ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟ

Published 9 ನವೆಂಬರ್ 2023, 5:42 IST
Last Updated 9 ನವೆಂಬರ್ 2023, 5:42 IST
ಅಕ್ಷರ ಗಾತ್ರ

ದಾವಣಗೆರೆ: ದೀಪಾವಳಿ ಹಬ್ಬದ ಪ್ರಯುಕ್ತ ಈ ಬಾರಿ ಪಟಾಕಿ ಮಾರಾಟಕ್ಕೆ ನವೆಂಬರ್ 9ರಿಂದ 15ವರೆಗೆ ಅವಕಾಶ ನೀಡಲಾಗಿದೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಮಳಿಗೆಗಳನ್ನು ನಿರ್ಮಾಣ ಕಾರ್ಯ ನಡೆಯುತ್ತಿದೆ.

ಹಾವೇರಿ ಜಿಲ್ಲೆಯ ಆಲದಕಟ್ಟೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ದುರಂತಗಳ ಹಿನ್ನೆಲೆಯಲ್ಲಿ ನಗರದ ಹೊರಗಡೆ ಪಟಾಕಿ ಮಳಿಗೆಗಳನ್ನು ಹಾಕಲು ಜಾಗ ಗುರುತಿಸಲು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

‘ನಗರದ ಹೊರಗಡೆ ಮಳಿಗೆ ಆರಂಭಿಸಿದರೆ ಜನರು ಅಲ್ಲಿಗೆ ಬರುವುದಿಲ್ಲ ಎಂಬ ಕಾರಣಕ್ಕಾಗಿ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಕೆಲವು ಷರತ್ತುಗಳೊಂದಿಗೆ ಹೈಸ್ಕೂಲ್ ಮೈದಾನದಲ್ಲೇ ಅವಕಾಶ ನೀಡಲಾಗಿದೆ’ ಎಂದು ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ತಿಳಿಸಿದರು.

ಹಲವು ಷರತ್ತುಗಳು ಇರುವುದರಿಂದ ವ್ಯಾಪಾರ ಎಷ್ಟು ಆಗುತ್ತದೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಬೇಗ ಲೈಸೆನ್ಸ್ ನೀಡಿದರೆ ಹೆಚ್ಚಿನ ವ್ಯಾಪಾರವಾಗುತ್ತದೆ. ಇಲ್ಲದಿದ್ದರೆ ಕುಸಿತವಾಗುತ್ತದೆ.
ಪಿ.ಸಿ.ಶ್ರೀನಿವಾಸ್, ಪಟಾಕಿ ವರ್ತಕರ ಸಂಘದ ಅಧ್ಯಕ್ಷ

‘ಪಟಾಕಿ ಮಾರಾಟಕ್ಕೆ ಈಗಾಗಲೇ 100ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, 60 ವ್ಯಾಪಾರಿಗಳಿಗಷ್ಟೇ ಅವಕಾಶ ನೀಡಲಾಗಿದೆ. 5 ಮಳಿಗೆಯಿಂದ ಮತ್ತೆ 5 ಮಳಿಗೆಗಳಿಗೆ 20 ಅಡಿ ಅಂತರ ಕಾಯ್ದುಕೊಂಡು ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ಒಂದು ಮಳಿಗೆಯಿಂದ ಮತ್ತೊಂದಕ್ಕೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿತ್ತು. ಆದರೆ ಜಾಗದ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

‘ಯಾವುದೇ ಅನಾಹುತವಾಗದಂತೆ ಮುಂಜಾಗೃತೆ ವಹಿಸಬೇಕು. ಮಳಿಗೆಗಳ ನಡುವೆ ಅಂತರ ಕಾಯ್ದುಕೊಂಡು ಅಗ್ನಿ ನಂದಿಸಲು ಅಗತ್ಯವಾಗಿ ಬೇಕಾಗಿರುವ ಮರಳು, ನೀರು ಶೇಖರಿಸಿಕೊಳ್ಳಬೇಕು. ಜನರು ಪ್ರವೇಶಿಸಲು ವಿಶಾಲವಾದ ಜಾಗ ಬಿಡಬೇಕು. ವಾಹನ ನಿಲುಗಡೆಗೆ ಜಾಗ ಬಿಡಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ’ ಎಂದು ಹೇಳಿದರು.

ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಇವುಗಳನ್ನು ಗುರುತಿಸಲು ಕ್ಯು ಆರ್ ಕೋಡ್ ಅಭಿವೃದ್ಧಿಪಡಿಸಿದ್ದು, ಬಾರ್ ಕೋಡ್ ನೀಡಲಾಗಿದೆ. ಅವುಗಳನ್ನು ಸ್ಕ್ಯಾನ್‌ ಮಾಡಿದಾಗ ಸುಲಭವಾಗಿ ಗುರುತಿಸಬಹುದು.

ಹಬ್ಬದ ಅವಧಿಯಲ್ಲಿ ರಾತ್ರಿ 8ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಸಿಡಿಸಲು ಅನುಮತಿ ನೀಡಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಪಟಾಕಿಗಳನ್ನು ಸಿಡಿಸಲು ಅನುಮತಿ ಇಲ್ಲ.

ಶಾಲಾ ಕಾಲೇಜು, ಆಸ್ಪತ್ರೆ, ನ್ಯಾಯಾಲಯ, ಆಶ್ರಮ ಮುಂತಾದ ನಿಶಬ್ಧ ವಲಯಗಳಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಟಾಕಿಗಳ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟು-ನಿಟ್ಟಾಗಿ ನೋಡಿಕೊಳ್ಳುವುದು ಪರವಾನಿಗೆದಾರರ ಜವಾಬ್ದಾರಿಯಾಗಿದೆ.

‘ಪಟಾಕಿಗಳಿಂದ ಶೇ 10ರಿಂದ 15ರಷ್ಟು ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಉಂಟಾಗುತ್ತಿದ್ದು, ಪಟಾಕಿ ಸಿಡಿತದಿಂದ ಶಾಶ್ವತ ಕುರುಡು, ಕಿವುಡುತನ ಉಂಟಾಗುತ್ತದೆ, ಅಸ್ವಸ್ಥರು ಮಕ್ಕಳು ಗರ್ಭಿಣಿಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಸ್ಫೋಟಕ ಪಟಾಕಿಗಳ ಸದ್ದಿನಿಂದ ಒತ್ತಡ, ನಿದ್ರಾಹೀನತೆ, ಕಿವುಡುತನ, ರಕ್ತದೊತ್ತಡ ಹಾಗೂ ಹೃದಯಘಾತದಂತಹ ಅಪಾಯಗಳು ಉಂಟಾಗುತ್ತವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆವರೆಗೆ ಪಟಾಕಿ ಸಿಡಿಸುವಂತಿಲ್ಲ ಮತ್ತು 125 ಡೆಸಿಬಲ್ ಮೇಲ್ಪಟ್ಟ ಪಟಾಕಿಗಳ ಸಿಡಿಸುವುದನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT