ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆ ವ್ಯಾಪ್ತಿ: ಫಲ ಕಾಣದ ಕರ್ನಾಟಕದ ಮನವಿ?

Published 17 ಡಿಸೆಂಬರ್ 2023, 7:10 IST
Last Updated 17 ಡಿಸೆಂಬರ್ 2023, 7:10 IST
ಅಕ್ಷರ ಗಾತ್ರ

ಮಂಗಳೂರು: ತಮಿಳುನಾಡಿನ ಸಮುದ್ರ ಭಾಗದಲ್ಲೂ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂಬ ಕರ್ನಾಟಕ ಮೀನುಗಾರಿಕೆ ನಿರ್ದೇಶನಾಲಯದ ಮನವಿ ಫಲ ಕಾಣಲಿಲ್ಲ.

ತಮಿಳುನಾಡಿನ ಕನ್ಯಾಕುಮಾರಿಯ ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದವರ ಮೇಲೆ ಅಲ್ಲಿನ ಮೀನುಗಾರರು ದಾಳಿ ನಡೆಸಿದ್ದು ಬೋಟ್‌ಗಳಿಗೆ ಹಾನಿಯುಂಟು ಮಾಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ತಮಿಳುನಾಡು ಸಮುದ್ರದ 12 ನಾಟಿಕಲ್ ಮೈಲ್‌ಗಿಂತ ಆಚೆ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಕೋರಿ ತಮಿಳುನಾಡು ಮೀನುಗಾರಿಕೆ ಇಲಾಖೆಯ ಮೀನುಗಾರಿಕೆ ಮತ್ತು ಮೀನುಗಾರರ ಶ್ರೇಯೋಭಿವೃದ್ಧಿ ಆಯುಕ್ತರಿಗೆ ಡಿಸೆಂಬರ್‌ 1ರಂದು ರಾಜ್ಯದ ಮೀನುಗಾರಿಕೆ ನಿರ್ದೇಶನಾಲಯದ ಅಧಿಕಾರಿಗಳು ಪತ್ರ ಬರೆದಿದ್ದರು.

ಇಲ್ಲಿನ ಮೀನುಗಾರರು ಗಡಿ ದಾಟಿ ಹೋದರೆ ಅಲ್ಲಿನ ಅಧಿಕಾರಿಗಳು ಮತ್ತು ಸ್ಥಳೀಯ ಮೀನುಗಾರರು ಆಕ್ರಮಣ ಮಾಡುತ್ತಾರೆ. ಪಶ್ಚಿಮ ಸಮುದ್ರದಲ್ಲಿ ಮೀನಿನ ಪ್ರಮಾಣ ಕಡಿಮೆ ಇರುವುದರಿಂದ ಇಲ್ಲಿನ ಬೋಟ್‌ಗಳು ಪೂರ್ವ ಸಮುದ್ರದತ್ತ ಸಾಗುತ್ತವೆ. ಇವುಗಳ ಮೇಲೆ ಕನ್ಯಾಕುಮಾರಿ ಭಾಗದಲ್ಲಿ ಹೆಚ್ಚು ದಾಳಿ ನಡೆಯುತ್ತದೆ ಎಂದು ಮನವಿಯಲ್ಲಿ ಕೋರಲಾಗಿತ್ತು.

ಇದಕ್ಕೆ ತಮಿಳುನಾಡು ಭಾಗದಿಂದ ಉತ್ತರ ಬರಲಿಲ್ಲ. ಈ ನಡುವೆ ರಿಬ್ಬನ್ ಫಿಶ್ (ಪಾಂಬೋಲ್‌) ಹಿಡಿಯಲು ತೆರಳಿದ ಮಂಗಳೂರಿನ ಮೀನುಗಾರರ ಮೇಲೆ ಆಕ್ರಮಣ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಈ ನಡುವೆ, ತಮಿಳುನಾಡಿನ ಗಡಿ ದಾಟಿ ಮೀನುಗಾರಿಕೆ ಮಾಡಲು ಅವಕಾಶ ಇಲ್ಲ. ಹೀಗಿರುವಾಗ ಅಲ್ಲಿಗೆ ಯಾಕೆ ಹೋಗಬೇಕು ಎಂದು ಕೆಲವು ಬೋಟ್‌ಗಳ ಮಾಲೀಕರು ಹೇಳುತ್ತಿದ್ದಾರೆ.

'ದಾಳಿಯ ಬಗ್ಗೆ ಮಾಹಿತಿಗಳು ಬರುತ್ತಿವೆ. ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಂಥಾದ್ದೇನೂ ಆಗಿಲ್ಲ ಎನ್ನುತ್ತಿದ್ದಾರೆ. ಈ ಕುರಿತು ರಾಜ್ಯದ ಮೀನುಗಾರಿಕೆ ಸಚಿವರ ಜೊತೆ ಮಾತನಾಡಿ ತಮಿಳುನಾಡು ಜೊತೆ ಮಾತುಕತೆ ನಡೆಸಲು ಮನವಿ ಮಾಡಲಾಗುವುದು’ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT