ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತ್ಯೇಕ ಮತಗಟ್ಟೆಗೆ ಆಗ್ರಹ; ಅಧಿಕಾರಿಗಳ ಮನವೊಲಿಕೆಗೆ ಬಗ್ಗದ ಗ್ರಾಮಸ್ಥರು

ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ಸ್ಥಾಪನೆಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
Published 12 ಏಪ್ರಿಲ್ 2024, 16:13 IST
Last Updated 12 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೂರುವಡ್ಡರಹಟ್ಟಿ ತಾಂಡಾದ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಬೇಕು, ಇಲ್ಲದಿದ್ದರೆ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಹಾಯಕ ಚುನಾವಣಾಧಿಕಾರಿ ವಿ. ಅಭಿಷೇಕ್ ಅವರು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು.

ಗ್ರಾಮವು ಈಗಿರುವ ಮತಗಟ್ಟೆ ಕೇಂದ್ರದಿಂದ 2 ಕಿ.ಮೀ. ದೂರದಲ್ಲಿದ್ದು ಅಲ್ಲಿಗೆ ಅಂಗವಿಕಲರು, ವೃದ್ಧರು, ಗರ್ಭಿಣಿಯರು, ಬಾಣಂತಿಯರು ಹೋಗಿ ಬರಲು ಕಷ್ಟವಾಗುತ್ತದೆ. ಚಿರತೆ, ಕರಡಿಗಳ ಕಾಟವೂ ಹೆಚ್ಚಾಗಿರುವುದರಿಂದ ಪ್ರತ್ಯೇಕ ಮತಗಟ್ಟೆಯನ್ನು ಸ್ಥಾಪಿಸಬೇಕು ಎಂದು ಗ್ರಾಮದ ಮುಖಂಡರಾದ ಪ್ರಶಾಂತ್, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ರಮೇಶ್, ಹನುಮೇನಾಯ್ಕ, ಹಾಲೇಶನಾಯ್ಕ ಹಾಗೂ ಲಲಿತಾಬಾಯಿ ಮನವಿ ಮಾಡಿದರು.

2018ರ ಚುನಾವಣೆ ಸಂದರ್ಭದಲ್ಲಿಯೂ ಮತಗಟ್ಟೆ ಸ್ಥಾಪನೆಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದಾಗ ಆಧಿಕಾರಿಗಳು ಮುಂದಿನ ಚುನಾವಣೆ ವೇಳೆಗೆ ಹೊಸದಾಗಿ ಮತಗಟ್ಟೆ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಬೇಡಿಕೆ ಈಡೇರಿಸಿಲ್ಲ. ಪ್ರತ್ಯೇಕ ಮತಗಟ್ಟೆ ಸ್ಥಾಪಿಸಿದರೆ ನೂರಕ್ಕೆ ನೂರರಷ್ಟು ಮತದಾನ ಮಾಡುತ್ತೇವೆ. ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುಡುತ್ತೇವೆ ಎಂದು ಹೇಳಿದರು. 

ಸಹಾಯಕ ಚುನಾವಣಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ‘ಪ್ರತ್ಯೇಕ ಮತಗಟ್ಟೆ ಸ್ಥಾಪನೆ ಕಷ್ಟ. ಇದು ನಮ್ಮ ಹಂತದಲ್ಲಿ ಆಗದ ಕೆಲಸ. ಭಾರತ ಚುನಾವಣಾ ಆಯೋಗ ಚುನಾವಣೆ ನೋಟಿಫೀಕೇಶನ್ ಹೊರಡಿಸಿದ್ದು ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯವೂ ಆರಂಭವಾಗಿದೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ 245 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಹೊಸದಾಗಿ 246ನೇ ಮತಗಟ್ಟೆ ಸ್ಥಾಪನೆ ಅಸಾಧ್ಯ. ಆದರೂ ಮನವಿಯನ್ನು ಜಿಲ್ಲಾಧಿಕಾರಿ ಅವರ ಮೂಲಕ ಭಾರತ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. ಗ್ರಾಮಸ್ಥರು ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮತದಾನ ಮಾಡಬೇಕು. ಮುಂಬರುವ ಚುನಾವಣೆಯ ಹೊತ್ತಿಗೆ ಖಂಡಿತವಾಗಿಯೂ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಇದಕ್ಕೆ ಗ್ರಾಮಸ್ಥರು, ‘ಇನ್ನೂ ಕಾಲ ಮಿಂಚಿಲ್ಲ. ಹೊಸಮತಗಟ್ಟೆ ಸ್ಥಾಪನೆ ಮಾಡಿದರಷ್ಟೇ ನಾವು ಮತದಾನ ಮಾಡುತ್ತೇವೆ. ಇಲ್ಲದಿದ್ದರೆ ಮತದಾನ ಬಹಿಷ್ಕರಿಸುತ್ತೇವೆ’ ಎಂದು ಒಕ್ಕೊರಲಿನಿಂದ ಹೇಳಿದರು.

‘ನಮ್ಮ ಬೇಡಿಕೆಯನ್ನು ಭಾರತ ಚುನಾವಣಾ ಆಯೋಗಕ್ಕೂ ಕಳುಹಿಸಿಕೊಡಿ’ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಪುರಂದರ ಹೆಗಡೆ, ನ್ಯಾಮತಿ ತಹಶೀಲ್ದಾರ್ ಫಿರೋಜ್ ಷಾ, ತಾಲ್ಲೂಕು ಪಂಚಾಯಿತಿ ಇಒ ಡಿ.ಎಸ್. ಸುಮಾ, ಉಪತಹಶೀಲ್ದಾರ್ ಚಂದ್ರು, ಪಿಡಿಒ ಅರುಣ್‍ಕುಮಾರ್, ರಾಜಸ್ವ ನಿರೀಕ್ಷಕ ರಮೇಶ್, ಗ್ರಾಮ ಲೆಕ್ಕಿಗ ಬಸವರಾಜ್, ಚುನಾವಣೆ ಶಿರಸ್ತೆದಾರ ರಫಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT