ಗುರುವಾರ , ಮೇ 28, 2020
27 °C

176 ಕನ್ನಡಿಗರು ದುಬೈಯಿಂದ ಮಂಗಳೂರಿಗೆ ವಾಪಸ್: ನೇರ ಕ್ವಾರಂಟೈನ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅನಿವಾಸಿ ಭಾರತೀಯರನ್ನು ಕರೆತಂದ ಮೊದಲ ವಿಮಾನ ದುಬೈನಿಂದ ರಾತ್ರಿ 10.10ಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನದಲ್ಲಿದ್ದ 176 ಮಂದಿಯ ಆರೋಗ್ಯ ತಪಾಸಣೆ ನಡೆಸಿ, ನೇರವಾಗಿ ಕ್ವಾರಂಟೈನ್‌ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಯಿತು.

ಮಂಗಳವಾರ ಸಂಜೆ 5.10ಕ್ಕೆ ದುಬೈನಿಂದ ಹೊರಟ ಏರ್‌ ಇಂಡಿಯಾ ವಿಮಾನ ಐಎಕ್ಸ್‌ 384, ರಾತ್ರಿ ನಗರಕ್ಕೆ ಬಂದಿತು. ವಿಮಾನದಲ್ಲಿದ್ದ ಎಲ್ಲ ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಎ, ಬಿ, ಸಿ ವರ್ಗದಡಿ ವಿಂಗಡಿಸಿ, ಕ್ವಾರಂಟೈನ್‌ಗೆ ಒಳಪಡಿಸಲಾಯಿತು.

ಇದನ್ನೂ ಓದಿ: ಮಲೇಷ್ಯಾದಿಂದ ಮುಂಬೈಗೆ, ಕತಾರ್‌ನಿಂದ ತಿರುವನಂತಪುರಕ್ಕೆ ಬಂದಿಳಿದ ಭಾರತೀಯರು

ವಿಮಾನದಲ್ಲಿ ಒಟ್ಟು 176 ಜನ ಪ್ರಯಾಣಿಕರಿದ್ದು, ಇದರಲ್ಲಿ 95 ಪುರುಷರು, 38 ಗರ್ಭಿಣಿಯರೂ ಸೇರಿದಂತೆ 81 ಮಹಿಳೆಯರು ಹಾಗೂ 12 ಮಂದಿ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರು ಮಂಗಳೂರಿಗೆ ಬಂದಿಳಿದರು.

ಹೊರಗಿನವರಿಗೆ ಅವಕಾಶವಿಲ್ಲ: ದುಬೈನಿಂದ ಪ್ರಯಾಣಿಕರನ್ನು ಕರೆದೊಯ್ಯಲು ಅವರ ಸಂಬಂಧಿಕರಿಗೆ ಅವಕಾಶ ಇರಲಿಲ್ಲ. ಅಲ್ಲದೇ ಯಾರೊಬ್ಬರೂ ವಿಮಾನ ನಿಲ್ದಾಣಕ್ಕೆ ಬರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.

ಪ್ರಯಾಣಿಕರನ್ನು ಸ್ವೀಕರಿಸುವುದು, ಹೋಟೆಲ್ ಬುಕ್ಕಿಂಗ್ ವ್ಯವಸ್ಥೆ, ವಾಹನ ವ್ಯವಸ್ಥೆ, ಹೋಟೆಲ್ ಕ್ವಾರಂಟೈನ್ ವ್ಯವಸ್ಥೆ ಸೇರಿದಂತೆ ಪ್ರತಿ ವಿಭಾಗಕ್ಕೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿದ್ದು, ಅಧಿಕಾರಿಗಳು ಪ್ರಯಾಣಿಕರ ಮಾಹಿತಿ ಸಂಗ್ರಹಿಸಿದರು.

ಪ್ರಯಾಣಿಕರು ಇಳಿದ ನಂತರ ವಿಮಾನ ನಿಲ್ದಾಣದಲ್ಲೇ ಹಣ ವರ್ಗಾವಣೆ, ಸಿಮ್‌ ವಿತರಣೆ, ಆರೋಗ್ಯ ಕಿಟ್‌ ವಿತರಣೆ, ಉಪಾಹಾರದ ವ್ಯವಸ್ಥೆ ಮಾಡಲಾಯಿತು. ಒಟ್ಟು 17 ಹೋಟೆಲ್‌ಗಳು ಹಾಗೂ 12 ಹಾಸ್ಟೆಲ್‌ಗಳನ್ನು ನಿಗದಿಪಡಿಸಿದ್ದು, ವಿಮಾನ ನಿಲ್ದಾಣದಲ್ಲೇ ಹೋಟೆಲ್‌ಗಳನ್ನು ಗುರುತಿಸಲು ಹಾಗೂ ಆನ್‌ಲೈನ್ ಬುಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ದುಬೈನಿಂದ ಬಂದವರು ತಮ್ಮ ಇಚ್ಛೆಗೆ ಅನುಗುಣವಾಗಿ ಹೋಟೆಲ್‌ಗಳಿಗೆ ತೆರಳಿದರು. ಕ್ವಾರಂಟೈನ್‌ ಅವಧಿಯ ಹೋಟೆಲ್‌ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗಿದೆ.

ಪ್ರೊಬೆಷನರಿ ಐಎಎಸ್‌ ಅಧಿಕಾರಿ ರಾಹುಲ್‌ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್‌, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.

ತವರಿಗೆ ಮರಳಿದ ಸಂತಸ

ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿಯೇ ಉಳಿದಿದ್ದ ಕನ್ನಡಿಗರು ಮಂಗಳವಾರ ರಾತ್ರಿ ತವರಿಗೆ ಬಂದಿಳಿಯುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದರು.

‘ತಾಯ್ನಾಡಿಗೆ ಮರಳಬೇಕು ಎನ್ನುವ ಬಹುದಿನಗಳ ಹಂಬಲ ಈಗ ಈಡೇರಿದೆ. ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ಅಲ್ಲಿಯೇ ಉಳಿಯುವಂತಾಗಿತ್ತು. ಮಕ್ಕಳು, ಮಹಿಳೆಯರು ಹಾಗೂ ತುರ್ತು ವೈದ್ಯಕೀಯ ಸೇವೆಯ ಅಗತ್ಯ ಇರುವವರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ’ ಎಂದು ಪ್ರಯಾಣಿಕರು ಸಂತಸ ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು