ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜಿರೆ | 42 ಸಿಮ್‌ ಕಾರ್ಡ್ ಖರೀದಿಸಿದ್ದ ನಾಲ್ವರ ಬಂಧನ

ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ: ಬಾಲಕ ಬಾಲಮಂದಿರಕ್ಕೆ
Published 4 ಫೆಬ್ರುವರಿ 2024, 15:30 IST
Last Updated 4 ಫೆಬ್ರುವರಿ 2024, 15:30 IST
ಅಕ್ಷರ ಗಾತ್ರ

ಉಜಿರೆ (ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ತೋಟತ್ತಾಡಿಯಲ್ಲಿ ಬೇರೆಯವರ ಹೆಸರುಗಳಲ್ಲಿ 42 ಮೊಬೈಲ್‌ ಸಿಮ್‌ ಕಾರ್ಡ್ ಖರೀದಿಸಿ ಬೆಂಗಳೂರಿಗೆ ತೆರಳಲು ಸಿದ್ಧವಾಗಿದ್ದ ನಾಲ್ವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆಯಲಾದ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. 

‘ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಮೀಝ್, ಬಂಟ್ವಾಳ ತಾಲ್ಲೂಕು ಬಡಗ ಕಜೆಕಾರ್ ಗ್ರಾಮದ ಪಾಂಡವರಕಲ್ಲು ನಿವಾಸಿ ಅಕ್ಬರ್‌ ಅಲಿ, ಬೆಳ್ತಂಗಡಿಯ ಸಂಜಯನಗರ ನಿವಾಸಿ ಮೊಹಮ್ಮದ್ ಮುಸ್ತಾಫಾ, ಪಡಂಗಡಿ ಗ್ರಾಮದ ನಿವಾಸಿ ಮಹಮ್ಮದ್ ಸಾಧಿಕ್ ಬಂಧಿತರು. ಕಲ್ಮಂಜ ಗ್ರಾಮದ ನಿಡಿಗಲ್‌ನ ಬಾಲಕನನ್ನೂ ವಶಕ್ಕೆ ಪಡೆಯಲಾಗಿದೆ. ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಆರೋಪಿಗಳು ಈ ಹಿಂದೆಯೂ ಇದೇ ರೀತಿ ಭಾರಿ ಸಂಖ್ಯೆಯಲ್ಲಿ ಸಿಮ್‌ ಕಾರ್ಡ್  ಖರೀದಿಸಿದ್ದರು ಎಂದು ಗೊತ್ತಾಗಿದೆ. ವಿದೇಶಿ ಕರೆನ್ಸಿ ವಿನಿಮಯ ದಂಧೆಯಲ್ಲೂ ತೊಡಗಿರುವ ಶಂಕೆ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

‘ಎಎಸ್‌ಐ ಸ್ಯಾಮುಯೆಲ್ ಮತ್ತು ಸಿಬ್ಬಂದಿ ಫೆ.1ರಂದು ಸಂಜೆ ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಶಂಕಾಸ್ಪದವಾಗಿ ಕಂಡುಬಂದ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ, ಆ ಯುವಕರ ಬಳಿ ಇದ್ದ ಚೀಲದಲ್ಲಿ ಸಿಮ್‌ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳು ಸಿಕ್ಕಿವೆ. ನಂತರ ಪಿಎಸ್‌ಐ ಅನಿಲ್‌ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಯಿತು. ವಂಚನೆ ಉದ್ದೇಶದಿಂದ ಇಷ್ಟೊಂದು ಸಿಮ್ ಕಾರ್ಡ್‌ ಖರೀದಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಖಚಿತ ಮಾಹಿತಿ ಸಿಗಲಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT