ದಾವಣಗೆರೆ: ‘ರಾತ್ರಿಯಾಗುತ್ತಲೇ ಎಲ್ಲಿಂದಲೋ ಬರುವ ಹುಡುಗರು ಇಲ್ಲಿನ ಉದ್ಯಾನ, ಬೀದಿಬದಿ ಅಂಗಡಿಗಳ ಬಳಿಯ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಾರೆ. ಅವರಿಗೆ ಇಲ್ಲಿ ಗಲಾಟೆ ಮಾಡಬೇಡಿ ಹೊರಡಿ ಎಂದು ಹೇಳಿದರೆ, ಈ ಜಾಗ ನಿಮ್ಮಪ್ಪಂದಾ? ಎಂದು ಪ್ರಶ್ನಿಸುತ್ತಾರೆ. ಒಮ್ಮೊಮ್ಮೆ ಅವರವರೇ ಜಗಳ ಮಾಡಿಕೊಂಡು ಬಡಿದಾಡಿಕೊಳ್ಳುತ್ತಾರೆ. ಇಂತಹ ಪುಂಡರಿಂದ ಸ್ಥಳೀಯರಿಗೆ ಕಿರಿಕಿರಿಯಾಗುತ್ತಿದೆ...’
ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಬಿ. ಬಡಾವಣೆಯ ವಾರ್ಡ್ ಸಂಖ್ಯೆ 26ರ ನಿವಾಸಿ ಶಿವಕುಮಾರ್ ಸಿ.ವಿ. ಅವರ ಆಕ್ರೋಶಭರಿತ ಮಾತು ಇದು.
‘ನಮ್ಮ ಕಾಲೊನಿಯವರು ಇಲ್ಲಿ ಎಷ್ಟೊತ್ತಾದರೂ, ಕುಳಿತುಕೊಳ್ಳಲಿ. ಆದರೆ, ಬೇರೆ ಭಾಗದಿಂದ ಬರುವ ಕಿಡಿಗೇಡಿಗಳಿಂದ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಮಕ್ಕಳು, ಮಹಿಳೆಯರು ರಾತ್ರಿ ಮನೆಯಿಂದ ಹೊರಬರಲೂ ಹೆದರುವ ಸ್ಥಿತಿ ಇದೆ. ಈ ಬಗ್ಗೆ ಪೊಲೀಸ್ ಠಾಣೆಗೆ ಕರೆ ಮಾಡಿದರೆ, 112 ಇಆರ್‌ಎಸ್‌ಎಸ್ (ತುರ್ತು ಸ್ಪಂದಿಸುವ ನೆರವು ವ್ಯವಸ್ಥೆ) ಗೆ ಕರೆ ಮಾಡಿ ಎನ್ನುತ್ತಾರೆ. ಅವರಿಗೆ ಕರೆ ಮಾಡಿದರೆ ಪೊಲೀಸ್ ಠಾಣೆಗೆ ಕರೆ ಮಾಡಿ ಎನ್ನುತ್ತಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ರಾತ್ರಿ 12ರ ನಂತರ ಪೊಲೀಸರು ಒಮ್ಮೊಮ್ಮೆ ಗಸ್ತಿಗೆ (ನೈಟ್ ಬೀಟ್) ಬರುತ್ತಾರೆ. ಆದರೆ, ರಾತ್ರಿ 9ರಿಂದ 11ರ ವೇಳೆಗೆ ಒಮ್ಮೆ ಗಸ್ತು ತಿರುಗಿದರೆ ಸಹಾಯವಾಗುತ್ತದೆ. ಈ ವೇಳೆಯಲ್ಲೇ ಅಪರಿಚಿತರು ಹೆಚ್ಚಾಗಿ ಸಾರ್ವಜನಿಕ ಉದ್ಯಾನ, ಖಾಲಿ ಜಾಗಗಳಲ್ಲಿ ಕುಳಿತು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ’ ಎಂದು ಅವರು ಆಕ್ರೋಶ ಹೊರಹಾಕಿದರು.
ಪೊಲೀಸರ ರಾತ್ರಿ ಗಸ್ತು ಕರ್ತವ್ಯದ ಬಗ್ಗೆ ಕೆ.ಬಿ.ಬಡಾವಣೆ ಮಾತ್ರವಲ್ಲದೇ ನಗರದ ಬಹುತೇಕ ಬಡಾವಣೆಗಳಲ್ಲಿನ ನಿವಾಸಿಗಳ ಸಾಮಾನ್ಯ ದೂರು ಇದು. ‘ನೈಟ್ ಬೀಟ್‌ಗೆ ಪೊಲೀಸರು ನಿತ್ಯವೂ ಬರುತ್ತಾರೆ. ಆದರೆ, ತಡವಾಗಿ ಬರುತ್ತಾರೆ. ಸ್ವಲ್ಪ ಮುಂಚೆಯೇ ಒಮ್ಮೆ ಬಂದರೆ ಹೆಚ್ಚಿನ ಅನುಕೂಲವಾಗುತ್ತದೆ’ ಎನ್ನುತ್ತಾರೆ ನಾಗರಿಕರು.
ತಂತ್ರಜ್ಞಾನದ ಬಲ: ರಾತ್ರಿ ಗಸ್ತು ವ್ಯವಸ್ಥೆಗೆ ಪೊಲೀಸ್ ಇಲಾಖೆಯು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಪ್ರತಿಯೊಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀಟ್ ಪಾಯಿಂಟ್ (ನಿರ್ದಿಷ್ಟ ಜಾಗ) ಗುರುತಿಸಲಾಗಿದೆ. ಪ್ರತೀ ಬೀಟ್‌ನಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಕಾರ್ಯ ನಿರ್ವಹಿಸುತ್ತಾರೆ. ಒಂದು ಬೀಟ್‌ನಲ್ಲಿ 10ರಿಂದ 15 ಪಾಯಿಂಟ್ ಇರುತ್ತವೆ. ಈ ಎಲ್ಲ ಬೀಟ್ ಪಾಯಿಂಟ್ ಬಳಿಯೂ ಸಿಬ್ಬಂದಿ ತೆರಳಬೇಕು.
ಪಾಯಿಂಟ್ ಬಳಿ ಸಿಬ್ಬಂದಿ ಹೋದಾಗ ಮಾತ್ರವೇ ಮೊಬೈಲ್ ಆ್ಯಪ್‌ನಲ್ಲಿ ಹಾಜರಾತಿ ದಾಖಲಾಗುತ್ತದೆ. ಲೊಕೇಷನ್ ಆಧರಿತ ತಂತ್ರಜ್ಞಾನವನ್ನು ಇದಕ್ಕಾಗಿ ಇಲಾಖೆಯು ಬಳಸಿಕೊಳ್ಳುತ್ತಿದೆ. ಹಾಜರಿ ಹಾಗೂ ಗೈರು ಹಾಜರಿ ಬಗ್ಗೆ ಕಂಟ್ರೋಲ್ ರೂಮ್‌ಗೆ ನಿತ್ಯವೂ ಮಾಹಿತಿ ಹೋಗುತ್ತದೆ. ಬೀಟ್ ಪಾಯಿಂಟ್ ಬಳಿ ಇರುವ ಪುಸ್ತಕದಲ್ಲೂ ಪೊಲೀಸ್ ಸಿಬ್ಬಂದಿಯು ಹಾಜರಾತಿ ದಾಖಲಿಸುವುದನ್ನು ಮುಂದುವರಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಒಟ್ಟು 450ಕ್ಕೂ ಅಧಿಕ ಬೀಟ್ ಪಾಯಿಂಟ್ ಇವೆ.
10 ಪೊಲೀಸ್ ಠಾಣೆ: ನಗರ ಉಪವಿಭಾಗ ವ್ಯಾಪ್ತಿಯಲ್ಲಿ 7 ಸಿವಿಲ್ ಪೊಲೀಸ್ ಠಾಣೆಗಳು, 1 ಮಹಿಳಾ ಪೊಲೀಸ್ ಠಾಣೆ, 2 ಸಂಚಾರ ಪೊಲೀಸ್ ಠಾಣೆಗಳಿವೆ. ಈ ಪೈಕಿ ಮಹಿಳಾ ಠಾಣೆ ಹಾಗೂ ಸಂಚಾರ ಠಾಣೆ ಸಿಬ್ಬಂದಿಯನ್ನು ನೈಟ್ ಬೀಟ್‌ಗೆ ಬಳಸಿಕೊಳ್ಳುತ್ತಿಲ್ಲ. ಈ ಠಾಣೆಗಳ ವ್ಯಾಪ್ತಿಯಲ್ಲಿ ಸಿವಿಲ್ ಪೊಲೀಸ್ ಠಾಣೆಗಳ ಸಿಬ್ಬಂದಿಯೇ ಬೀಟ್ ನಿರ್ವಹಿಸುತ್ತಿದ್ದಾರೆ. ವಿದ್ಯಾನಗರ ಹಾಗೂ ಗಾಂಧಿನಗರ ಠಾಣೆಗಳ ಬೀಟ್ ವ್ಯಾಪ್ತಿ ವಿಸ್ತಾರವಾಗಿದ್ದು, ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ ಎನ್ನುತ್ತಾರೆ ಪೊಲೀಸರು. ಸಿಬ್ಬಂದಿ ಕೊರತೆಯನ್ನು ನೀಗಿಸಲು ನಗರದಲ್ಲಿ ಮಹಿಳಾ ಪೊಲೀಸರನ್ನೂ ನೈಟ್ ಬೀಟ್ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
‘ಬೀಟ್ ಮೆಂಬರ್ಸ್’ ವಾಟ್ಸ್‌ಆ್ಯಪ್ ಗ್ರೂಪ್
‘ರಾತ್ರಿ ಗಸ್ತು ಸೇವೆಯನ್ನು ಪರಿಣಾಮಕಾರಿ ಆಗಿಸಲು ತಂತ್ರಜ್ಞಾನದ ನೆರವು ಪಡೆಯುವುದು ಸೇರಿದಂತೆ ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ನಗರ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ತಿಳಿಸಿದರು. ‘ಬೀಟ್ ವ್ಯವಸ್ಥೆಗೆ ಸಂಬಂಧಿಸಿದಂತೆ ಅಹವಾಲು ಕುಂದುಕೊರತೆ ಇದ್ದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಾಹಿತಿ ಹಂಚಿಕೊಳ್ಳಲು ಪ್ರತೀ ಬೀಟ್ ಪಾಯಿಂಟ್‌ಗಳಲ್ಲೂ (ಬಡಾವಣೆ/ ಕಾಲೊನಿ) ‘ಬೀಟ್ ಮೆಂಬರ್ಸ್’ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಈ ಗ್ರೂಪ್‌ಗಳಲ್ಲಿ ಆಯಾ ವಾರ್ಡಿನ ಪಾಲಿಕೆ ಸದಸ್ಯರು ರಾಜಕೀಯ ಮುಖಂಡರು ವಿವಿಧ ಕ್ಷೇತ್ರಗಳ ಗಣ್ಯರು ಸಾರ್ವಜನಿಕರಿದ್ದಾರೆ. ಚಿತ್ರ ವಿಡಿಯೊ ಸಮೇತ ಗ್ರೂಪ್‌ನಲ್ಲಿ ಮಾಹಿತಿ ನೀಡಬಹುದು. ಇಲ್ಲವೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಮ್– ಸಂಖ್ಯೆ 3200ಗೆ ಕರೆ ಮಾಡಿ ದೂರು ನೀಡಬಹುದು’ ಎಂದು ಅವರು ಮಾಹಿತಿ ನೀಡಿದರು.
ಹೆಸರಿಗೆ ಮಾತ್ರ ಪೊಲೀಸ್ ಚೌಕಿ!
ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸಲು ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಪೊಲೀಸ್ ಬೂತ್ (ಸಂಚಾರ ಪೊಲೀಸ್ ಚೌಕಿ) ಸ್ಥಾಪಿಸಲಾಗಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂಬ ದೂರು ಕೇಳಿಬಂದಿವೆ. ಅಂಬೇಡ್ಕರ್ ವೃತ್ತ ಜಯದೇವ ವೃತ್ತ ಅರುಣಾ ಚಿತ್ರಮಂದಿರ ವೃತ್ತ ಐಟಿಐ ಮಂಡಿಪೇಟೆ ಗುಂಡಿ ಸರ್ಕಲ್ ಲಕ್ಷ್ಮೀ ಫ್ಲೋರ್ ಮಿಲ್ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿರುವ ಚೌಕಿಗಳಲ್ಲಿ ಅತ್ಯಾಧುನಿಕ ಸೌಲಭ್ಯ ಇರುವ ಚೌಕಿ ಅಳವಡಿಸಲಾಗಿದೆ. ಸಿಬ್ಬಂದಿ ಚೌಕಿಯೊಳಗೆ ಕುಳಿತೇ ಸಂಚಾರ ನಿಯಂತ್ರಣ ಮಾಡಬಹುದು. ಚೌಕಿಯಲ್ಲಿ ಫ್ಯಾನ್ ಬೆಳಕಿನ ವ್ಯವಸ್ಥೆ ಚಾರ್ಜಿಂಗ್ ಚೇರ್ ಡೆಸ್ಕ್ ಹಾಗೂ ಮೈಕ್ ಇವೆ. ಒಂದು ಚೌಕಿ ಸ್ಥಾಪನೆಗೆ ₹ 3.50 ಲಕ್ಷ ವೆಚ್ಚವಾಗಿದ್ದು ನಗರದಲ್ಲಿ 22 ಚೌಕಿ ನಿರ್ಮಿಸಲಾಗಿದೆ. ‘ದಿನಪೂರ್ತಿ ಚೌಕಿಯ ಒಳಗೇ ಕುಳಿತು ಕೆಲಸ ನಿರ್ವಹಿಸಲು ಸಾಧ್ಯವಾಗದು. ಮಳೆ ಚಳಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಗೂ ವಾಹನ ಸವಾರರಿಗೆ ಸಲಹೆ– ಸೂಚನೆ ನೀಡಲು ಚೌಕಿಯನ್ನು ಬಳಸಿಕೊಳ್ಳಲಾಗುತ್ತದೆ. ಚೌಕಿಯನ್ನು ಸಿಬ್ಬಂದಿ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ದಾವಣಗೆರೆ ಸಂಚಾರ ವೃತ್ತದ ಸಿಪಿಐ ನೆಲವಾಗಲು ಮಂಜುನಾಥ್ ತಿಳಿಸಿದರು. ಆದರೆ ‘ಯಾವುದೇ ಪೊಲೀಸ್ ಸಿಬ್ಬಂದಿ ಒಮ್ಮೆಯೂ ಈ ಚೌಕಿಯೊಳಗೆ ಇದ್ದು ಕೆಲಸ ಮಾಡಿದನ್ನು ನಾವಂತೂ ನೋಡೇ ಇಲ್ಲ’ ಎಂದು ಸುತ್ತಮುತ್ತ ಓಡಾಡುವವರು ವಾಹನ ಸವಾರರು ‘ಪ್ರಜಾವಾಣಿ’ಗೆ ತಿಳಿಸಿದರು.
ಪೊಲೀಸ್ ಗಸ್ತು; ತಗ್ಗಿದ ಕಳವು ಪ್ರಕರಣ
ಹೊನ್ನಾಳಿ: ‘ಪಟ್ಟಣದಲ್ಲಿ ರಾತ್ರಿ ಪೊಲೀಸ್ ಗಸ್ತು ವ್ಯವಸ್ಥೆ ಸುವ್ಯವಸ್ಥಿತವಾಗಿದೆ. ಕೂಲಂಬಿ ಹೊರಠಾಣೆಯಲ್ಲಿ 1 ಬೀಟ್ ಸಾಸ್ವೇಹಳ್ಳಿ ಹೊರಠಾಣಾ ವ್ಯಾಪ್ತಿಯಲ್ಲಿ 1 ಬೀಟ್ ವ್ಯವಸ್ಥೆ ಇದೆ’ ಎಂದು ಸಿಪಿಐ ಎಚ್.ಸುನೀಲ್‌ಕುಮಾರ್ ತಿಳಿಸಿದರು. ‘ರಾತ್ರಿ ಗಸ್ತು ವ್ಯವಸ್ಥೆ ಇರುವುದರಿಂದ ಕಳೆದ 2 ವರ್ಷಗಳಿಗೆ ಹೋಲಿಸಿದರೆ ಕಳ್ಳತನದ ಪ್ರಕರಣಗಳು ಕಡಿಮೆಯಾಗಿವೆ. ಅಧಿಕ ಜನಸಂಖ್ಯೆ ಇದ್ದು ಅದಕ್ಕೆ ತಕ್ಕಂತೆ ಪೊಲೀಸ್ ಸಿಬ್ಬಂದಿ ಸಂಖ್ಯೆಯೂ ಹೆಚ್ಚಬೇಕಿದೆ. ಹೊನ್ನಾಳಿ ಮತ್ತು ನ್ಯಾಮತಿ ಪ್ರದೇಶದಲ್ಲಿ ಪೊಲೀಸ್ ಚೌಕಿ ವ್ಯವಸ್ಥೆ ಇಲ್ಲ. ಆದರೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ತುರ್ತು ವಾಹನ ಸೇವೆ ‘112’ ಜೊತೆಗೆ ಹೊನ್ನಾಳಿ ಗಡಿಯಿಂದ ನ್ಯಾಮತಿ ತಾಲ್ಲೂಕು ಗಡಿವರೆಗೆ ಹೈವೇ ಗಸ್ತು ವಾಹನ ಸೌಲಭ್ಯವೂ ಇದೆ’ ಎಂದು ಹೇಳಿದರು.
ಗೃಹರಕ್ಷಕ ದಳ ಸಿಬ್ಬಂದಿ ನೆರವು
ಚನ್ನಗಿರಿ: ಪಟ್ಟಣದಲ್ಲಿ ಪ್ರತಿ ನಿತ್ಯವೂ ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಅವರೊಂದಿಗೆ ಎರಡು ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದಲ್ಲಿ ರಾತ್ರಿ ಗಸ್ತು ಸಮರ್ಪಕವಾಗಿ ಸಾಗಿದ್ದರೂ ತಿಂಗಳಲ್ಲಿ 2–3 ಕಳವು ಪ್ರಕರಣಗಳು ನಡೆಯುತ್ತಲೇ ಇವೆ. ಪೊಲೀಸ್ ಸಿಬ್ಬಂದಿಯನ್ನು ಬೇರೆ ಕಡೆ ಕರ್ತವ್ಯ ನಿರ್ವಹಣೆಗೆ ಕಳುಹಿಸಿದಾಗ ಸಿಬ್ಬಂದಿ ಕೊರತೆ ಎದುರಾಗುತ್ತದೆ. ಆಗ ಗೃಹರಕ್ಷಕ ದಳದವರನ್ನು ನಿಯೋಜಿಸಿಕೊಂಡು ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಕಳವು ಪ್ರಕರಣಗಳನ್ನು ತಡೆಗಟ್ಟಲು ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿದೆ’ ಎಂದು ಡಿವೈಎಸ್‌ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ಮಾಹಿತಿ ನೀಡಿದರು. ಬಸ್ ನಿಲ್ದಾಣದಲ್ಲಿ ಯಾವುದೇ ಸೌಲಭ್ಯ ಇಲ್ಲದ ಪೊಲೀಸ್ ಚೌಕಿಯನ್ನು ತೆರೆಯಲಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಅಲ್ಲಿ ಯಾರೂ ಕಾರ್ಯ ನಿರ್ವಹಿಸುತ್ತಿಲ್ಲ. ಪಟ್ಟಣದಲ್ಲಿ ಪುರಸಭೆಯಿಂದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ವಾಹನಗಳ ನಿಲುಗಡೆಗಾಗಿ ವಾಹನಗಳ ಚಾಲಕರು ಪರದಾಡುವಂತಾಗಿದೆ ಎನ್ನುತ್ತಾರೆ ಪಟ್ಟಣದ ವಾಸಿ ರಾಘವೇಂದ್ರ.
ತಂತ್ರಜ್ಞಾನದ ನೆರವು ಪಡೆದು ನೈಟ್ ಬೀಟ್ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗಿದೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಬ್ಬಂದಿ ನಿತ್ಯವೂ ಗಸ್ತು ನಿರ್ವಹಿಸುತ್ತಿದ್ದು ಪುಸ್ತಕದಲ್ಲೂ ಹಾಜರಾತಿ ದಾಖಲಿಸಲು ಸೂಚಿಸಲಾಗಿದೆ-ಜಿ.ಮಂಜುನಾಥ್ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ನಿಜಲಿಂಗಪ್ಪ ಲೇಔಟ್‌ನ 14ನೇ ಕ್ರಾಸ್ ಬಳಿ ಕಾಂಪ್ಲೆಕ್ಸ್ ಬಳಿ ಪುಂಡರು ಸೇರುತ್ತಾರೆ. ದೂರು ಕೊಟ್ಟಾಗ ಮಾತ್ರ ಕೆಲ ದಿನ ಪೊಲೀಸ್ ಸಿಬ್ಬಂದಿ ಬರುತ್ತಾರೆ. ದಿನ ಕಳೆದಂತೆ ಮತ್ತೆ ಅದೇ ಸಮಸ್ಯೆ ಸೃಷ್ಟಿಯಾಗುತ್ತದೆ. ತಡರಾತ್ರಿವರೆಗೂ ಬೀಡಿ ಸಿಗರೇಟು ಮಾರಾಟ ನಡೆಯುತ್ತಿದೆ-ಅನಿಲ್ ಬಾರೆಂಗಳ್, ಸ್ಥಳೀಯ
ನೈಟ್ ಬೀಟ್ ಸಿಬ್ಬಂದಿಯು ಬೀಟ್ ಪಾಯಿಂಟ್‌ಗೆ ಮಾತ್ರ ಸೀಮಿತವಾಗಬಾರದು. ಉದ್ಯಾನದ ಒಳಗೂ ಹೋಗಿ ಪರಿಶೀಲಿಸಬೇಕು. ಖಾಲಿ ಜಾಗಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಎಚ್ಚರ ವಹಿಸಬೇಕು-ಶೇರ್ ಅಲಿ, ಉಪಾಧ್ಯಕ್ಷ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.