ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವಿದ್ಯಾರ್ಥಿಗಳಿಗೆ ‘ಪ್ರಗತಿ’ಯ ಸ್ಫೂರ್ತಿ

ಪಿಯು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಉಚಿತ ಕೋಚಿಂಗ್
Last Updated 16 ಸೆಪ್ಟೆಂಬರ್ 2022, 6:33 IST
ಅಕ್ಷರ ಗಾತ್ರ

ಮಂಗಳೂರು: ಸರ್ಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಓದುವ ಪದವಿಪೂರ್ವ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಬರೆಯುವ ಕನಸಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ‘ಪ್ರಗತಿ’ಯ ಮೂಲಕ ಬಣ್ಣ ತುಂಬಿದೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹಂಬಲಿಸುವ ವಿದ್ಯಾರ್ಥಿಗಳು ದುಬಾರಿ ಶುಲ್ಕ ನೀಡಿ ಖಾಸಗಿ ಕಾಲೇಜುಗಳಿಗೆ ಸೇರಿ, ವಿಶೇಷ ತರಬೇತಿ ಪಡೆಯುತ್ತಾರೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಓದುವ ಹೆಚ್ಚಿನ ವಿದ್ಯಾರ್ಥಿಗಳಿಗೆ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಈ ಕನಸು ಕಮರಿ ಹೋಗುತ್ತದೆ. ಇಂತಹ ವಿದ್ಯಾರ್ಥಿಗಳ ಸಾಧನೆಗೆ ನೆರವಾಗಲು ಜಿಲ್ಲಾ ಪಂಚಾಯಿತಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವಲ್ಲಿ ಮುಂಚೂಣಿಯಲ್ಲಿರುವ ಸಿಎಫ್‌ಎಲ್ (ಸೆಂಟರ್ ಫಾರ್ ಅಡ್ವಾನ್ಸ್ ಲರ್ನಿಂಗ್) ಕಾಲೇಜಿನ ಜತೆ ಕೈಜೋಡಿಸಿದೆ.

ಸಿಎಫ್‌ಎಎಲ್ ಕಾಲೇಜಿನ ಪ್ರಾಧ್ಯಾಪಕರು ಆಯ್ದ ವಿದ್ಯಾರ್ಥಿಗಳಿಗೆ ಜೆಇಇ, ಸಿಇಟಿ, ನೀಟ್‌ನಂತಹ ಪ್ರವೇಶ ಪರೀಕ್ಷೆಗಳ ಕೋಚಿಂಗ್ ನೀಡುತ್ತಿದ್ದಾರೆ. ಸಂಸ್ಥೆಯ ಸಿಎಸ್‌ಆರ್‌ ಚಟುವಟಿಕೆಯ ಭಾಗವಾಗಿ ಸಿಎಫ್‌ಎಲ್ ಎರಡು ವರ್ಷಗಳ ಕೋಚಿಂಗ್‌ ಅನ್ನು ಮಂಗಳೂರು ತಾಲ್ಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದೆ.

ಈ ಸಂಬಂಧ ಈಗಾಗಲೇ ತಾಲ್ಲೂಕಿನ 12, ಸರ್ಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಸುಮಾರು 2,500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 60 ಮಕ್ಕಳನ್ನು ಆಯ್ಕೆ ಮಾಡಿ, 37 ಮಕ್ಕಳನ್ನು ಅಂತಿಮಗೊಳಿಸಲಾಗಿದೆ. ಕಾಟಿಪಳ್ಳ ಸರ್ಕಾರಿ ಪದವಿಪೂರ್ವ ಕಾಲೇಜು, ಕಾವೂರು ಪಿಯು ಕಾಲೇಜು, ಕಾರ್‌ಸ್ಟ್ರೀಟ್ ಪಿಯು ಕಾಲೇಜು, ಬಲ್ಮಠ ಪಿಯು ಕಾಲೇಜು, ಬೆಂದೂರು ಪಿಯು ಕಾಲೇಜು, ಬೆಸಂಟ್ ಪಿಯು ಕಲೇಜು, ಕೆನರಾ ಪಿಯು ಕಾಲೇಜು, ಸುರತ್ಕಲ್ ಗೋವಿಂದದಾಸ್ ಪಿಯು ಕಾಲೇಜು, ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನ ಒಟ್ಟು 37 ವಿದ್ಯಾರ್ಥಿಗಳು ಆಯ್ಕೆಯಾಗಿ, ಕೋಚಿಂಗ್ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ಸಂಸ್ಥೆಯ ಉಳಿದ ವಿದ್ಯಾರ್ಥಿಗಳ ಜತೆಯೇ ತರಬೇತಿ ಪಡೆಯುತ್ತಾರೆ.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಕನ್ನಡ ಮಾಧ್ಯಮದಲ್ಲಿ ಕಲಿತು ಪದವಿಪೂರ್ವ ಶಿಕ್ಷಣಕ್ಕೆ ಬರುತ್ತಾರೆ. ಅವರಲ್ಲಿ ಅನೇಕರಿಗೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಬರೆಯಲು ಸರಿಯಾದ ಕೋಚಿಂಗ್ ಸಿಕ್ಕಿರುವುದಿಲ್ಲ. ಈ ಕಾರಣಕ್ಕೆ ಸಿಎಫ್‌ಎಎಲ್ ಜತೆ ಮಾತುಕತೆ ನಡೆಸಿ, ವಿಶೇಷ ಕೋಚಿಂಗ್ ಕೊಡಿಸಲಾಗುತ್ತಿದೆ. ಸಂಸ್ಥೆಯು ತನ್ನ ಸಿಎಸ್‌ಆರ್‌ ಚಟುವಟಿಕೆಯ ಭಾಗವಾಗಿ ಈ ಚಟುವಟಿಕೆ ನಡೆಸುತ್ತಿದೆ’ ಎಂದು ಯೋಜನೆಗೆ ಪ್ರೇರಣೆ ನೀಡುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಪ್ರತಿಕ್ರಿಯಿಸಿದರು.

‘ಸಂಸ್ಥೆಯ ಪೋರ್ಟಲ್‌ನಲ್ಲಿ ಈಗಾಗಲೇ 1,000ಕ್ಕೂ ಹೆಚ್ಚು ವಿಡಿಯೊಗಳು, 2 ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳು, ಅಣಕು ಪರೀಕ್ಷೆಗಳನ್ನು ಅಪ್‌ಲೋಡ್ ಮಾಡಿದ್ದು, ಅದನ್ನು ರಾಜ್ಯದ ಎಲ್ಲೆಡೆ ಇರುವ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡುತ್ತಿದ್ದೇವೆ. ಇದರ ಮುಂದುವರಿದ ಭಾಗವಾಗಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಮಕ್ಕಳಿಗೆ ನೆರವಾಗಲು ಈ ಕೋಚಿಂಗ್ ಆರಂಭಿಸಿದ್ದೇವೆ. ಸಾಮಾನ್ಯವಾಗಿ ಇಂತಹ ತರಬೇತಿ ಪಡೆಯಲು ವಾರ್ಷಿಕವಾಗಿ ₹ 90ಸಾವಿರದಿಂದ ₹ 1 ಲಕ್ಷದಷ್ಟು ವೆಚ್ಚ ತಗಲುತ್ತದೆ. ಕೋಚಿಂಗ್‌ಗೆ ಆಯ್ಕೆಯಾದ ಮಕ್ಕಳಿಗೆ ಇದನ್ನು ಉಚಿತವಾಗಿ ನೀಡಲಾಗುತ್ತದೆ. ಕೆಲವರು ಆನ್‌ಲೈನ್‌ ಕೋಚಿಂಗ್, ಇನ್ನು ಕೆಲವರು ಆಫ್‌ಲೈನ್‌ ತರಬೇತಿ ಪಡೆಯುತ್ತಿದ್ದಾರೆ’ ಎಂದು ಸಿಎಫ್‌ಎಎಲ್ ಉಪ ಪ್ರಾಂಶುಪಾಲ ಗೌರೀಶ್ ರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT