ಬುಧವಾರ, ಜನವರಿ 26, 2022
23 °C
ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಶಾಲೆಯಲ್ಲಿ ಹೈಟೆಕ್ ಸೌಲಭ್ಯ

ಸಂತೇಬೆನ್ನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಭಿವೃದ್ಧಿ ಪರ್ವ; ಉತ್ತಮ ಫಲಿತಾಂಶ

ಕೆ.ಎಸ್. ವೀರೇಶ್ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಇಲ್ಲಿನ  ಎಸ್‌ಎಸ್ ಜೆವಿಪಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಗತಿಗಾಮಿ ಪರಿಕಲ್ಪನೆಯ ಸೌಲಭ್ಯಗಳ ಮಹಾಪೂರದಲ್ಲಿ ಶಿಕ್ಷಣ ಕಾಶಿಯಂತೆ ರೂಪುಗೊಳ್ಳುತ್ತಿದೆ.

ಶ್ರೀಶೈಲ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಅವರ ಶಿಕ್ಷಣ ಪ್ರೇಮದ ಪ್ರಭೆಯಲ್ಲಿ ಮೂಲ ಸೌಕರ್ಯಗಳನ್ನು ನೀಡುವ ದಿಟ್ಟ ನಿರ್ಧಾರಕ್ಕೆ ಒಗ್ಗೂಡಿದ ಗ್ರಾಮಸ್ಥರ ನೆರವಿನಿಂದ 1948ರಲ್ಲಿ ಶಾಲೆ ಆರಂಭವಾಯಿತು. ಈ  ಪ್ರೌಢಶಾಲೆ ಈಗ ಅಮೃತ ಮಹೋತ್ಸವದ ಹೊಸ್ತಿಲಲ್ಲಿ  ಇದೆ.

ಗ್ರಾಮಾಂತರ ಪ್ರದೇಶದಲ್ಲಿ ದಶಕಗಳಿಂದ ಸುತ್ತಮುತ್ತಲಿನ ಗ್ರಾಮದವರಿಗೆ ಶಿಕ್ಷಣದ ದಾಸೋಹ ನೀಡಿದ ಮಠಕ್ಕೆ ಈ ಶಾಲೆ ಮುಕುಟವಿದ್ದಂತೆ. ದೇಶ, ವಿದೇಶಗಳಲ್ಲಿ ನೆಲೆಸಿದ ವಿದ್ಯಾರ್ಥಿ ಸಮುದಾಯ ನಿರಂತರ ಗುಣಮಟ್ಟದ ಶಿಕ್ಷಣ ಧಾರೆ ಎರೆದ ಶಿಕ್ಷಕರನ್ನು ಇಂದಿಗೂ ನೆನೆಯುತ್ತಾರೆ.

ಆರಂಭದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ತರಗತಿಗಳಿದ್ದವು. ಆನಂತರ ಪಿಯು ಕಾಲೇಜು ಮೇಲ್ದರ್ಜೆಗೇರಿತು. 2018-19ರಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪರಿಕಲ್ಪನೆಯಲ್ಲಿ ಹೊಸ ಚೈತನ್ಯ ಪಡೆಯಿತು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಯಿಂದ ದ್ವಿತೀಯ ಪಿಯುವರೆಗೆ ಒಂದೇ ಸೂರಿನಡಿ ಕಲಿಕೆ. ಸ್ಮಾರ್ಟ್‌ಕ್ಲಾಸ್, ಪರಸ್ಪರ ವಿನಿಮಯ ಡಿಜಿಟಲ್ ಬೋರ್ಡ್ ಅಳವಡಿಕೆ. ಶಿಕ್ಷಕರ ನೇಮಕ, ಉತ್ತಮ ಕೊಠಡಿಗಳಿಂದ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ಸುಸಜ್ಜಿತ ಕಟ್ಟಡಗಳು: ಮೂಲ ಕಟ್ಟಡ ಸೇರಿ ಒಟ್ಟು 10 ಬ್ಲಾಕ್ ಕಟ್ಟಡಗಳ ಬೃಹತ್ ಸಮುಚ್ಚಯ ಶಾಲೆಯಲ್ಲಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ದತ್ತು ಪಡೆದ ನಂತರ ವಿವಿಧ ಮೂಲಗಳಿಂದ ಸುಮಾರು ₹ 4 ಕೋಟಿ ಅನುದಾನದಿಂದ ಹೈ-ಟೆಕ್ ಸೌಲಭ್ಯಗಳು ವಿಸ್ತರಣೆಗೊಂಡಿವೆ. ಸದ್ಯ ₹ 2ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಪ್ರಯೋಗಶಾಲೆ: ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯಗಳು ಮಕ್ಕಳಲ್ಲಿರುವ ಕಲಿಕಾ ಕುತೂಹಲವನ್ನು ತಣಿಸುವಂತಿವೆ. ಕೌಶಲ ರೂಪಿಸಲು ಶಿಕ್ಷಕರು ಮಾದರಿಗಳನ್ನು ತಯಾರಿಸಲು ಪ್ರೇರಣೆ ನೀಡುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಕಲಿಕೆ ಏಕತಾನತೆಯಿಂದ ಸೃಜನಾತ್ಮಕ ಕಲಿಕೆಗೆ ಪ್ರೋತ್ಸಾಹ ನೀಡಿದ್ದಾರೆ. ಕಾವ್ಯ ಸೃಷ್ಟಿಗೆ ಅಭಿಪ್ರೇರಣೆ ನೀಡುವ ಭೌದ್ಧಿಕ ಚಟುವಟಿಕೆಯ ಅನಾವರಣ ಗಮನ ಸೆಳೆಯುತ್ತಿದೆ ಎನ್ನುತ್ತಾರೆ ಶಿಕ್ಷಕರಾದ ಸೈಯದ್ ಫೈಜುಲ್ಲಾ, ಮಲ್ಲೇಶ್, ದ್ಯಾಮೇಶ್, ಸವಿತಾ.

ಉತ್ತಮ ಫಲಿತಾಂಶ: ಸತತವಾಗಿ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆ ಉತ್ತಮ ಫಲಿತಾಂಶ ಗಳಿಸುತ್ತಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯಲು ಸಮರ್ಥ ಅಡಿಪಾಯ ಸಿಗುತ್ತಿದೆ ಎಂಬುದು ಪೋಷಕರ ಅಭಿಪ್ರಾಯ.

‘ಶಿಕ್ಷಕರ ಸಾಮೂಹಿಕ ಶ್ರಮ ಇದೆ’

ಶಾಲೆ ದತ್ತು ಪಡೆದ ಮೇಲೆ ಸುಮಾರು ₹ 4 ಕೋಟಿ ವೆಚ್ಚದಲ್ಲಿ ಹೈಟೆಕ್ ಸೌಲಭ್ಯ ನೀಡಲಾಗಿದೆ. ನೂತನ ಕಟ್ಟಡ ಸಮುಚ್ಚಯ ನಿರ್ಮಾಣಕ್ಕಾಗಿ ₹ 2ಕೋಟಿ ಅನುದಾನ ಬಿಡುಗಡೆ ಆಗಿದೆ. ವಿಧಾನಪರಿಷತ್ ಚುನಾವಣೆ ನಂತರ ಶಂಕುಸ್ಥಾಪನೆ ನೆರವೇರಲಿದೆ. ಶಿಕ್ಷಕರ ಸಾಮೂಹಿಕ ಶ್ರಮದಾನದಿಂದ ಕೋವಿಡ್ ರಜೆಯಲ್ಲಿ ಶಾಲಾ ಸ್ವಚ್ಛತೆ ಶಿಕ್ಷಣ ಸಚಿವರ ಟ್ವೀಟ್ ಮೂಲಕ ಗಮನ ಸೆಳೆದಿತ್ತು. ಶಾಲಾ ಪ್ರವೇಶದಿಂದ ಕಟ್ಟಡದವರೆಗೆ 100ಮೀ ರಸ್ತೆ ಇಕ್ಕೆಲಗಳಲ್ಲಿ ನುಡಿಮುತ್ತುಗಳ ಫಲಕಗಳು ಎಲ್ಲರ ಪ್ರಸಂಶೆ ಗಳಿಸಿವೆ ಎನ್ನುತ್ತಾರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ.

***

ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ವೃಂದದ ಸಮನ್ವಯ ಕಾರ್ಯಪ್ರವೃತ್ತಿ ಫಲವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. 1ರಿಂದ 7ರವರೆಗೆ ಶೇ 20ರಷ್ಟು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಿದೆ.

- ಕೆ. ಮಂಜುನಾಥ್,ಕ್ಷೇತ್ರ ಶಿಕ್ಷಣಾಧಿಕಾರಿ

***

ಶಾಲೆಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಸುಮಾರು 1500 ವಿದ್ಯಾರ್ಥಿಗಳು ಒಂದೇ ಸೂರಿನಡಿ ಕಲಿಯುತ್ತಿರುವುದು ಗಮನಾರ್ಹ. ಗಿಡಮರಗಳ ಪೋಷಣೆಗೆ ಶಿಕ್ಷಕರ ಶ್ರಮ ಇದೆ. ವಿವಿಧ ಹಂತದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ನಿರಂತರ ಶ್ರಮವಹಿಸಲಾಗುತ್ತಿದೆ.

- ಜಯಪ್ಪ, ಉಪ ಪ್ರಾಚಾರ್ಯ

***

ಪಠ್ಯೇತರ ಚಟುವಟಿಕೆಗೆ ಶಾಸಕರು ಹಾಗೂ ಸಂಸದರ ಅನುದಾನದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಿಸಲಾಗಿದೆ. ಕಟ್ಟಡಗಳಿಗೆ ಹೊಸ ರೂಪ ನೀಡಲು ಶ್ರಮಿಸಲಾಗಿದೆ. ನೀರು, ಮಳೆ ಕೊಯ್ಲು, ಸುರಕ್ಷತಾ ಸೌಲಭ್ಯಗಳನ್ನು ಪೂರೈಸಲಾಗಿದೆ.

- ಬಿ. ಜೆ.ರಂಗಸ್ವಾಮಿ. ಎಸ್‌ಡಿಎಂಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು