ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ವಿರುದ್ಧ ನಾಳೆ ಚಿಪ್ಪು ಚಳವಳಿ: ಎನ್. ರವಿಕುಮಾರ್

Published 21 ಏಪ್ರಿಲ್ 2024, 8:16 IST
Last Updated 21 ಏಪ್ರಿಲ್ 2024, 8:16 IST
ಅಕ್ಷರ ಗಾತ್ರ

ದಾವಣಗೆರೆ: ಕಾಂಗ್ರೆಸ್ ಸರ್ಕಾರ ನೀಡಿರುವ ಚೊಂಬು ಜಾಹೀರಾತನ್ನು ವಿರೋಧಿಸಿ ಬಿಜೆಪಿಯು ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿ ಏ.22ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.

 ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ, ಬರಗಾಲದ ಸಂದರ್ಭ ಪರಿಹಾರ ನೀಡಿಲ್ಲ, ಕಿಸಾನ್  ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ ₹6000ಗಳನ್ನು ಬಿಟ್ಟರೆ ಬಿಜೆಪಿ ಸರ್ಕಾರವಿದ್ದಾಗ ನೀಡುತ್ತಿದ್ದ ₹4000ಗಳನ್ನು ರದ್ದು ಮಾಡಿ, ರೈತರಿಗೆ ಚಿಪ್ಪು ನೀಡಿದೆ. ವಿದ್ಯಾರ್ಥಿವೇತನ ರದ್ದು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ, ಹಾಲಿನ ಪ್ರೋತ್ಸಾಹ ಧನ ರದ್ದು ಮಾಡಿ ಹಾಲು ಉತ್ಪಾದಕರಿಗೆ, ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ₹11,146 ಕೋಟಿಯನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಪರಿಶಿಷ್ಟರಿಗೆ, ವೃದ್ಧಾಪ್ಯ ವೇತನ ನೀಡದೇ ವೃದ್ಧರ ಕೈಗೂ ಈ ಸರ್ಕಾರ ಚಿಪ್ಪು ನೀಡಿದೆ. ಇದನ್ನು ಖಂಡಿಸಿ ದಾವಣಗೆರೆಯಲ್ಲಿ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ರೈತರು, ಮಹಿಳೆಯರು ಹಾಗೂ ದಲಿತರಿಗೆ ಅಕ್ಷಯ ಪಾತ್ರೆಯನ್ನು ನೀಡಿದರೆ, ಜನರ ಕೈಗೆ ಚಿಪ್ಪು ನೀಡಿದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಚಿಪ್ಪು ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದ್ದು, ಯುವತಿಯರು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆಯೇ ಸಾಕ್ಷಿ . ಪ್ರೀತಿಸಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯದ ಫಯಾಜ್ ಎಂಬಾತ ಹಾಡುಹಗಲೇ 9 ಬಾರಿ ಚುಚ್ಚಿ ಸಾಯಿಸಿದ್ದಾನೆ. ಆದರೆ ರಾಜ್ಯ ಗೃಹ ಸಚಿವರು ಇದು ವೈಯಕ್ತಿಕ ವಿಷಯ ಎಂದು ತೇಪೆ ಹಚ್ಚಲು ಮುಂದಾಗಿದ್ದಾರೆ. ಉಗ್ರಗಾಮಿಗಳಿಗೆ, ಭಯೋತ್ಪಾದಕರಿಗೆ 'ಮೈಬ್ರದರ್'' ನೀತಿ ಅನುಸರಣೆ ಮಾಡುತ್ತಿರುವುದರಿಂದ ದುಷ್ಕೃತ್ಯಗಳು ಜಾಸ್ತಿಯಾಗಿವೆ ಎಂದು ದೂರಿದರು.

ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾದ ಮೇಲೆ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿಸಲಿ. ಸಂಸದರು ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜುಗೆ ಯತ್ನಿಸಿದರೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕಾಲೇಜಿಗೆ ಅಡ್ಡಿ ಆಗುತ್ತದೆ ಎಂದು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಹತ್ತು ತಿಂಗಳಲ್ಲಿ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಪ್ರಶ್ನಿಸ ಬೇಕಾಗುತ್ತದೆ. ಅರ್ಧಂಬರ್ಧ ಕುಂದುವಾಡ ಕೆರೆ ಮಾಡಿ ಮಲ್ಲಿಕಾರ್ಜುನ ಸಾಗರ ಎಂದು ಹೆಸರಿಟ್ಟಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಅದನ್ನು ಅಭಿವೃದ್ಧಿಪಡಿಸಿದೆವು ಎಂದು ಹೇಳಿದರು.

ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದು ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ. ನಾನು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಆಗುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮ ಪಂಚಾಯತಿ ಸದಸ್ಯರಾಗಲೂ ಲಾಯಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲ್ ಕುಮಾರ್ ನಾಯ್ಕ, ಮಾಜಿ ಮೇಯರ್ ಎಸ್.ಟಿ. ವೀರೇಶ್, ವಕ್ತಾರ ಬಿ.ಎಂ‌. ಸತೀಶ್, ಮಹಾನಗರ ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನ ಕುಮಾರ್, ಎಚ್.ಪಿ. ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT