ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲಗಳ ಸಮರ್ಪಕ ಬಳಕೆಗೆ ಸೂಚನೆ: ಸಿಇಒ ಡಾ. ಕುಮಾರ್

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ: ಸಿಇಒ ಡಾ. ಕುಮಾರ್
Last Updated 7 ಏಪ್ರಿಲ್ 2022, 15:22 IST
ಅಕ್ಷರ ಗಾತ್ರ

ಮಂಗಳೂರು: ‘ಜಿಲ್ಲೆಯ ಆರು ಗ್ರಾಮ ಪಂಚಾಯಿತಿಗಳ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ದೂರು ಬಂದಿದ್ದು, ಸ್ಥಳೀಯವಾಗಿ ಲಭ್ಯವಿರುವ ಜಲಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

‘ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು, ‘ಅಡ್ಯಾರು, ಅತಿಕಾರಬೆಟ್ಟು, ಕೊಲಕಾಡಿ, ಪದವು, ಕೊಣಾಜೆ, ಅಸೈಗೋಳಿ, ಕಿನ್ಯಾ ರಹಮತ್‌ನಗರ, ಮಂಜನಾಡಿ, ಕುತ್ತಾರು ಮೊದಲಾದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿರುವ ದೂರುಗಳು ಬಂದಿವೆ. ಬೇಸಿಗೆಯಲ್ಲಿ ಈ ಭಾಗದಲ್ಲಿ ಜಲಮೂಲಗಳು ಬತ್ತುವುದರಿಂದ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಸ್ಥಳೀಯವಾಗಿ ಇರುವ ಬೋರ್‌ವೆಲ್‌ಗಳನ್ನು ವ್ಯವಸ್ಥಿತಗೊಳಿಸಿ, ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ’ ಎಂದರು.

ಹಳೆಯ ಬೋರ್‌ವೆಲ್ ಕಾರ್ಯನಿರ್ವಹಿಸದಿದ್ದಲ್ಲಿ 18ನೇ ಹಣಕಾಸು ಯೋಜನೆಯಲ್ಲಿ ಹೊಸ ಬೋರ್‌ವೆಲ್ ಕೊರೆಯಲು ಅವಕಾಶವಿದೆ. ಇಲ್ಲಿಯೂ ನೀರು ಲಭ್ಯವಾಗದಿದ್ದಲ್ಲಿ, ಹಣ ಪಾವತಿಸಿ ಖಾಸಗಿ ಜಲಮೂಲದ ನೀರನ್ನು ಪಡೆಯುವಂತೆ ತಿಳಿಸಲಾಗಿದೆ. ಅದೂ ಸಾಧ್ಯವಾಗದಿದ್ದಲ್ಲಿ ಮಾತ್ರ ಅಂತಿಮವಾಗಿ ಟ್ಯಾಂಕರ್ ನೀರು ಪೂರೈಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಕಾಮಗಾರಿ ಆರಂಭವಾಗಿದ್ದು, ಮುಂದಿನ ಬೇಸಿಗೆಯ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗಬಹುದೆಂದು ನಿರೀಕ್ಷಿಸಲಾಗಿದೆ. ಈಗಾಗಲೇ ತುಂಬೆ ಕಿಂಡಿ ಅಣೆಕಟ್ಟೆಯಿಂದ ಉಳ್ಳಾಲ, ಕೋಟೆಕಾರಿಗೆ ನೀರು ಕೊಂಡೊಯ್ಯುವ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇದನ್ನು ಬಳಸಿಕೊಂಡು, ಈ ಪೈಪ್‌ಲೈನ್ ಹೋಗುವ ಮಾರ್ಗದ ಆಸುಪಾಸಿನ 24 ಗ್ರಾಮಗಳಿಗೆ ನೀರು ಒದಗಿಸುವ ₹85 ಕೋಟಿ ಮೊತ್ತದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪ್ರತಿಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ, ಮನೆ–ಮನೆಗೆ ನಲ್ಲಿ ಸಂಪರ್ಕ ನೀಡಲಾಗುವುದು ಎಂದರು.

ಮಳೆ ಮತ್ತು ಅಂತರ್ಜಲ ಮಟ್ಟ ಆಧರಿಸಿ ನಡೆಸಿದ ಅಧ್ಯಯನದಲ್ಲಿ ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಸಾರ್ವಜನಿಕ ಜಲಮೂಲದ 500 ಮೀಟರ್ ಅಂತರದಲ್ಲಿ ಯಾವುದೇ ಖಾಸಗಿ ಬೋರ್ ಕೊರೆಯಲು ಅವಕಾಶ ಇರಲಿಲ್ಲ. ಈಗ ಅಂತರ್ಜಲ ಕುಸಿತ ಪ್ರಮಾಣ ತಗ್ಗಿದ್ದು, ಬೋರ್‌ವೆಲ್ ಕೊರೆಯಲು ಯಾವುದೇ ಅಡ್ಡಿ ಇಲ್ಲ. ಆದರೆ, ಸಂಬಂಧಪಟ್ಟವರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಯಲು ಕಸಮುಕ್ತ ಗ್ರಾಮ: ಗ್ರಾಮೀಣ ಜನರಲ್ಲಿ ಸ್ವಚ್ಛತೆಯ ಅರಿವು ಬೆಳಸುವ ಜತೆಗೆ ಅಕ್ರಮವಾಗಿ ಕಸ ಎಸೆಯುವವರ ಮೇಲೆ ನಿಗಾ ಇಡುವ ಕುರಿತಂತೆ ಜಾಗೃತಿ ಮೂಡಿಸಲು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ‘ಬಯಲು ಕಸಮುಕ್ತ ಗ್ರಾಮ’ ಕಾರ್ಯಕ್ರಮವನ್ನು ಸಪ್ತಾಹದ ಮಾದರಿಯಲ್ಲಿ ಆಚರಿಸಲಾಗುತ್ತಿದೆ. ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆ ನೇತೃತ್ವದಲ್ಲಿ ಸಾರ್ವಜನಿಕರನ್ನು ಒಳಗೊಂಡು ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ. ಹಲವೆಡೆಗಳಲ್ಲಿ ಜಾಥಾ, ಬೀದಿ ನಾಟಕಗಳು ನಡೆದಿವೆ ಎಂದು ಅಭಿಯಾನದ ಕುರಿತು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT