ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಎರಡನೇ ಅಲೆ: ಠಾಣೆಯಲ್ಲೇ ಕಷಾಯದ ವ್ಯವಸ್ಥೆ

ಮಾದರಿಯಾದ ಉರ್ವ ಪೊಲೀಸ್ ಠಾಣೆ
Last Updated 18 ಏಪ್ರಿಲ್ 2021, 4:31 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಎರಡನೇ ಅಲೆಯ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ನಗರದ ಉರ್ವ ಪೊಲೀಸ್ ಠಾಣೆ ವಿನೂತನ ರೀತಿಯಲ್ಲಿ ಸಿದ್ಧವಾಗಿದೆ.

ಕೋವಿಡ್‌ ಪ್ರಥಮ ಅಲೆಯ ಸಂದರ್ಭದಲ್ಲಿ ಪೊಲೀಸರಿಗೂ ಕೋವಿಡ್–19 ದೃಢವಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗಳಲ್ಲೂ ಜಾಗೃತಿ ಕಾರ್ಯ ನಡೆಯುತ್ತಿದ್ದು, ನಗರದ ಉರ್ವ ಪೊಲೀಸ್ ಠಾಣೆಯೂ ಕೋವಿಡ್‌–19 ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಿಬ್ಬಂದಿಗಳ ಆರೋಗ್ಯದತ್ತ ಹೆಚ್ಚಿನ ನಿಗಾ ವಹಿಸಿದೆ.

ಕೋವಿಡ್–19 ಜಾಗೃತಿಯ ಭಾಗವಾಗಿ ಠಾಣೆಯ ಮುಂಭಾಗ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗಿದ್ದು, ಠಾಣೆಗೆ ಬರುವ ಪ್ರತಿಯೊಬ್ಬ ಸಿಬ್ಬಂದಿ, ನಾಗರಿಕರು ಈ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಯೇ ಠಾಣೆಯ ಒಳಗೆ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ.

ಠಾಣೆಯಲ್ಲಿ ಕಷಾಯ: ಆರೋಗ್ಯದ ಹಿತದೃಷ್ಟಿಯಿಂದ ಉರ್ವ ಪೊಲೀಸ್ ಠಾಣೆಯಲ್ಲಿ ಕಷಾಯವೂ ಲಭ್ಯವಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯವನ್ನು ಇಲ್ಲಿ ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತದೆ. ಸಮಸ್ಯೆ ಹೇಳಿಕೊಂಡು ಠಾಣೆಗೆ ಬರುವ ಸಾರ್ವಜನಿಕರೂ ಕಷಾಯ ಬಯಸಿದರೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಕಳೆದ ಬಾರಿ ಹಲವು ಮಂದಿ ಪೊಲೀಸರಿಗೆ ಕೋವಿಡ್–19 ತಗುಲಿತ್ತು. ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಈ ಮಾದರಿ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿಯೊಬ್ಬರೂ ಕೋವಿಡ್ ಕುರಿತು ಎಚ್ಚರಿಕೆ ವಹಿಸಬೇಕಾದ್ದು, ಅತ್ಯವಶ್ಯಕ. ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸುರಕ್ಷಿತ ಅಂತರ ಕಾಯ್ದು
ಕೊಳ್ಳಬೇಕು. ಅನವಶ್ಯಕವಾಗಿ ಯಾರೂ ತಿರುಗಾಡಬಾರದು. ಕೋವಿಡ್‌–19 ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ತಿಳಿಸಿದರು.

‘ಸುರಕ್ಷತೆಗೆ ಕ್ರಮ’
ಠಾಣೆಗೆ ದೂರು ನೀಡಲು ಬರುವ ಸಾರ್ವಜನಿಕರನ್ನು ಇಲ್ಲಿ ಕೂರಿಸಲಾಗುತ್ತದೆ. ಅವರಿಂದ ಮಾಹಿತಿ ಪಡೆಯಲಾಗುತ್ತದೆ. ನಂತರ ಲಿಖಿತ
ದೂರನ್ನು ಪೆಟ್ಟಿಗೆಯ ಹಾಕುವ ಮೂಲಕ ಸ್ಯಾನಿಟೈಸ್‌ ಮಾಡಲಾಗುತ್ತದೆ. ಅದಾದ ಮೇಲೆ ಅರ್ಜಿಯನ್ನು ಪಡೆದು, ದೂರು ದಾಖಲಿಸಲಾಗುತ್ತದೆ ಎಂದು ಎನ್‌. ಶಶಿಕುಮಾರ್ ತಿಳಿಸಿದರು.

ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚಿಸಲು ಬಯಸುವ ಸಾರ್ವಜನಿಕರನ್ನು ಇಲ್ಲಿ ತಪಾಸಣೆ ಮಾಡಲಾಗುತ್ತದೆ. ಕೈಗಳಿಗೆ ಸ್ಯಾನಿಟೈಸರ್‌ ಹಾಕಿದ ನಂತರ ಠಾಣೆಯ ಒಳಗೆ ಪ್ರವೇಶ ಕಲ್ಪಿಸಲಾಗುತ್ತದೆ ಎಂದರು.

ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲೂ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ರ‍್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮಾಡಿದ ಬಳಿಕವೇ ಆರೋಪಿಯನ್ನು ಠಾಣೆಗೆ ಕರೆತರಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT