ಶನಿವಾರ, ಜುಲೈ 24, 2021
27 °C
ಕೊರೊನಾ ವಿರುದ್ಧದ ಕಾರ್ಯಾಚರಣೆಯನ್ನು ಬಿಚ್ಚಿಟ್ಟ ಜಿ.ಪಂ. ಸಿಇಒ ಪದ್ಮ ಬಸವಂತಪ್ಪ

ದಾವಣಗೆರೆ: ರಾತ್ರಿ 2.30ರ ವರೆಗೂ ಮುಂದುವರಿದಿತ್ತು ಕೊರೊನಾ ಸೋಂಕಿತರ ಪತ್ತೆ ಕಾರ್ಯ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಕೊರೊನಾ ಸೋಂಕಿತರ ಸಂಖ್ಯೆ ಒಮ್ಮೆಲೆ ಅಧಿಕಗೊಂಡಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಳಿತು ರಾತ್ರಿ 2.30ರ ವರೆಗೂ ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಿ ಕರೆ ಮಾಡುತ್ತಿದ್ದೆವು. ಅಷ್ಟು ಹೊತ್ತಿಗೂ ಅವರು ಕರೆ ಸ್ವೀಕರಿಸುತ್ತಿದ್ದರು. ಸಮಸ್ಯೆ ಏನೆಂದರೆ ಅವರು ಸೋಂಕಿತರ ಜತೆಗಿನ ಸಂಪರ್ಕವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹಲವು ಪ್ರಶ್ನೆಗಳನ್ನು ಹಾಕಿ ತಿಳಿದುಕೊಳ್ಳಬೇಕಿತ್ತು’.

ಇದು ಗ್ರಾಮಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿದ ಮತ್ತು ನಗರದಲ್ಲಿ ಪತ್ತೆಯಾದಾಗ ಹಗಲು ರಾತ್ರಿ ಕೆಲಸ ಮಾಡಿದವರಲ್ಲಿ ಒಬ್ಬರಾಗಿರುವ ಕೊರೊನಾ ವಾರಿಯರ್‌ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಕಾರ್ಯವಿಧಾನದ ಬಗ್ಗೆ ‘ಪ್ರಜಾವಾಣಿ’ಗೆ ನೀಡಿದ ವಿವರಣೆ.

‘ನಾನು ರೇಷ್ಮಾ ಹಾನಗಲ್‌ ಸೇರಿದಂತೆ 12 ಮಂದಿಯ ತಂಡಕ್ಕೆ ಇದೇ ಕೆಲಸವಾಗಿತ್ತು. 21 ಮಂದಿಗೆ ಒಂದೇ ದಿನ ಸೋಂಕು ಬಂದ ದಿನ ಇಂದೇ ಅವರೆಲ್ಲರ ಸಂಪರ್ಕಗಳನ್ನು ಪತ್ತೆ ಹಚ್ಚಬೇಕು ಎಂದು ಮುಖ್ಯಕಾರ್ಯದರ್ಶಿ ಸೂಚನೆ ನೀಡಿದ್ದರು. ಅಂದು ಮನೆಗೇ ಹೋಗಲಿಲ್ಲ’ ಎಂದು ನೆನಪಿಸಿಕೊಂಡರು.

‘ವೈದ್ಯರ ತಂಡಗಳ ನಡುವೆ ಕೆಲವು ಬಾರಿ ಸಂವಹನದ ಕೊರತೆಯಿಂದ ಸಣ್ಣಪುಟ್ಟ ಸಮಸ್ಯೆಗಳಾದ ಮಾತನಾಡಿ ಸರಿ ಪಡಿಸಬೇಕಾಯಿತು. ಲಾಡ್ಜ್‌ಗಳಲ್ಲಿ ಒಮ್ಮೆಲೇ ಕ್ವಾರಂಟೈನ್‌ಗೆ ಹಲವರು ಬಂದಾಗ ಉಂಟಾಗುವ ತೊಂದರೆಯನ್ನು ತಕ್ಷಣ ನಿವಾರಿಸಲು ನಮ್ಮ ತಂಡ ಕ್ರಮ ಕೈಗೊಂಡಿತ್ತು’ ಎಂದು ವಿವರಿಸಿದರು.

ಹಳ್ಳಿಗಳಲ್ಲಿ ನಿಯಂತ್ರಣ: ‘ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 19,600 ಮಂದಿ ಯುಗಾದಿ ಹಬ್ಬಕ್ಕೆಂದು ಊರಿಗೆ ಬಂದು ಬಿಟ್ಟಿದ್ದರು. ಹಳ್ಳಿಗಳಲ್ಲಿ ಮೈಗೆ ಎಣ್ಣೆ, ಅರಿಶಿನ ಹಚ್ಚಿಕೊಂಡು ಆರಾಮವಾಗಿ ಓಡಾಡುತ್ತಿದ್ದರು. ಅವೆಲ್ಲವನ್ನು ಸ್ವತಃ ನಾನೇ ಭೇಟಿ ನೀಡಿ ನಿಯಂತ್ರಿಸಿದೆ. ಒಂದು ದೇವಸ್ಥಾನಕ್ಕೆ ಜವಳ ಮಾಡಿಸಲು ಎಂದು ಬೆಂಗಳೂರಿನಿಂದ ಒಂದು ಕುಟುಂಬ ಬಂದಿತ್ತು. ಅದನ್ನು ನಿಲ್ಲಿಸಿದೆ. ಹೊರಗಿನಿಂದ ಬಂದ ಯುವಕರು ಇಸ್ಪೀಟ್‌ ಆಟ, ಕ್ರಿಕೆಟ್‌ ಆಟದಲ್ಲಿ ನಿರತರಾಗಿರುತ್ತಿದ್ದರು. ಅವೆಲ್ಲವನ್ನು ನಿಯಂತ್ರಿರಿ ಜನ ಗುಂ‍ಪುಗೂಡದಂತೆ ಮಾಡಿದೆ’ ಎಂದು ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇಂಗ್ಲಿಷ್‌ನಲ್ಲಿ ಆದೇಶ ಬರುತ್ತಿತ್ತು. ಅದನ್ನು ಕನ್ನಡದಲ್ಲಿ ವಾಯ್ಸ್‌ ಮೆಸೇಜನ್ನು ಎಲ್ಲ ಪಿಡಿಒಗಳಿಗೆ ಕಳುಹಿಸುತ್ತಿದ್ದೆ. ಈ ರೀತಿ ಕ್ರಮ ಕೈಗೊಳ್ಳಿ ಎಂದು ವಾಯ್ಸ್‌ ಮೆಸೇಜ್‌ ಮೂಲಕವೇ ಸೂಚನೆಗಳನ್ನು ನೀಡುತ್ತಿದ್ದೆ. ನಮ್ಮ ಎಲ್ಲ ಮುಂಜಾಗರೂಕತಾ ಕ್ರಮಗಳ ಜತೆಗೆಬೇ ಬೆಂಗಳೂರಿನಿಂದ ಬಂದವರಿಗಾಗಲಿ, ಕೇರಳದಿಂದ ಸುಮಾರು 50 ಮಂದಿ ಬಂದಿದ್ದರು. ಅವರಿಗಾಗಲಿ ಕೊರೊನಾ ಸೋಂಕು ಇರದೇ ಇದ್ದಿದ್ದರಿಂದ ಹಳ್ಳಿಗಳು ನೆಮ್ಮದಿಯಾಗಿವೆ’ ಎಂದು ನಿಟ್ಟುಸಿರು ಬಿಟ್ಟರು.

‘ಮನೆಯ ಹೊರಗೆ ಪ್ರತ್ಯೇಕ ಕ್ಯಾಬಿನ್‌’

ನನ್ನ ಪತಿ ಚಿತ್ರದುರ್ಗದಲ್ಲಿ ಅಧಿಕಾರಿ. ಹಾಗಾಗಿ ಅವರು ಅಲ್ಲಿಂದ ಮನೆಗೆ ಬರುತ್ತಿರಲಿಲ್ಲ. 6ನೇ ತರಗತಿ ಮತ್ತು ಎರಡನೇ ತರಗತಿಯಲ್ಲಿ ಓದುತ್ತಿರುವ ನನ್ನ ಎರಡು ಹೆಣ್ಣುಮಕ್ಕಳು ಮನೆಯಲ್ಲಿ ಇದ್ದಾರೆ. ನಾನು ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗುತ್ತಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಊಟ. ಮನೆಯ ಹೊರಗೆ ಕಾರ್‌ ಪಾರ್ಕಿಂಗ್‌ ಜಾಗದಲ್ಲಿ ಒಂದು ಕ್ಯಾಬಿನ್‌ ಮಾಡಿಸಿ ರಾತ್ರಿ ಅಲ್ಲೇ ಉಳಿದುಕೊಳ್ಳುತ್ತಿದ್ದೆ. ಮಕ್ಕಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕಾರ ನೀಡಿದರು ಎಂದು ಪದ್ಮ ಬಸವಂತಪ್ಪ ವೈಯಕ್ತಿಕ ಜೀವನವನ್ನು ತೆರೆದಿಟ್ಟರು.

ರಾತ್ರಿ 10ರ ನಂತರ ಅಡುಗೆ

ಒಂದು ದಿನ ಲಾಡ್ಜ್‌ಗಳಿಗೆ ಒಮ್ಮೆಲೆ ನೂರಾರು ಜನರನ್ನು ಕರೆತಂದು ಕ್ವಾರಂಟೈನ್‌ ಮಾಡಲಾಗಿತ್ತು. ಊಟದ ಕೊರತೆಯಾಗಿದೆ ಎಂದು ನನಗೆ ಲಾಡ್ಜ್‌ ನೋಡಲ್‌ ಅಧಿಕಾರಿ ಡಾ. ನಟರಾಜ್ ತಿಳಿಸುವ ಹೊತ್ತಿಗೆ ರಾತ್ರಿ 10 ಆಗಿತ್ತು. ಕೂಡಲೇ ನಮ್ಮ ಮನೆಯಲ್ಲಿ ಅಡುಗೆ ಮಾಡುವ ದೇವಿಕಾ ಎಂಬಾಕೆಯನ್ನು ಮನೆಗೆ ಬರ ಹೇಳಿ ಚಿತ್ರಾನ್ನ ಮಾಡಿಸಿ ರಾತ್ರಿ 11.30ಕ್ಕೆ ಎಲ್ಲರಿಗೂ ಕೊಡಿಸಿದ್ದೆ ಎಂದು ಪರಿಸ್ಥಿತಿಯ ನಿಭಾಯಿಸಿದ ರೀತಿಯನ್ನು ಸಿಇಒ ವಿವರಿಸಿದರು.

ಒಂದು ಮಹಿಳೆಗೆ ಸೋಂಕು ಬಂದಿತ್ತು. ಅವರಿಗೆ 5, 6 ಮತ್ತು 10 ವರ್ಷದ ಮೂರು ಮಕ್ಕಳಿದ್ದರು. ಪತಿ ಇಲ್ಲ. ಈ ಮಹಿಳೆ ಆಸ್ಪತ್ರೆಯಲ್ಲಿ, ಮಕ್ಕಳು ಲಾಡ್ಜ್‌ನಲ್ಲಿ. ಇಂಥ ಸಂದಿಗ್ಧ ಪರಿಸ್ಥಿತಿಯನ್ನೂ ನಮ್ಮ ನೋಡಲ್‌ ಅಧಿಕಾರಿಗಳ ತಂಡ ನಿಭಾಯಿಸಿತು. ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲ ಅಧಿಕಾರಿಗಳ ಸಹಕಾರದಿಂದ ಇದೆಲ್ಲ ಸಾಧ್ಯವಾಯಿತು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು