ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹರ್‌ ಘರ್‌ ತಿರಂಗಾ’: ಸ್ವ–ಸಹಾಯ ಸಂಘಗಳ ಸಾಥ್‌

ಭಾನುವಳ್ಳಿ ಗ್ರಾಮದ ‘ಈಶ್ವರ ಅಲ್ಲಾ ಮಹಿಳಾ ಸ್ವಸಹಾಯ ಸಂಘ’ದಿಂದ ಧ್ವಜ ಹೊಲಿಗೆ ಆರಂಭ
Last Updated 26 ಜುಲೈ 2022, 4:43 IST
ಅಕ್ಷರ ಗಾತ್ರ

ದಾವಣಗೆರೆ: ಸ್ವಾತಂತ್ರ್ಯೋತ್ಸವ ‘ಅಮೃತ ಮಹೋತ್ಸವ’ ಅಂಗವಾಗಿ ಸರ್ಕಾರ ಘೋಷಿಸಿರುವ ‘ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ಈಗ ಗ್ರಾಮಗಳಲ್ಲಿ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ (ಎನ್‌ಆರ್‌ಎಲ್‌ಎಂ) ಅಡಿಯ ಸಂಜೀವಿನಿ ಮಹಿಳಾ ಸ್ವ–ಸಹಾಯ ಸಂಘಗಳ ಸದಸ್ಯೆಯರು ಕೈಜೋಡಿಸಿದ್ದಾರೆ.

ರಾಷ್ಟ್ರಧ್ವಜ ಪೂರೈಕೆಯ ಬೇಡಿಕೆಯನ್ನು ಸ್ಥಳೀಯವಾಗಿ ಪೂರೈಸಲು ಗ್ರಾಮೀಣ ಭಾಗದ ಸ್ವ–ಸಹಾಯ ಗುಂಪುಗಳ ಸದಸ್ಯೆಯರು ಸಿದ್ಧಪಡಿಸಿದ ರಾಷ್ಟ್ರಧ್ವಜಗಳನ್ನು ಖರೀದಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿದೆ. ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ‘ಈಶ್ವರ ಅಲ್ಲಾ ಮಹಿಳಾ ಸ್ವಸಹಾಯ ಸಂಘ’ದ 10 ಸದಸ್ಯೆಯರು ಧ್ವಜಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭಿಸಿದ್ದು, 100 ಧ್ವಜಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿಯ ಜಾಗೃತಿ ಜಾಥಾಕ್ಕಾಗಿ ಈಗಾಗಲೇ ನೀಡಿದ್ದಾರೆ.

‘ಮೂರು ಗ್ರಾಮ ಪಂಚಾಯಿತಿಗಳಿಂದ ತಲಾ 250 ಧ್ವಜಗಳನ್ನು ಸಿದ್ಧಪಡಿಸಿ ಕೊಡುವಂತೆ ನಮಗೆ ಆರ್ಡರ್‌ ಬಂದಿದೆ. ಇನ್ನೂ ಬೆಲೆ ನಿಗದಿಯಾಗಿಲ್ಲ. ಗ್ರಾಮ ಪಂಚಾಯಿತಿಗಳು ಸೂಚಿಸಿದ ಅಳತೆಯ ಕಾಟನ್‌ ಅಥವಾ ಪಾಲಿಸ್ಟರ್‌ ಬಟ್ಟೆಗಳಿಂದ ಧ್ವಜ ತಯಾರಿಸುತ್ತಿದ್ದೇವೆ. ಬಾವುಟದ ಮಧ್ಯದಲ್ಲಿ ಬಿಳಿಯ ಬಣ್ಣದ ಮೇಲೆ ಬರುವ ಅಶೋಕ ಚಕ್ರದ ಚಿತ್ರದ ಮುದ್ರಣದ ಹೊಣೆಯೂ ನಮ್ಮದೇ’ ಎಂದು ಸಂಘದ ಪ್ರತಿನಿಧಿ ಖತ್ಮುನ್ನಿಸಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ 194 ಗ್ರಾಮ ಪಂಚಾಯಿತಿಗಳು, 7,200 ಸಂಜೀವಿನಿ ಮಹಿಳಾ ಸ್ವ–ಸಹಾಯ ಸಂಘಗಳಿವೆ. ‌ಈ ಸಂಘಗಳ 98,000 ಸದಸ್ಯೆಯರು ಇದ್ದಾರೆ. ಹೊಲಿಗೆ ತರಬೇತಿ ಪಡೆದಿರುವ ಹಲವು ಸಂಘಗಳ ಸದಸ್ಯೆಯರಿದ್ದು, ಅವರಿಗೆ ರಾಷ್ಟ್ರಧ್ವಜ ಸಿದ್ಧಪಡಿಸಲು ಪ್ರೋತ್ಸಾಹ ನೀಡಲಿದ್ದೇವೆ. ಸದ್ಯಕ್ಕೆ ತಾಲ್ಲೂಕಿಗೆ ಒಂದು ಒಕ್ಕೂಟದಂತೆ ಹೊಲಿಗೆಯ ಅನುಭವ ಇರುವ 50 ಜನ ಸದಸ್ಯೆಯರನ್ನು ಧ್ವಜ ಸಿದ್ಧಪಡಿಸಲು ಗುರುತಿಸಲಾಗಿದೆ. ಅಗತ್ಯವಿರುವ ತರಬೇತಿಯನ್ನೂ ನೀಡಲಾಗುವುದು. ಬೇಡಿಕೆಗೆ ಅನುಗುಣವಾಗಿ ಇನ್ನೂ ಕೆಲವು ಆಸಕ್ತ ಸ್ವ–ಸಹಾಯ ಸಂಘಗಳಿಗೆ ತರಬೇತಿ ನೀಡಲಾಗುವುದು’ ಎಂದು ಎನ್‌ಆರ್‌ಎಲ್‌ಎಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಭೋಜರಾಜ್‌ ಎನ್‌.ಎಂ. ತಿಳಿಸಿದರು. (ರಾಷ್ಟ್ರಧ್ವಜ ಪಡೆಯಲು ಇಚ್ಛಿಸುವವರು 9535848675 ಸಂಪರ್ಕಿಸಬಹುದು)

ಮಹಿಳೆಯರಿಗೆ ಉತ್ತೇಜನ: ಚನ್ನಪ್ಪ

ಭಾನುವಳ್ಳಿಯ ‘ಈಶ್ವರ ಅಲ್ಲಾ ಮಹಿಳಾ ಸ್ವಸಹಾಯ ಸಂಘ’ಕ್ಕೆ ಸೋಮವಾರ ಭೇಟಿ ನೀಡಿ ಧ್ವಜದ ಸ್ವರೂಪದ ಬಗ್ಗೆ ಮಾರ್ಗದರ್ಶನ ನೀಡಿದ್ದೇವೆ. 3:2ರ ಅನುಪಾತದಲ್ಲಿ (ಉದ್ದXಅಗಲ) ಮೂರು ಬಗೆಯ ಗಾತ್ರದಲ್ಲಿ 30X20, 24X16, 9X6 ಅಳತೆಯ ಧ್ವಜ ಸಿದ್ಧಪಡಿಸಬಹುದಾಗಿದೆ.

ಬಟ್ಟೆಯ ದರ ಹಾಗೂ ಹೊಲಿಗೆಯ ವೆಚ್ಚ ಸೇರಿ ಧ್ವಜದ ಬೆಲೆಯನ್ನು ನಿರ್ಧರಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಯಿಂದ 450 ಧ್ವಜಗಳನ್ನು ಖರೀದಿಸುವಂತೆ ಆದೇಶಿಸಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಜಿಲ್ಲೆಗೆ 1.50 ಲಕ್ಷ ಧ್ವಜಗಳನ್ನು ಪೂರೈಸಲಾಗುತ್ತಿದೆ. ಇವುಗಳಲ್ಲಿ 75,000 ನಗರ ಪ್ರದೇಶಗಳಿಗೆ, 75,000 ಗ್ರಾಮ ಪಂಚಾಯಿತಿಗಳಿಗೆ ವಿತರಿಸಲು ನಿರ್ಧಾರವಾಗಿದೆ. ಉಳಿದವನ್ನು ಗ್ರಾಮ ಪಂಚಾಯಿತಿಗಳು ಇಂಥ ಸಂಘಗಳ ಬಳಿ ಖರೀದಿಸಲಿವೆ. ಉಳಿದಂತೆ ಸಾರ್ವಜನಿಕರೂ, ಸಂಘ–ಸಂಸ್ಥೆಗಳು ಮಹಿಳಾ ಸ್ವ–ಸಹಾಯ ಸಂಘಗಳ ಬಳಿ ಆರ್ಡರ್‌ ನೀಡಿ ಹೊಲಿಸಿಕೊಂಡರೆ ಸಂಘಗಳಿಗೆ ಉತ್ತೇಜನ ನೀಡಿದಂತಾಗುತ್ತದೆ.

–ಡಾ.ಎ.ಚನ್ನಪ್ಪ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT