ಪ್ರಜಾವಾಣಿ ಸಾಧಕರ ಸಮ್ಮಿಲನ: ಚಿಮ್ಮಿದ ಉಲ್ಲಾಸ

ಮಂಗಳೂರು: ಸಂಗೀತ, ನೃತ್ಯ, ಸಮಾಜಸೇವೆ, ಪ್ರಗತಿಪರ ಕೃಷಿ, ಸ್ವ ಉದ್ಯಮ, ರಕ್ತದಾನ, ಪ್ರಾಣಿ ಪ್ರೇಮ ಹೀಗೆ ನಾನಾ ಕ್ಷೇತ್ರಗಳಲ್ಲಿ ತನು–ಮನದಿಂದ ಸೇವೆ ನೀಡುತ್ತಿರುವ ನಮ್ಮ ನಡುವಿನ ಸಾಧಕರ ಸಮ್ಮಿಲನ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಪರಸ್ಪರು ತಮ್ಮನ್ನು ಪರಿಚಯಿಸಿಕೊಂಡು ಸಂಭ್ರಮಿಸಿದರು. ಚೈತನ್ಯದ ಚಿಲುಮೆಯಂತಿರುವ ಅಕ್ಷರ ಋಷಿ ಹರೇಕಳ ಹಾಜಬ್ಬ ಅವರು ಈ ಸಡಗರವನ್ನು ಇಮ್ಮಡಿಸಿದ್ದರು. ಸಿನಿಮಾ ತಾರೆಯರಂತೆ ಹಾಜಬ್ಬರ ಜತೆ ಸೆಲ್ಫಿ ತೆಗೆದುಕೊಳ್ಳಲು ಯುವಕರು– ಹಿರಿಯರೆನ್ನದೆ ಎಲ್ಲರೂ ಸರದಿಯಲ್ಲಿ ನಿಂತಿದ್ದರು...
‘ಪ್ರಜಾವಾಣಿ’ ಪತ್ರಿಕೆಗೆ ಅಮೃತ ಮಹೋತ್ಸವ ವರ್ಷಾಚರಣೆ ಖುಷಿ, ಸಾಧಕರಿಗೆ ತಮ್ಮ ಸಾಧನೆಯನ್ನು ಗುರುತಿಸಿದ ಪತ್ರಿಕಾ ಕಚೇರಿಯಲ್ಲಿ ಸಮಯ ಕಳೆಯುವ ಪುಳಕ.
ಇಂತಹವೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ‘ಪ್ರಜಾವಾಣಿ’ ಮಂಗಳೂರು ಕಚೇರಿ. ಸೋಮವಾರ ಆಯೋಜಿಸಿದ್ದ ‘ಪ್ರಜಾವಾಣಿ ಸಾಧಕರು–2023’ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಆಯ್ಕೆ ಮಾಡಿದ್ದ ಸಾಧಕರು ಭಾಗವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಈ ಸಾಧಕರನ್ನು ಸನ್ಮಾನಿಸಿದರು.
ಆರಂಭದಲ್ಲಿ ‘ಓಂಕಾರ ರೂಪದ ಚಿದಾನಂದ ಪರಬ್ರಹ್ಮ..’ ಪ್ರಾರ್ಥನೆ ಹಾಡಿ, ಅಧ್ಯಾತ್ಮ ಅಲೆ ಮೂಡಿಸಿದ ಗಾಯಕ ಹಾಗೂ ಸಾಧಕರಲ್ಲಿ ಒಬ್ಬರಾದ ಜಗದೀಶ್ ಶಿವಪುರ ಅವರು, ಸನ್ಮಾನದ ಸಂತಸದಲ್ಲಿ ‘ಜೇನಿನ ಹೊಳೆಯೋ ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿ ನುಡಿಯೋ....’ ಹಾಡನ್ನು ತಮ್ಮ ಕಂಠಸಿರಿಯಲ್ಲಿ ಪ್ರಸ್ತುತಪಡಿಸುವ ಮೂಲಕ ಸಂಗೀತದ ರಸದೌತಣ ಉಣಬಡಿಸಿದರು.
ಸಮಾಜ ಸೇವೆಗೆ ಮೀಸಲಿಡಿ: ‘ಹಲವಾರು ಬಾರಿ ಸಾಧಕರು ಪ್ರಚಾರದ ಗೊಡವೆ ಇಲ್ಲದೆ ಮೂಲೆಗುಂಪಾಗುತ್ತಾರೆ. ಸಾಧನೆ ಮಾಡದವರು ಅಬ್ಬರದ ಪ್ರಚಾರ ಪಡೆದು ಮೆರೆಯುತ್ತಾರೆ. ಆದರೆ, ‘ಪ್ರಜಾವಾಣಿ’ ನೈಜ ಸಾಧಕರನ್ನು ಗುರುತಿಸಿ ಸನ್ಮಾನಿಸಿದೆ. ಮಾಧ್ಯಮ ಗುರುತಿಸಿದ್ದರಿಂದ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ನಮ್ಮ ಆಶ್ರಮದಲ್ಲಿ 110ಕ್ಕೂ ಹೆಚ್ಚು ನಿರ್ಗತಿಕರು, ನಿರಾಶ್ರಿತರು ಇದ್ದಾರೆ. 1,000 ನಿರ್ಗತಿಕರಿಗೆ ಆಶ್ರಮ ಕಟ್ಟುವ ಯೋಜನೆ ರೂಪಿಸಿದ್ದೇವೆ. ಎಲ್ಲರೂ ತಾವು ದುಡಿದ ಶೇ 1ರಷ್ಟು ಆದಾಯವನ್ನು ಸಮಾಜ ಸೇವೆಗೆ ಮೀಸಲಿಡಬೇಕು’ ಎನ್ನುವಾಗ ಉಡುಪಿ ಜಿಲ್ಲೆ ಮಣಿಪಾಲದ ಹೊಸಬೆಳಕು ಸೇವಾ ಟ್ರಸ್ಟ್ ಸ್ಥಾಪಕ ವಿನಯಚಂದ್ರ ಸಾಸ್ತಾನ ಅವರಿಗೆ ತೃಪ್ತಭಾವ.
‘1987ರಿಂದ ಸ್ಥಾಪನೆಯಾದ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳ ಮೂಲಕ ಜನರನ್ನು ತಲುಪಿದೆ. ನಮ್ಮ ಸಂಸ್ಥೆಯಲ್ಲಿ 200 ಸದಸ್ಯರು, 50 ಸದಸ್ಯೆಯರು ಇದ್ದಾರೆ. ಸಂಸ್ಥೆ ಸಾಮಾಜಿಕ ಚಟುವಟಿಕೆ ಗುರುತಿಸಿದ್ದಕ್ಕೆ ಪತ್ರಿಕೆ ಧನ್ಯವಾದಗಳು’ ಎಂದು ಕ್ಲಬ್ ಅಧ್ಯಕ್ಷ ಸಂತೋಷ್ ದೇವಾಡಗ ಸಂತಸ ವ್ಯಕ್ತಪಡಿಸಿದರು.
‘ನಾನು ಎಂದಿಗೂ ಸೋಪ್ ಬಳಸಿ ಸ್ನಾನ ಮಾಡುವುದಿಲ್ಲ. ಮನೆ ಸಮೀಪ ನೆಟ್ಟಿದ್ದ ಗಿಡಗಳು ಒಣಗುವುದನ್ನು ಕಂಡು ಮರುಕಪಟ್ಟು, ಸ್ನಾನ ಮಾಡಿದ ನೀರನ್ನು ಪ್ರತಿದಿನ ಒಂದೊಂದು ಗಿಡಕ್ಕೆ ಹಾಕುತ್ತಿದ್ದೆ. ಈಗ ಅವು ಬೆಳೆದು ಹೆಮ್ಮರವಾಗಿವೆ. ಸಣ್ಣ ಸಣ್ಣ ವಿಚಾರಗಳಲ್ಲಿ ದೊಡ್ಡ ಸಂದೇಶ ಇರುತ್ತದೆ’ ಎಂದು ಚಿಕ್ಕಮಗಳೂರು ಜಿಲ್ಲೆ ಬೀರೂರಿನ ಬಿ.ಸಿ. ವೀರಭದ್ರಪ್ಪ ಮಾರ್ಮಿಕವಾಗಿ ಹೇಳಿದರು.
‘ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯು ಹಲವಾರು ಮಕ್ಕಳಿಗೆ ವಿದ್ಯಾಭ್ಯಾಸ, ಕ್ರೀಡಾ ತರಬೇತಿಗೆ ನೆರವಾಗಿದೆ. ನಾವು ದುಡಿದ ಹಣವನ್ನೇ ಈ ಕಾರ್ಯಕ್ಕೆ ಬಳಸುತ್ತೇವೆ. ಕ್ರೀಡಾ ಕ್ಷೇತ್ರವನ್ನೂ ಗುರುತಿಸಿದ ಪತ್ರಿಕೆ ಕಾರ್ಯ ಶ್ಲಾಘನೀಯ’ ಎಂದು ಸಂಸ್ಥೆಯ ಪರವಾಗಿ ಸ್ಥಾಪಕ ಅಧ್ಯಕ್ಷ ಗೋಪಿನಾಥ್ ಕಾಪಿಕಾಡ್ ಕೃತಜ್ಞತೆ ಸಲ್ಲಿಸಿದರು.
ಮೂಕ ಪ್ರಾಣಿ ಪರ ಧ್ವನಿ ಎತ್ತಿ: ‘ಮೂಕ ಪ್ರಾಣಿಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಪ್ರಾಣಿಗಳಿಗೆ ಮಾತು ಬರುವುದಿಲ್ಲ. ಅವುಗಳಿಗೆ ಹಿಂಸೆಯಾದಾಗ, ಪ್ರಾಣಿಗಳ ಪರ ಧ್ವನಿ ಎತ್ತುವ ಮನೋಭಾವ ಮೂಡಿಸಿಕೊಳ್ಳಬೇಕು’ ಎಂದು ಉಷಾ ಸುವರ್ಣ ವಿನಂತಿಸಿದರು.
‘ನಾನು 94 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದಾನವೆಂದರೆ ಜೀವವೊಂದನ್ನು ರಕ್ಷಿಸುವ ಮಹತ್ಕಾರ್ಯ. ಇದಕ್ಕೆ ನನ್ನ ಕುಟುಂಬದ ಸಹಕಾರ ಇದೆ. ಮುಂದೆ ನನ್ನ ಮಗನನ್ನೂ ರಕ್ತದಾನಿಯಾಗಿ ಮಾಡುತ್ತೇನೆ’ ಎಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಎಂ.ಕೆ. ಪ್ರವೀಣ್ ಭರವಸೆಯ ಭಾವ ಹೊರಗಿಕ್ಕಿದರು.
‘ಜಾತಿ–ಮತ ಎಲ್ಲಕ್ಕಿಂತ ಮನುಷ್ಯತ್ವ, ಮಾನವೀಯತೆ ಮುಖ್ಯ. ರಸ್ತೆ ಬದಿಯ ಭಿಕ್ಷುಕನೊಬ್ಬನನ್ನು ಕರೆದು, ಚಹಾ ಕೊಡಿ, ಆಗ ಅವನ ಮೊಗದಲ್ಲಿ ಮೂಡುವ ಮಂದಹಾಸ, ಅದರಿಂದ ಸಿಗುವ ಆತ್ಮತೃಪ್ತಿ ಜಗತ್ತಿನಲ್ಲಿ ಇನ್ನಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಒಬ್ಬನಿಂದ ಸಾಧನೆ ಸಾಧ್ಯವಿಲ್ಲ, ನಾವು ತಂಡವಾಗಿ ಸಮಾಜ ಸೇವೆ ಮಾಡುತ್ತೇವೆ’ ಎಂದು ಮೂಡಿಗೆರೆಯ ಸಮಾಜ ಸೇವಕ ಹಸೈನಾರ್, ಸೇರಿದವರಲ್ಲಿ ಸೇವೆಯ ಕನಸು ಬಿತ್ತಿದರು.
‘ನಾನು ಅಮ್ಮನಾದಾಗ, ಮಾತೃಹೃದಯ ಜಾಗೃತಗೊಂಡಿತು, ನನ್ನ ಮಗುವಿಗೆ ಒಳ್ಳೆಯ ಆಹಾರ ನೀಡಬೇಕು ಎಂಬ ಮಹದಾಸೆಯೊಂದಿಗೆ ಆರಂಭವಾದ ಸಾವಯವ ಉತ್ಪನ್ನ ತಯಾರಿಕೆ, ಈಗ ಉದ್ಯಮವಾಗಿ ಬೆಳೆದು, ದೇಶದ ಬೇರೆ ಬೇರೆ ರಾಜ್ಯಗಳನ್ನು ತಲುಪಿದೆ. ಪತ್ರಿಕೆಯೊಂದು ನಮ್ಮಂತಹ ರೈತರನ್ನು ಗುರುತಿಸಿದಾಗ ಸಿಗುವ ಸ್ಫೂರ್ತಿ ಜತೆಗೆ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹೊಣೆಗಾರಿಕೆಯನ್ನು ಮೂಡಿಸುತ್ತದೆ’ ಎನ್ನುವಾಗ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಲಿಂಗದಹಳ್ಳಿಯ ಎಸ್. ನಂದಿನಿ ಅವರಲ್ಲಿ ಧನ್ಯತಾಭಾವ.
ಆತ್ಮರಕ್ಷಣೆ ಕಲೆ ಮುಖ್ಯ: ‘ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ಮುಖ್ಯ. ಬಿಡುವಿದ್ದಾಗಲೆಲ್ಲ ಹೆಣ್ಣು ಮಕ್ಕಳು, ಬಾಲಮಂದಿರದ ಮಕ್ಕಳಿಗೆ ಆತ್ಮರಕ್ಷಣೆಯ ಕಲೆ ಕಲಿಸುತ್ತೇನೆ’ ಎಂದ ಟೆಕ್ವಾಂಡೊ ಆಟಗಾರ ಬಿ.ಆರ್. ಯಶವಂತ್ ಅವರ ಕಣ್ಣಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿ ದೇಶದ ಧ್ವಜವನ್ನು ಹಿಡಿದು, ಗರಿಮೆ ಹೆಚ್ಚಿಸಬೇಕು ಎಂಬ ಕನಸು ಮಿಂಚಿತ್ತು.
‘ನೂರಾರು ಅನಾಥ ಶವಗಳಿಗೆ ಮುಕ್ತಿ ನೀಡಿದ್ದೇನೆ. ಶಿಕ್ಷಣ ಕಲಿತಿದ್ದು ಅಲ್ಪ. ಸಮಾಜ ಸೇವೆಗೆ ಶಿಕ್ಷಣ ಬೇಕೇ ಬೇಕು ಎಂದೇನಿಲ್ಲ. ಸಾಧನೆಗೆ ಹಲವಾರು ಮಾರ್ಗಗಳು ಇವೆ. ಸಮಾಜದಲ್ಲಿ ಹುಟ್ಟಿದ ಮೇಲೆ ಏನಾದರೂ ಕೊಡುಗೆ ನೀಡಬೇಕು’ ಎಂದು ಹೆಬ್ರಿಯ ಶಂಕರ ಶೆಟ್ಟಿ ಎಳ್ಳಾರೆ ಅನುಭವ ಹಂಚಿಕೊಂಡರು.
ಪತ್ರಿಕೆ ಸ್ಮರಿಸಿದ ಹಾಜಬ್ಬ
‘ಕಿತ್ತಳೆ ಹಣ್ಣು ವ್ಯಾಪಾರ ಮಾಡುವ ನನ್ನನ್ನು ಕಂಡರೆ ಜನರು ನಮಸ್ಕರಿಸುತ್ತಾರೆ. ಕಾರಿನಲ್ಲಿ ಹೋಗುವ ಶ್ರೀಮಂತರು ನನ್ನನ್ನು ಕಂಡರೆ ನಿಲ್ಲಿಸಿ, ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮನೆಯ ತನಕ ಬಿಡುತ್ತಾರೆ. ಮಾಧ್ಯಮ ನನ್ನನ್ನು ಗುರುತಿಸಿದ್ದರಿಂದ ಇದು ಸಾಧ್ಯವಾಗಿದೆ’ ಎಂದು ಹರೇಕಳ ಹಾಜಬ್ಬ ಹೇಳುತ್ತಿದ್ದರೆ, ಸಭಿಕರ ಸಾಲಿನಲ್ಲಿ ಚಪ್ಪಾಳೆಗಳ ಸುರಿಮಳೆ. ‘ಒಬ್ಬ ಸಾಮಾನ್ಯ ಮನುಷ್ಯ ನಾನು. ‘ಪ್ರಜಾವಾಣಿ’ ಪತ್ರಿಕೆ 75ರ ಸಂಭ್ರಮದಲ್ಲಿ ತಮ್ಮ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು ನಿಜಕ್ಕೂ ಸಂತಸ ತಂದಿದೆ’ ಎಂದ ಅವರು, ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು ಸ್ಮರಿಸಿಕೊಂಡರು.
‘ಆಯ್ಕೆ ಪ್ರಕ್ರಿಯೆ ಮಾದರಿ’
‘ಸರಳ ಆದರೆ, ಅಷ್ಟೇ ಸುಂದರ ಕಾರ್ಯಕ್ರಮವಾಗಿ ನಡೆದ ಪ್ರಜಾವಾಣಿ ಸಾಧಕರ ಸನ್ಮಾನ ಕಾರ್ಯಕ್ರಮ ಮಾದರಿಯಾಗಿದೆ. ಪ್ರಭಾವ ಬಳಸಿ ಪ್ರಶಸ್ತಿ ಪಡೆದುಕೊಳ್ಳುವ ಪ್ರಸ್ತುತ ಸಂದರ್ಭದಲ್ಲಿ, ಅರ್ಜಿ ಆಹ್ವಾನಿಸದೆ, ಪತ್ರಿಕೆಯೇ ಮುಂಚೂಣಿಯಲ್ಲಿ ನಿಂತು ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ತುಂಬಾ ಖುಷಿ ಮೂಡಿಸಿದೆ’ ಎಂದು ಎಂ. ಫ್ರೆಂಡ್ಸ್ ತಂಡದ ಅಧ್ಯಕ್ಷ ಹನೀಫ್ ಗೊಳ್ತಮಜಲು ಹರ್ಷ ವ್ಯಕ್ತಪಡಿಸಿದರು.
‘ಮಗುವನ್ನು ಅಮ್ಮನಂತೆ ಸಲಹಿ’
‘ಶಿಕ್ಷಕರ ಮೇಲಿನ ಅದಮ್ಯ ವಿಶ್ವಾಸದಿಂದ ಮಡಿಲಲ್ಲಿದ್ದ ಮಗುವನ್ನು ಪಾಲಕರು ಶಾಲೆಗೆ ಕಳುಹಿಸುತ್ತಾರೆ. ಝೀರೊ ಆಗಿರುವ ಮಗುವನ್ನು ಹೀರೊ ಮಾಡುವ ಅವಕಾಶ ಶಿಕ್ಷಕರಿಗಿದೆ. ಶಾಲೆಗೆ ಬರುವ ಮಗುವನ್ನು ಅಮ್ಮನಂತೆ ಸಲಹುವುದು ಶಿಕ್ಷಕರಾದ ನಮ್ಮ ಕರ್ತವ್ಯ. ಕೋವಿಡ್–19 ಸಾಂಕ್ರಾಮಿಕದ ವೇಳೆ ಹಾಡು, ನೃತದ ಮೂಲಕ ನಾನು ಪ್ರಯೋಗಿಸಿದ ಕಲಿಕಾ ಮಾದರಿಯಿಂದ ಪುಟ್ಟ ಮಕ್ಕಳ ಪ್ರೀತಿ ಸಂಪಾದಿಸಿದ್ದೇನೆ’ ಎಂದು ಶಿಕ್ಷಕಿ ವಂದನಾ ರೈ ಹೆಮ್ಮೆಯಿಂದ ಹೇಳಿಕೊಂಡರು.
‘ಇಲಾಖೆಗೆ ಹೊಣೆಗಾರಿಕೆ ನೆನಪಿಸಿ’
‘ಬೇರೆ ಬೇರೆ ಕ್ಷೇತ್ರಗಳಲ್ಲಿ ಹಲವಾರು ಜನರು ಸಮಾಜ ಸೇವೆ ಮಾಡುತ್ತಾರೆ. ತಮ್ಮ ಪಾಡಿಗೆ ಕೆಲಸ ಮಾಡುತ್ತ ದುಡಿಮೆ ಭಾಗವನ್ನೂ ಇದಕ್ಕಾಗಿ ಖರ್ಚು ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳನ್ನು ಹೊಣೆಗಾರಿಕೆಯ ಭಾಗವಾಗಿಸಲು ತಂಡವಾಗಿ ಕೆಲಸ ಮಾಡಿದರೆ, ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಹೆಚ್ಚು ಬಡವರು, ನಿರ್ಗತಿಕರು, ಅಸಹಾಯಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಎನ್‌ಇಸಿಎಫ್ ತಂಡದ ಪರವಾಗಿ ಶಶಿಧರ್ ಶೆಟ್ಟಿ ಅಭಿಪ್ರಾಯಪಟ್ಟರು. ಪರಿಸರ ಜಾಗೃತಿ ವರದಿಗಾರಿಕೆಯಲ್ಲಿ ‘ಪ್ರಜಾವಾಣಿ’ ಮುಂಚೂಣಿಯಲ್ಲಿರುವುದನ್ನು ಶ್ಲಾಘಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.