ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕ್ರಿಕೆಟ್‌ ಬ್ಯಾಟ್‌ ಕೇಳುವವರೇ ಇಲ್ಲ

ಕೊರೊನಾ ಕಸಿದ ಬದುಕು; ಬ್ಯಾಟ್‌ ಮೇಕರ್ಸ್‌ ಅತಂತ್ರರಿಲ್ಲಿ....
Last Updated 5 ಮೇ 2020, 1:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರು ತಿಂಗಳ ಕಾಲ ಕ್ರಿಕೆಟ್‌ ಬ್ಯಾಟ್‌ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಗುಜರಾತಿನ ಕ್ರಿಕೆಟ್‌ ಬ್ಯಾಟ್‌ ತಯಾರಕರ‌ ಜೀವನ ಇತ್ತ ಕೊರೊನಾ ಲಾಕ್‌ಡೌನ್‌ನಿಂದಾಗಿ ವ್ಯಾಪಾರವಿಲ್ಲದೆ, ಅತ್ತ ಊರು ಸೇರಿಕೊಳ್ಳಲಾಗದೇ ಅತಂತ್ರಗೊಂಡಿದೆ.

ಪ್ರತಿ ವರ್ಷ ಡಿಸೆಂಬರ್‌ ಬಂತೆಂದರೆ ಇಲ್ಲಿನ ಕಿಮ್ಸ್‌ ಗೇಟ್‌ ಎದುರು ಗುಜರಾತ್‌ನಿಂದ ಕ್ರಿಕೆಟ್‌ ಬ್ಯಾಟ್‌ ಮೇಕರ್ಸ್‌ ತಮ್ಮ ಬಿಡಾರ ಹೂಡುತ್ತಾರೆ. ಮೂರ್ನಾಲ್ಕು ಕುಟುಂಬಗಳು ಆರು ತಿಂಗಳನ್ನು ಇದೇ ಜಾಗದಲ್ಲಿ ಕಳೆಯುತ್ತಾರೆ. ಬೇಸಿಗೆ ರಜೆ ಆರಂಭವಾತ್ತಲೇ ಇವರಿಗೆ ಸುಗ್ಗಿ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕ್ರಿಕೆಟ್‌ ಬ್ಯಾಟ್‌ಗಳ ಮಾರಾಟ ಹೆಚ್ಚಾಗಿರುತ್ತದೆ. ಜೂನ್‌ನಲ್ಲಿ ಮಳೆ ಆರಂಭವಾಗುತ್ತಲೇ ಗಳಿಕೆಯೊಂದಿಗೆ ತಮ್ಮೂರಿನ ದಾರಿ ಹಿಡಿಯುತ್ತಿದ್ದರು. ಆದರೆ, ಈ ವರ್ಷ ಮಾತ್ರ ಕ್ರಿಕೆಟ್‌ ಬ್ಯಾಟ್‌ ಮೇಕರ್ಸ್‌ ಗಳಿಕೆಯನ್ನು ಕೊರೊನಾ ಕಸಿದುಕೊಂಡಿದೆ.

20 ವರ್ಷಗಳಿಂದ ಗುಜರಾತಿನ ಅನ್ನಾನ್‌ನಿಂದ ಇಲ್ಲಿಗೆ ಈ ಕುಟುಂಬಗಳು ಬರುತ್ತಿವೆ. ಆರು ತಿಂಗಳ ವಾಸಕ್ಕಾಗಿ ಅವರು ಕಟ್ಟಿಕೊಳ್ಳುವ ಸಣ್ಣ ಬಿಡಾರವೇ ಅವರ ಪಾಲಿಗೆ ನೆಮ್ಮದಿಯ ಸೂರು. ಮೂರು ಕುಟುಂಬಗಳ 15 ಜನರಿದ್ದಾರೆ. ಫೆಬ್ರುವರಿ, ಮಾರ್ಚ್‌ನಲ್ಲಿ ಬ್ಯಾಟ್‌ಗಳು ಮಾರಾಟವಾಗಿವೆ. ಯಾವಾಗ ಲಾಕ್‌ಡೌನ್‌ ಆರಂಭವಾಯಿತೋ ಅಲ್ಲಿಂದ ಇವರ ಕಸುಬು ಮೂಲೆಗುಂಪಾಗಿದೆ. ಬ್ಯಾಟ್‌ಗಳನ್ನು ಕೇಳುವವರೇ ಇಲ್ಲ. ವಾಪಸ್‌ ಊರು ಸೇರಿಕೊಳ್ಳೋಣ ಎಂದರೆ ರೈಲು, ವಾಹನ ಸಂಚಾರಕ್ಕೆ ಅವಕಾಶವಿಲ್ಲದ್ದರಿಂದ ಬಿಡಾರದಲ್ಲೇ ದಿನ ದೂಡುತ್ತಿದ್ದಾರೆ.

‘ಈ ಬಾರಿ ವ್ಯಾಪಾರವಿಲ್ಲದ್ದರಿಂದ ನಿತ್ಯದ ಜೀವನಕ್ಕೂ ಸಮಸ್ಯೆಯಾಗಿದೆ. ಒಂದೆರಡು ಬಾರಿ ದಿನಸಿ ಕಿಟ್‌ಗಳನ್ನು ನೀಡಿದ್ದರು. ಆದರೆ ಅವೆಲ್ಲ ಖಾಲಿಯಾಗಿವೆ. ಕೊರೊನಾ ವ್ಯಾಪಾರಕ್ಕೆ ಪೆಟ್ಟು ನೀಡಿದೆ’ ಎನ್ನುತ್ತಾರೆ ನಾನು ಭಾಯ್‌.

‘ಈಗಾಗಲೇ ಮೂರು ಬಾರಿ ನಮ್ಮ ಬಿಡಾರಗಳು ಗಾಳಿ, ಮಳೆಗೆ ಹಾರಿ ಹೋಗಿವೆ. ಮತ್ತೆ ಸರಿಪಡಿಸಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದೇವೆ. ಗಂಡಸರಷ್ಟೇ ಇದ್ದರೆ ಹೇಗೋ ನಡೆಯುತ್ತಿತ್ತು. ಹೆಂಗಸರು, ಮಕ್ಕಳು ಇರೋದ್ರಿಂಗ್‌ ಜೀವನ ಕಷ್ಟವೆನಿಸಿದೆ’ ಎನ್ನುತ್ತಾರೆ ಮಹೇಶ ನಾನು ಭಾಯ್‌.

‘ಡಿಸೆಂಬರ್‌ನಿಂದ ಜೂನ್‌ವರೆಗೆ 5,000 ಬ್ಯಾಟ್‌ಗಳನ್ನು ಮಾಡಿ ಮಾರುತ್ತಿದ್ದೆವು. ಈ ಭಾರಿ ಮುಕ್ಕಾಲು ಭಾಗ ಕಚ್ಚಾ ಸಾಮಗ್ರಿ ಹಾಗೇ ಉಳಿದಿದೆ. ಇವೆಲ್ಲವನ್ನು ತರಲು ₹60ಸಾವಿರ ಖರ್ಚು ಬಂದಿತ್ತು. ಈಗ ಕೈಯಲ್ಲಿ ಚಿಕ್ಕಾಸು ಉಳಿದಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT