚರಸ್ ಅನ್ನು ಆರೋಪಿಗಳು ಅಲ್ಲಿನ ಗುಡ್ಡಗಾಡು ಜನರಿಂದ ಖರೀದಿಸಿ, ಕಳ್ಳಸಾಗಣೆ ಮಾಡಿದ್ದರು. ವ್ಯಾಪಾರಿಗಳು ಹಾಗೂ ಕೆಲವು ಉದ್ಯಮಿಗಳ ಮೂಲಕ ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಿದ್ದರು‘ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ವಶ: ಇನ್ನೊಂದು ಪ್ರಕರಣದಲ್ಲಿ, ಸ್ವಿಫ್ಟ್ ಕಾರಿನಲ್ಲಿ 10.2 ಕೆ.ಜಿ. ಗಾಂಜಾ ಸಾಗಿಸಿದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ವಿಜಯ್ ಕುಮಾರ್ (24) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.