ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತೆಯರಿಗೆ ‘ಸಂಜೀವಿನಿ’ಯಾದ ಇಫ್ತಾರ್: ಉಪವಾಸದ ನಡುವೆ ಅಡುಗೆ ತಯಾರಿ

ನಾಲ್ವರು ಪುರುಷರಿಗೆ ಉದ್ಯೋಗ ಕಲ್ಪಿಸಿದ ಬೆಳ್ತಂಗಡಿಯ ಮಹಿಳೆಯರ ಸ್ವ ಸಹಾಯ ಸಂಘ
Last Updated 28 ಏಪ್ರಿಲ್ 2022, 6:19 IST
ಅಕ್ಷರ ಗಾತ್ರ

ಮಂಗಳೂರು: ಹಿಂದೂ–ಮುಸ್ಲಿಂ ಮಹಿಳೆಯರು ಸೇರಿ ಸಿದ್ಧಪಡಿಸುವ ಸವಿಯಾದ ಖಾದ್ಯಗಳು ರಂಜಾನ್ ಉಪವಾಸ ಮುಗಿಸಿ, ಇಫ್ತಾರ್‌ ಕೂಟದಲ್ಲಿ ಭಾಗಿಯಾಗುವವರ ನಾಲಿಗೆ ರುಚಿಯ ಗ್ರಂಥಿಯನ್ನು ಬಡಿದೆಬ್ಬಿಸಿವೆ. ಮನೆಯಲ್ಲೇ ತಯಾರಾಗುವ ಅಡುಗೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಕಳೆದ 25 ದಿನಗಳಿಂದ ನಾಲ್ವರು ಮಹಿಳೆಯರಿಗೆ ಕೈತುಂಬ ಕೆಲಸ.

ವೈವಿಧ್ಯ ಫಿಶ್ ಚಕ್ಕುಲಿ ತಯಾರಿಸಿ ಮತ್ಸ್ಯಪ್ರಿಯರ ಮನ ಗೆದ್ದಿರುವ ಬೆಳ್ತಂಗಡಿ ಲಾಯಿಲದ ಸ್ನೇಹ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಾದ ಸಾವಿತ್ರಿ ಎಚ್‌.ಎಸ್., ಶಾಹಿದಾ ಬೇಗಂ, ನಸೀಮಾ ಮತ್ತು ಹರ್ಷಿಯಾ, ಇದೇ ಮೊದಲ ಬಾರಿಗೆ ಇಫ್ತಾರ್ ಕೂಟದ ಅಡುಗೆಯ ಕಡಾಯಿ ಹಿಡಿದು ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

ಬೆಳಿಗ್ಗೆ 9 ಗಂಟೆಯಿಂದ ದೈನಂದಿನ ಕೆಲಸ ಶುರು. ರಂಜಾನ್ ಉಪವಾಸದ ನಡುವೆ ಬಿಡುವಿಲ್ಲದ ಕೆಲಸ, ಪರಸ್ಪರ ಹರಟೆ, ತಮಾಷೆ ದಣಿವನ್ನು ಮರೆಸುತ್ತದೆ. ಸಂಜೆಯ ವೇಳೆಗೆ ಎಲ್ಲ ತಿನಿಸುಗಳು ಸಿದ್ಧವಾಗಿ ಪ್ಯಾಕೆಟ್‌ನೊಳಗೆ ಸೇರಿರುತ್ತವೆ. ಸಂಜೆ 5.30 ಗಂಟೆ ಆಗುತ್ತಿದ್ದಂತೆ ಆರ್ಡರ್‌ಗಳನ್ನು ಒಯ್ಯಲು ವಾಹನಗಳು ಮನೆ ಮುಂದೆ ಬಂದು ನಿಂತಿರುತ್ತವೆ.

‘ಚಿಕನ್ ರೋಲ್, ಕಟ್ಲೆಟ್, ಚಿಕನ್ ಲಾಲಿಪಪ್, ಕೆಎಫ್‌ಸಿ, ಬಿರ್ಯಾನಿ, ಪತ್ತಿರ (ರೊಟ್ಟಿ) ಹೀಗೆ 15ಕ್ಕೂ ಹೆಚ್ಚು ತಿನಿಸುಗಳನ್ನು ತಯಾರಿಸುತ್ತೇವೆ. ಬೆಳ್ತಂಗಡಿ, ಗುರುವಾಯನಕೆರೆ ಭಾಗದ ಜನರೇ ನಮಗೆ ಗ್ರಾಹಕರು. ದಿನಕ್ಕೆ 200 ಪ್ಯಾಕೆಟ್‌ನಷ್ಟು ಬಿರ್ಯಾನಿ ಮಾರಾಟವಾಗುತ್ತವೆ. ರಂಜಾನ್ ಮೊದಲ ದಿನದಿಂದ ಅಡುಗೆ ಆರಂಭಿಸಿದ್ದೇವೆ. ಒಂದು ದಿನವೂ ಆರ್ಡರ್ ಕಡಿಮೆಯಾಗಿಲ್ಲ’ ಎನ್ನುತ್ತಾರೆ ಹರ್ಷಿಯಾ.

‘ದಿನಕ್ಕೆ ಸರಾಸರಿ 13 ಕೆ.ಜಿ.ಯಷ್ಟು ಚಿಕನ್ ಖರೀದಿಸುತ್ತೇವೆ. ಗ್ರಾಹಕರಿಂದ ಬರುವ ಆರ್ಡರ್ ಆಧರಿಸಿ, ದೈನಂದಿನ ಸಾಮಗ್ರಿಗಳನ್ನು ಆಯಾದಿನ ಬೆಳಿಗ್ಗೆ ಖರೀದಿ ತರುತ್ತೇವೆ. ತಾಜಾತನ, ಗುಣಮಟ್ಟ, ರುಚಿಯ ಕಾರಣಕ್ಕೆ ನಮ್ಮ ಅಡುಗೆಗೆ ಹೆಚ್ಚಿನ ಬೇಡಿಕೆ ಬಂದಿದೆ’ ಎನ್ನುತ್ತಾರೆ ಸಾವಿತ್ರಿ ಎಚ್‌.ಎಸ್.

‘ಸುಡುಬಿಸಿಲಿನ ತಾಪ, ಜ್ಯೂಸ್‌ಗಳಿಗೂ ಅತೀವ ಬೇಡಿಕೆ. ಮ್ಯಾಂಗೊ ಪಲ್ಪ್, ರಾಗಿ ಜ್ಯೂಸ್, ಬೊಂಡ ಶರಬತ್, ಫಲೂದಾ ಸೇರಿ 10ಕ್ಕೂ ಹೆಚ್ಚು ವಿಧದ ಜ್ಯೂಸ್ ಅಡುಗೆಮನೆಯಲ್ಲಿ ಅಣಿಯಾಗುತ್ತದೆ. ದಿನಕ್ಕೆ ಸರಾಸರಿ ₹ 18 ಸಾವಿರದವರೆಗೆ ಆದಾಯ ಇದೆ. ದಿನಸಿ ಸಾಮಗ್ರಿಗಳು, ಚಿಕನ್ ಬೆಲೆ ಹೆಚ್ಚಾಗಿರುವುದರಿಂದ ತುಂಬ ಲಾಭವೇನು ಆಗದು’ ಎಂದು ಅವರು ತಿಳಿಸಿದರು.

‘ಆರಂಭದಲ್ಲಿ ನಾಲ್ಕು ಬಗೆಯ ಫಿಶ್ ಚಕ್ಕುಲಿ ತಯಾರಿಸುತ್ತಿದ್ದೆವು. ಈಗ ಎಂಟು ಬಗೆಯ ಚಕ್ಕುಲಿ ಮಾಡುತ್ತೇವೆ. ಹೊರ ಜಿಲ್ಲೆಗಳಲ್ಲೂ ಈ ಚಕ್ಕುಲಿಗೆ ಬೇಡಿಕೆ ಇದೆ. ಇದರೊಂದಿಗೆ ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಎಲ್ಲವೂ ಬೇಡಿಕೆಯಲ್ಲಿವೆ’ ಎಂದು ಶಾಹಿದಾ ಅಭಿಪ್ರಾಯ ಹಂಚಿಕೊಂಡರು.

‘ನಾಲ್ವರು ಪುರುಷರಿಗೆ ಉದ್ಯೋಗ’

‘ಗ್ರಾಮ ಪಂಚಾಯಿತಿ ಎರಡು ಗೋದಾಮುಗಳನ್ನು ಉಚಿತವಾಗಿ ನೀಡಿದೆ. ಅಲ್ಲಿ ಗೃಹ ಉತ್ಪನ್ನ ಘಟಕ ಆರಂಭಿಸಿದ್ದು, ನಾಲ್ವರು ಪುರುಷರಿಗೆ ಉದ್ಯೋಗ ನೀಡಿದ್ದೇವೆ. ಶೂನ್ಯದಿಂದ ಆರಂಭ ಮಾಡಿದ ಸ್ವ ಉದ್ಯೋಗ ಈ ಮಟ್ಟಕ್ಕೆ ಬೆಳೆದಿರುವ ಬಗ್ಗೆ ಹೆಮ್ಮೆಯಿದೆ.ಮೀನುಗಾರಿಕಾ ಕಾಲೇಜು, ನಬಾರ್ಡ್, ಕೃಷಿ ವಿಜ್ಞಾನ ಕೇಂದ್ರ, ಬಿಬಿಟಿ ಹೀಗೆ ಸರ್ಕಾರದ ಅಂಗಸಂಸ್ಥೆಗಳು ನೀಡಿದ ತರಬೇತಿ ನಮ್ಮ ಸ್ವ ಉದ್ಯಮ ವಿಸ್ತರಣೆಗೆ ಸಹಕಾರಿಯಾಯಿತು’ ಎಂದು ಸಾವಿತ್ರಿ ಕೃತಜ್ಞತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT