ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಚ್‌ಡಿ ವಿದ್ಯಾರ್ಥಿನಿ ನಾಪತ್ತೆ ಹಿಂದೆ ಮಾದಕ ವಸ್ತು ಜಾಲ; ಬಜರಂಗದಳ ಆರೋಪ

Published 25 ಫೆಬ್ರುವರಿ 2024, 14:29 IST
Last Updated 25 ಫೆಬ್ರುವರಿ 2024, 14:29 IST
ಅಕ್ಷರ ಗಾತ್ರ

ಉಳ್ಳಾಲ: ಪಿಎಚ್‌ಡಿ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಘಟನೆ ನಡೆದ ವಾರದ ಬಳಿಕ ಫೆ.24ರಂದು ವಿದ್ಯಾರ್ಥಿನಿ ಬಳಸುತ್ತಿದ್ದ  ಸ್ಕೂಟರ್‌ ಸುರತ್ಕಲ್‌ ಬಳಿ ಪತ್ತೆಯಾಗಿದೆ. ಪುತ್ತೂರು ಮೂಲದ ಶಾರೂಕ್‌ ಎಂಬಾತ ವಿದ್ಯಾರ್ಥಿನಿಯನ್ನು ಅಪಹರಿಸಿರುವ ಸಾಧ್ಯತೆ ಇದ್ದು, ಆತನನ್ನು ಬಂಧಿಸಬೇಕು ಎಂದು ಬಜರಂಗದಳ ಒತ್ತಾಯಿಸಿದೆ. 

ಪುತ್ತೂರು ನಿವಾಸಿ ದಿ. ಸತೀಶ್‌ ಹೆಬ್ಬಾರ್‌ ಪುತ್ರಿ ಚೈತ್ರಾ ಹೆಬ್ಬಾರ್‌ (27) ನಾಪತ್ತೆಯಾದವರು. ಕೋಟೆಕಾರು ಮಾಡೂರು ಬಳಿಯ ಪಿಜಿಯಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿ ಆಹಾರ ಭದ್ರತೆ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದರು. ಫೆ.17ರಂದು ಪಿ.ಜಿಯಿಂದ ಹೊರಗೆ ಹೋಗಿದ್ದ ಅವರು ಕಾಲೇಜಿಗೂ ಹೋಗದೆ, ಮರಳಿ ಪಿ.ಜಿಗೂ ಬಾರದೆ ನಾಪತ್ತೆಯಾಗಿದ್ದರು. ವಿದ್ಯಾರ್ಥಿನಿಯ ಚಿಕ್ಕಪ್ಪ ಪ್ರಕಾಶ್‌ ಹೆಬ್ಬಾರ್‌ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ನಾಪತ್ತೆಯಾದ ಚೈತ್ರಾ
ನಾಪತ್ತೆಯಾದ ಚೈತ್ರಾ

‘ವಿದ್ಯಾರ್ಥಿನಿ ಇದ್ದ ಪಿ.ಜಿಗೆ ಪುತ್ತೂರಿನ ಶಾರೂಕ್‌ ಎಂಬಾತ ಬಂದು ಹೋಗುತ್ತಿದ್ದ. ಆತ ಡ್ರಗ್‌  ಪೆಡ್ಲರ್‌ ಆಗಿರುವ ಸಾಧ್ಯತೆ ಇದೆ. ಸ್ಥಳೀಯರು ಇದನ್ನು ಬಜರಂಗದಳದ ಗಮನಕ್ಕೆ ತಂದಿದ್ದರು. ಸಂಘಟನೆ ವತಿಯಿಂದ ವಿದ್ಯಾರ್ಥಿನಿಯ ಚಿಕ್ಕಪ್ಪನನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ಕರೆದು ಮಾತನಾಡುವುದಾಗಿ ತಿಳಿಸಿದ ಮರುದಿನವೇ ವಿದ್ಯಾರ್ಥಿನಿ ಪಿಜಿಯಿಂದ ನಾಪತ್ತೆಯಾಗಿದ್ದಾಳೆ. ಶಾರೂಕ್‌ನ ಡ್ರಗ್ಸ್‌ ಜಾಲವೇ ವಿದ್ಯಾರ್ಥಿನಿಯನ್ನು ಅಪಹರಿಸಿರುವ ಸಾಧ್ಯತೆಯಿದೆ. ಶಾರುಕ್‌ನನ್ನು ತಕ್ಷಣ ಬಂಧಿಸಬೇಕು. ಮೂರು ದಿನಗಳ ಒಳಗೆ ಆರೋಪಿಯನ್ನು ಬಂಧಿಸದಿದ್ದರೆ ಬಜರಂಗದಳ ಹೋರಾಟ ತೀವ್ರಗೊಳಿಸಲಿದೆ’ ಎಂದು ಸಂಘಟನೆಯ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್‌ ಮಾಡೂರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT