ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಾರದ ಮುಳ್ಳಿನಂತೆ ನಿರಂತರ ಚಲನಶೀಲರಾಗಿ

ಬಾಲಮಂದಿರದ ಮಕ್ಕಳಿಗೆ ವಾಚ್‌, ಬ್ಯಾಗ್‌ ವಿತರಿಸಿದ ಜಿಲ್ಲಾಧಿಕಾರಿ ರಮೇಶ್‌
Last Updated 30 ಜೂನ್ 2018, 9:15 IST
ಅಕ್ಷರ ಗಾತ್ರ

ದಾವಣಗೆರೆ: ‘ಗಡಿಯಾರದ ಮುಳ್ಳು ನಿರಂತರ ಚಲಿಸುತ್ತಿರುತ್ತದೆ. ಅದರಂತೆ ನಾವು ಕೂಡಾ ಚಲನಶೀಲರಾಗಬೇಕು. ಚಲನೆ ನಿಂತರೆ ಸತ್ತಂತೆ’ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಸಂಯುಕ್ತವಾಗಿ ಶ್ರೀರಾಮನಗರದಲ್ಲಿರುವ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ವಾಚ್‌ ಮತ್ತು ಬ್ಯಾಗ್‌ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಓದುವುದು, ಬರೆಯುವುದು, ಜಿಗಿಯುವುದು, ಪಾತ್ರೆ ತೊಳೆಯುವುದು, ನಮ್ಮ ಬಟ್ಟೆ ನಾವೇ ತೊಳೆಯುವುದು, ಆಟವಾಡುವುದು ಹೀಗೆ ಯಾವುದಾದರೂ ಚಟುವಟಿಕೆಗಳನ್ನು ಮಾಡುತ್ತಾ ಇರಬೇಕು. ಗಡಿಯಾರದ ಮುಳ್ಳು ಓಡುವುದನ್ನು ನಿಲ್ಲಿಸಿದರೆ ಹೇಗೆ ನಿರುಪಯೋಗಿ ಎಂದು ಮೂಲೆಗೆ ಹಾಕುತ್ತೇವೆಯೋ ಅದರ ಹಾಗೆಯೇ ಚಲನೆ ನಿಲ್ಲಿಸಿದರೆ ಮನುಷ್ಯನನ್ನು ಕೂಡಾ ಈ ಜಗತ್ತು ಮೂಲೆಗುಂಪು ಮಾಡುತ್ತದೆ’ ಎಂದು ವಿವರಿಸಿದರು.

ಭೂಮಿಗೆ ಹಾಕಿದ ಬೀಜ ಮಾರ್ನಾಲ್ಕು ದಿನಗಳಲ್ಲಿ ಮೊಳಕೆ ಬರುತ್ತದೆ. ಅಲ್ಲಿಂದ ಬೆಳೆಯುತ್ತಲೇ ಇರುತ್ತದೆ. ದೊಡ್ಡದಾದ ಮೇಲೆ ಹೂ ಬಿಡುತ್ತದೆ. ಕಾಯಿಯಾಗುತ್ತದೆ. ಕಾಯಿ ಹಣ್ಣಾಗುತ್ತದೆ. ಇದೇ ರೀತಿ ಪ್ರತಿಯೊಂದರಲ್ಲಿಯೂ ಚಲನಶೀಲತೆ ಇರುತ್ತದೆ. ಬೀಜ ಮೊಳಕೆಯೊಡೆದಿಲ್ಲ ಅಂದರೆ, ಗಿಡ ಮರಗಳು ಬಾಡಿ ಹೋದವು ಎಂದರೆ ಸತ್ತಿವೆ ಎಂದರ್ಥ. ಇದು ಮನುಷ್ಯರಿಗೂ ಅನ್ವಯ ಎಂದು ತಿಳಿಸಿದರು.

‘ನಾವು ಏನೇ ಮಾಡಿದರೂ ಅದು ಇನ್ನೊಬ್ಬರಿಗೆ ನೋವು ತರುವ ರೀತಿಯಲ್ಲಿ ಇರಬಾರದು. ಈ ಎಚ್ಚರಿಕೆ ಇಟ್ಟುಕೊಂಡೇ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಬಾಲಕಿಯರ ಬಾಲಮಂದಿರದ 64 ಮಂದಿಗೆ ಮತ್ತು ಬಾಲಕರ ಬಾಲಮಂದಿರದ 36 ಮಂದಿಗೆ ಬ್ಯಾಗ್‌ ಮತ್ತು ವಾಚ್‌ ವಿತರಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ವಾರ್ತಾ ಇಲಾಖೆಯ ಅಶೋಕ್‌ ಉಪಸ್ಥಿತರಿದ್ದರು. ಮಕ್ಕಳ ರಕ್ಷಣಾಧಿಕಾರಿ ದೇವರಾಜ್‌ ಸ್ವಾಗತಿಸಿದರು. ಬಾಲಕಿಯರ ಬಾಲಮಂದಿರದ ಪರಿವೀಕ್ಷಣಾಧಿಕಾರಿ ಪಿ.ಆರ್‌. ಶೋಭಾ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಡಿ.ಸಿ. ಪಾಠ

ಬಾಲಮಂದಿರದ ವಿದ್ಯಾರ್ಥಿಗಳಿಗೆ ಸಮಯದ ಬಗ್ಗೆ ಜಿಲ್ಲಾಧಿಕಾರಿ ರಮೇಶ್‌ ಪಾಠ ಮಾಡಿದರು. ವಾಚ್‌ ಯಾಕೆ ಬೇಕು? ಗಂಟೆ ಯಾಕೆ ನೋಡಬೇಕು? ಇದರಿಂದ ಏನು ಉಪಯೋಗ? ಈಗ ಎಷ್ಟು ಗಂಟೆಯಾಯಿತು ಎಂದು ಪ್ರಶ್ನೆ ಕೇಳಿ ಮಕ್ಕಳಿಂದ ಉತ್ತರ ಪಡೆದರು. ಬೆಳಿಗ್ಗೆ ಎಷ್ಟು ಗಂಟೆಗೆ ಏಳುತ್ತೀರಿ? ಯಾರು ಏಳಿಸುತ್ತಾರೆ ಎಂದು ಕೇಳಿದರು. ಅಮ್ಮ ಎಬ್ಬಿಸುತ್ತಾರೆ ಎಂದು ಒಂದು ಹುಡುಗಿ ಉತ್ತರ ನೀಡಿದಾಗ, ‘ಇನ್ನು ಮುಂದೆ ನೀವೇ ಅಮ್ಮನನ್ನು ಎಬ್ಬಿಸಬೇಕು’ ಎಂದು ತಿಳಿಸಿದರು.

ಬಾಲಮಂದಿರದಲ್ಲಿ ಊಟ ಸರಿ ಇದೆಯೇ? ನಿಮ್ಮನ್ನು ದೂರ ಇಡುತ್ತಿದ್ದಾರೆಯೇ? ಬೇರೆ ಏನಾದರೂ ಸಮಸ್ಯೆ ಇದೆಯೇ? ಎಂದು ಮಕ್ಕಳನ್ನು ವಿಚಾರಿಸಿದರು. ಬಿಸಿ ನೀರು ಬರುವುದಿಲ್ಲ ಎಂಬ ಒಂದು ಸಮಸ್ಯೆ ಬಿಟ್ಟರೆ ಮತ್ತೆಲ್ಲ ಚೆನ್ನಾಗಿದೆ, ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಮಕ್ಕಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT