ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ನೀರು: ಹರೇಕಳ ಡ್ಯಾಂನತ್ತ ಕಣ್ಣು

ಮಹಾನಗರ ಪಾಲಿಕೆಯಲ್ಲಿ ನಿರಂತರ ನೀರು ಮಾಹಿತಿ ಕಾರ್ಯಾಗಾರ
Last Updated 6 ಜನವರಿ 2021, 5:27 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ನಿರಂತರ ನೀರು ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, 2031 ರ ನಂತರ ಹರೇಕಳದಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್‌ ಕಂ ಬ್ಯಾರೇಜ್‌ ಅನ್ನು ಪಾಲಿಕೆ ಅವಲಂಬಿಸಲಿದೆ.

ಮಹಾನಗರ ಪಾಲಿಕೆಗೆ ನಿರಂತರ ನೀರು ಪೂರೈಕೆ ಮಾಡುವ ಜಲಸಿರಿ ಯೋಜನೆ ಕುರಿತಂತೆ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಹಲವು ಸದಸ್ಯರು, ನಿರಂತರ ನೀರಿಗೆ ಜಲಮೂಲ ಯಾವುದು ಎನ್ನುವ ಪ್ರಶ್ನೆ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ವಹಣೆ ಸಂಸ್ಥೆಯಾದ ಸೂಯೆಝ್ ಕಂಪನಿಯ ಅಧಿಕಾರಿ, ‘ಈಗ ಪಂಪ್ ಮಾಡಲಾಗುತ್ತಿರುವ ನೀರಿನಂತೆ 2031ರವರೆಗೆ ನಗರಕ್ಕೆ ನೀರು ಪೂರೈಕೆ ಸಾಧ್ಯವಾಗಲಿದೆ. ಬಳಿಕ ಈಗಾಗಲೇ ನಿಗದಿಯಾಗಿರುವಂತೆ ಅಡ್ಯಾರ್ ಕಣ್ಣೂರಿನಲ್ಲಿ 10 ಎಕರೆ ಜಾಗದಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡುತ್ತಿದ್ದು, ಅಲ್ಲಿಂದ ಹೆಚ್ಚುವರಿ 100 ಎಂಎಲ್‌ಡಿ ನೀರು ಪೂರೈಕೆ ಸಾಧ್ಯವಾಗಲಿದೆ‘ ಎಂದರು.

ಇದರಿಂದ ಸಮಾಧಾನಗೊಳ್ಳದ ಆಡಳಿತ ಪಕ್ಷದ ಸದಸ್ಯ ಸುಧೀರ್ ಶೆಟ್ಟಿ, ‘ಸದ್ಯಕ್ಕೆ 140 ಎಂಎಲ್‌ಡಿ ನೀರು ಪೂರೈಕೆ ಎಂದು ಹೇಳಲಾಗುತ್ತಿದ್ದರೂ, ಸುಮಾರು 20 ಎಂಎಲ್‌ಡಿಯಷ್ಟು ನೀರು ಸೋರಿಕೆಯಾಗುತ್ತಿದೆ. ಈಗಾಗಲೇ ಎಡಿಬಿ 1ರ ಸಾಲದ ಹೊರೆ ಜನರ ಮೇಲಿದೆ. ಇದೀಗ ಸಮರ್ಪಕ ವ್ಯವಸ್ಥೆ, ಜಲಮೂಲದ ಬಗ್ಗೆ ಸ್ಪಷ್ಟವಾಗದೇ, ಎಡಿಬಿ 2 ಹೊರೆ ಜನರ ಮೇಲೆ ಹಾಕಲು ಮುಂದಾದರೆ ಮಹಾನಗರ ಪಾಲಿಕೆಯೇ ಹೊಣೆಯಾಗಲಿದೆ’ ಎಂದು ಎಚ್ಚರಿಸಿದರು.

‘ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯವರು, ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರ ಗಮನಕ್ಕೆ ತರದೇ ಕಾಮಗಾರಿ ಆರಂಭಿಸಿದ್ದಾರೆ. ನಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಕೆಲಸ ಆಗಿರುವುದು ನನಗೆ ಗೊತ್ತೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ಲ್ಯಾನ್ಸಿಲಾಟ್ ಪಿಂಟೋ, ಸಂಗೀತಾ ಹಾಗೂ ಶಶಿಧರ ಹೆಗ್ಡೆ ಕೂಡ ಜಲಮೂಲದ ಬಗ್ಗೆ ಪ್ರಶ್ನಿಸಿದರು. ಉಪ ಮೇಯರ್ ವೇದಾವತಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷದ ನಾಯಕ ಅಬ್ದುಲ್ ರವೂಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಜಗದೀಶ್ ಶೆಟ್ಟಿ, ಕಿರಣ್ ಕುಮಾರ್, ಶರತ್ ಉಪಸ್ಥಿತರಿದ್ದರು.

ಸಿಗದ ಮಾಹಿತಿ: ಸದಸ್ಯರ ಆಕ್ಷೇಪ

ಸಭೆಯಲ್ಲಿ ಸಂಬಂಧಪಟ್ಟವರಿಂದ ಸೂಕ್ತ ಮಾಹಿತಿ ಲಭ್ಯವಾಗದ್ದರಿಂದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಒಬ್ಬೊಬ್ಬರಾಗಿ ನಿರ್ಗಮಿಸಲು ಆರಂಭಿಸಿದರು. ಈ ಕುರಿತಂತೆಯೇ ಚರ್ಚೆ ಮುಂದುವರಿದ ಹಿನ್ನೆಲೆಯಲ್ಲಿ ಆಯುಕ್ತರು ಮತ್ತೊಂದು ಸಭೆ ನಡೆಸಲು ನಿರ್ಧರಿಸಿದರು.

2046 ರವರೆಗೆ ನಿರಂತರ ನೀರು ಪೂರೈಕೆ ಮಾಡುವ ಯೋಜನೆಗಾಗಿ ಈಗಿರುವ ಜಲಮೂಲವನ್ನು ಹೊರತುಪಡಿಸಿ, ಗುತ್ತಿಗೆ ಸಂಸ್ಥೆಯು ಹೊಸತಾಗಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ? ಯಾವ ರೀತಿಯಲ್ಲಿ ನೀರು ಪೂರೈಕೆ ಮಾಡಲಿದೆ ಎಂಬ ಬಗ್ಗೆ ಸದಸ್ಯರಿಗೆ ಮಾಹಿತಿ ಸಿಗದಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT