ಗುರುವಾರ , ಮಾರ್ಚ್ 30, 2023
22 °C
ಸರಗಳ್ಳತನ, ದ್ವಿಚಕ್ರ ವಾಹನ ಕಳವು ಪ್ರಕರಣ ಭೇದಿಸಿದ ಪೊಲೀಸರು

24 ಪ್ರಕರಣಗಳ ಏಳು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ವಿವಿಧೆಡೆ ಜುಲೈನಿಂದ ಅಕ್ಟೋಬರ್‌ವರೆಗೆ ನಡೆದ ಸರಗಳ್ಳತನ, ಸುಲಿಗೆ, ದ್ವಿಚಕ್ರಗಳ ಕಳವು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ 24 ಪ್ರಕರಣಗಳಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್‌, ಮಹಿಳೆಯರು ಒಂಟಿಯಾಗಿ ನಿರ್ಜನ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಸರ ಸೇರಿದಂತೆ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಪ್ರಕರಣಗಳನ್ನು ಭೇದಿಸಲಾಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಕಾವೂರು ನಿವಾಸಿ ಅಬ್ದುಲ್ ಇಶಾಮ್ ಯಾನೆ ಇಶಾಮ್, ಪಂಜಿಮೊಗರು ನಿವಾಸಿ ಸಫ್ವಾನ್ ಯಾನೆ ಸಪ್ಪು, ಕಾವೂರು ನಿವಾಸಿ ಮುಹಮ್ಮದ್ ತೌಸೀಫ್ ಯಾನೆ ಹಾರಿಸ್, ಶಾಂತಿನಗರ ನಿವಾಸಿ ಅಬ್ದುಲ್ ಖಾದರ್ ಸಿನಾನ್, ಮಲ್ಲೂರು ಮುಹಮ್ಮದ್ ಫಝಲ್ ಯಾನೆ ಪಜ್ಜು, ಚೊಕ್ಕಬೆಟ್ಟು ನಿವಾಸಿ ಅರ್ಷದ್ ಹಾಗೂ ಕುಂದಾಪುರ ನಿವಾಸಿ ಮುಜಾಹಿದುರ್ ರಹ್ಮಾನ್ ಬಂಧಿತ ಆರೋಪಿಗಳು.

ಆರೋಪಿಗಳಿಂದ ₹10 ಲಕ್ಷ ಮೌಲ್ಯದ 210 ಗ್ರಾಂ ಚಿನ್ನದ ಸರ, ಕರಿಮಣಿ ಸರ ಹಾಗೂ ₹2 ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇನ್ನೂ ಹಲವು ಕಡೆಗಳಲ್ಲಿ ಕಳವು ಮಾಡಿದ್ದ ಚಿನ್ನಾಭರಣ ಹಾಗೂ 5 ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಬೇಕಾಗಿದೆ.

ಆರೋಪಿಗಳ ವಿರುದ್ಧ ಬಜ್ಪೆ, ಬಂದರು, ಬರ್ಕೆ ಪೊಲೀಸ್ ಠಾಣೆಗಳಲ್ಲಿ ತಲಾ 1 ಸರಗಳ್ಳತನ, ಕಾವೂರು ಠಾಣೆಯಲ್ಲಿ 4 ಸರಗಳ್ಳತನ, 2 ಸರಗಳ್ಳತನಕ್ಕೆ ಪ್ರಯತ್ನ, 2 ಬೈಕ್ ಕಳವು, ಉರ್ವ ಠಾಣೆಯಲ್ಲಿ 4 ಸರಗಳ್ಳತನ, 1 ಸರಗಳ್ಳತನಕ್ಕೆ ಯತ್ನ, 1 ದರೋಡೆ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ 2 ಸರಗಳ್ಳತನ, 2 ಸರಗಳ್ಳತನ ಪ್ರಯತ್ನ, 1 ದರೋಡೆ ಪ್ರಕರಣ, ಕಂಕನಾಡಿ ನಗರ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಉಳ್ಳಾಲ ಠಾಣೆಯಲ್ಲಿ 1 ಸ್ಕೂಟರ್ ಕಳವು ಸೇರಿದಂತೆ 24 ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಗಳಲ್ಲಿ ನಾಲ್ವರು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ.

ಕಳವು ಮಾಡಿದ ಚಿನ್ನಾಭರಣಗಳನ್ನು ಬಂಟ್ವಾಳದ ಕೆಲವು ಚಿನ್ನದ ಅಂಗಡಿಗಳಿಗೆ ಮಾರಾಟ ಮಾಡಿದ್ದು, ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಕೃತ್ಯಕ್ಕಾಗಿ ತಮ್ಮ ವಾಹನಗಳನ್ನು ಉಪಯೋಗಿಸದೇ ಕಳವು ಮಾಡಿದ ವಾಹನಗಳನ್ನು ಉಪಯೋಗಿಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಗೊತ್ತಾಗಿದೆ. ದ್ವಿಚಕ್ರ ವಾಹನ ಕದಿಯಲು ನಕಲಿ ಕೀ ಗಾಗಿ ಸ್ಥಳೀಯ ಮೆಕ್ಯಾನಿಕ್ ಬಳಿ ತರಬೇತಿ ಪಡೆದಿರುವುದು ತಿಳಿದು ಬಂದಿದೆ ಎಂದು ಎನ್‌. ಶಶಿಕುಮಾರ್‌ ತಿಳಿಸಿದರು.

ಡಿಸಿಪಿ ಹರಿರಾಂ ಶಂಕರ್, ಎಸಿಪಿ ಮಹೇಶ್ ಕುಮಾರ್ ಇದ್ದರು.

ಪೊಲೀಸ್ ತಂಡಕ್ಕೆ ಬಹುಮಾನ

ಸರಗಳ್ಳತನ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ತಂಡಕ್ಕೆ ₹25ಸಾವಿರ ಬಹುಮಾನವನ್ನು ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ಘೋಷಿಸಿದರು.

ಕಾವೂರು, ಮಾಲೆಮಾರ್, ಚಿಲಿಂಬಿ, ಮೇರಿಹಿಲ್, ಕದ್ರಿ, ಡೊಂಗರಕೇರಿ ಮೊದಲಾದ ಪ್ರದೇಶಗಳಲ್ಲಿ ಕೃತ್ಯ ನಡೆಸಿದ್ದು, ಜುಲೈನಲ್ಲಿ ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಪ್ರಥಮ ಸರಗಳ್ಳತನ ನಡೆಸಲಾಗಿತ್ತು. ಬಜ್ಪೆ ಠಾಣಾಧಿಕಾರಿ ಮೊದಲ ಆರೋಪಿಯನ್ನು ಪತ್ತೆ ಹಚ್ಚಿದ್ದು, ಆ ಮೂಲಕ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಕ್ಲಿಷ್ಟಕರ ಪ್ರಕರಣವನ್ನು ಭೇದಿಸುವಲ್ಲಿ ಡಿಸಿಪಿಗಳ ಉಸ್ತುವಾರಿಯಲ್ಲಿ ಮಂಗಳೂರು ಎಸಿಪಿಗಳಾದ ಎನ್. ಮಹೇಶ್ ಕುಮಾರ್, ಪರಮೇಶ್ವರ ಹೆಗ್ಡೆ ನೇತೃತ್ವದಲ್ಲಿ ಉತ್ತರ ಮತ್ತು ಕೇಂದ್ರ ಉಪ ವಿಭಾಗ ವ್ಯಾಪ್ತಿಯ ಇನ್‌ಸ್ಪೆಕ್ಟರ್‌, ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಈ ಪ್ರಕರಣ ಪತ್ತೆ ಮಾಡಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.