ಶನಿವಾರ, ಏಪ್ರಿಲ್ 1, 2023
23 °C

ಹುಳುಬಿದ್ದ ಪದಾರ್ಥಗಳ ವಿತರಣೆ: ಪೋಷಕರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸವಳಂಗ (ನ್ಯಾಮತಿ): ಗ್ರಾಮದ ಅಂಗನವಾಡಿ ಕೇಂದ್ರದಿಂದ ಪೌಷ್ಟಿಕಾಂಶ ಪದಾರ್ಥಗಳ ವಿತರಣೆ ಭಾಗವಾಗಿ ಪ್ರಸಕ್ತ ತಿಂಗಳು ಹುಳುಬಿದ್ದ ಕಡಲೆಬೇಳೆ ವಿತರಿಸಿದ್ದು, ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಳು ತಿಂದಿರುವ ಕಡಲೆಬೆಳೆ ಹಾಗೂ ಸರಿಯಾದ ಅಳತೆ ಇಲ್ಲದೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದ ಬಗ್ಗೆ ಪೋಷಕರು ಅಂಗನವಾಡಿ ಕಾರ್ಯಕರ್ತೆಯನ್ನು ಪ್ರಶ್ನಿಸಿದ್ದಾರೆ.

‘ಮೇಲಧಿಕಾರಿಗಳು ಹಳೆಯ ದಾಸ್ತಾನು ಖಾಲಿ ಮಾಡಿ ಎಂದು ಸೂಚಿಸಿದ್ದಾರೆ. ಇದನ್ನೇ ತೆಗೆದುಕೊಂಡು ಹೋಗಿ ಎಂದು ಅಂಗನವಾಡಿ ಕಾರ್ಯಕರ್ತೆ ಹೇಳುತ್ತಾರೆ. ಈ ಬಾರಿ ಉತ್ತಮವಾದ ಕಡಲೆಬೇಳೆ ಬಂದಿದ್ದರೂ ಹಾಗೇ ಇಟ್ಟುಕೊಂಡಿದ್ದಾರೆ’ ಎಂದು ಪೋಷಕರಾದ ಲತಾ ಪ್ರಶಾಂತ, ಗಿರಿಜಮ್ಮ, ಲಕ್ಷ್ಮೀಬಾಯಿ, ನಿರೂಷ ಹೇಳಿದರು.

‘ಎರಡು ತಿಂಗಳಿಂದ ಕಳಪೆ ಕಡಲೆಬೇಳೆ, ಸಕ್ಕರೆ, ಮಸಾಲೆಪುಡಿ, ಶೆಂಗಾ, ಗೋಧಿ, ತೊಗರಿಬೇಳೆ, ಹೆಸರುಕಾಳುಗಳನ್ನು ತೂಕ ಮಾಡದೆ ಅಂದಾಜಿನ ಮೇಲೆ ವಿತರಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಲಾದ ಆಹಾರ ಪದಾರ್ಥಗಳ ದಾಸ್ತಾನು ಪಟ್ಟಿ ಮತ್ತು ವಿತರಣೆಯ ಬಗ್ಗೆ ಫಲಕ ಹಾಕುವುದಿಲ್ಲ’ ಎಂದು ಪೋಷಕಿ ಶಾಲಿನಿ ಗೀರೀಶ ಆರೋಪಿಸಿದರು.

‘ಕೇಂದ್ರಕ್ಕೆ ಎಷ್ಟು ಆಹಾರ ಪದಾರ್ಥ ಬೇಕೋ ಅಷ್ಟಕ್ಕೆ ಬೇಡಿಕೆ ಸಲ್ಲಿಸುತ್ತೇವೆ. ಸಂಗ್ರಹವಿರುವ ಪದಾರ್ಥ ಬೇಡವೆಂದರೂ ಗುತ್ತಿಗೆದಾರ ಇಳಿಸಿ ಹೋಗುತ್ತಾರೆ. ಸಂಗ್ರಹ ಹೆಚ್ಚಾದಾಗ ಸಮಸ್ಯೆ ಉಂಟಾಗುತ್ತದೆ. ಅಳತೆ ಮಾಡಲು ತೂಕದ ಯಂತ್ರ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ’ ಎಂದು ಅಂಗನವಾಡಿ ಕಾರ್ಯಕರ್ತೆ ವೈ.ಕೆ. ಲೀಲಾವತಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.