ಭಾನುವಾರ, ಜನವರಿ 24, 2021
19 °C

ದಾವಣಗೆರೆಯಲ್ಲಿ ತಡ ರಾತ್ರಿವರೆಗೂ ಅಬ್ಬರಿಸಿದ ಮಳೆ, ಮನೆಗಳಿಗೆ ನುಗ್ಗಿದ ಮಳೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರ ಸೇರಿ ಜಿಲ್ಲೆಯಾದ್ಯಂತ ಶುಕ್ರವಾರ ಗುಡುಗು–ಸಿಡಿಲು ಸಹಿತ ಭಾರಿ ಮಳೆಯಾಗಿದೆ. ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಅಕಾಲಿಕ ಮಳೆಯಿಂದಾಗಿ ರಾಜಕಾಲುವೆ ಉಕ್ಕಿ ಹರಿದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಸಿಡಿಲು ಬಡಿದು ಶಾಮನೂರಿನ ಅಂಜಪ್ಪ ಅವರ ಮನೆಗೆ ಹಾನಿಯಾಗಿದೆ. ಚಾಮರಾಜಪೇಟೆಯ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ.

ನಗರದ ಬನಶಂಕರಿ ಬಡಾವಣೆಯ ಕೆಳಸೇತುವೆ ಬಳಿ ಸ್ಕಾರ್ಪಿಯೊ ವಾಹನ ನೀರಿನಲ್ಲಿ ಸಿಲುಕಿಕೊಂಡಿತ್ತು. ಕೆ.ಎಸ್‌.ಆರ್‌.ಟಿ. ಬಸ್‌ನಿಲ್ದಾಣಕ್ಕೆ ನೀರು ನುಗ್ಗಿದ್ದು, ಕೆರೆಯಂತಾಗಿತ್ತು. ಬಸ್‌ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಮೊಳಕಾಲ್ಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಂಜೆ 5 ಗಂಟೆಗೆ ಆರಂಭವಾದ ಮಳೆ ರಾತ್ರಿ 7ರವರೆಗೂ ಬಿರುಸಿನಿಂದ ಸುರಿಯಿತು. ಬಳಿಕ ಕೆಲ ಕಾಲ ತುಂತುರು ಮಳೆಯಾಗುತ್ತಿತ್ತು. ರಾತ್ರಿ 9ರಿಂದ ಮತ್ತೆ ಮಳೆಯು ಬಿರುಸಿನಿಂದ ಸುರಿಯತೊಡಗಿತ್ತು.

ಬೇಸಿಗೆ ಬೆಳೆಗೆ ಸಹಕಾರಿ: ಜಿಲ್ಲೆಯಲ್ಲಿ ಸುರಿದ ಮಳೆ ಬೇಸಿಗೆ ಭತ್ತಕ್ಕೆ ಅನುಕೂಲವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು.

ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆದಿದ್ದು, ಮಳೆ ಬಿದ್ದಿರುವುದರಿಂದ ಭತ್ತದ ಗದ್ದೆಗಳಲ್ಲಿ ಸಸಿಮಡಿ ಮಾಡಿಕೊಳ್ಳಲು ಅನುಕೂಲವಾಗಿದೆ. ಹಿಂಗಾರು ಬೆಳೆ ಕಡಲೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಂತರೆ ಬೆಳೆ ಕೊಳೆಯುವುದರಿಂದ ನೀರನ್ನು ಹೊರಹಾಕಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಗ್ರಾಮೀಣ ಕೃಷಿ ಹವಾಮಾನ ಸೇವಾ ಕೇಂದ್ರದ ಪ್ರಕಾರ ಚನ್ನಗಿರಿ ತಾಲ್ಲೂಕಿನಲ್ಲಿ 21.8 ಮಿ.ಮೀ, ದಾವಣಗೆರೆಯಲ್ಲಿ 22.6 ಮಿ.ಮೀ, ಹರಿಹರದಲ್ಲಿ 24.6 ಮಿ.ಮೀ ಹಾಗೂ ಜಗಳೂರು ತಾಲ್ಲೂಕಿನಲ್ಲಿ 3.6 ಮಿ.ಮೀ ಮಳೆಯಾಗಬಹುದು ಎಂದು ಅಂದಾಜಿಸಿತ್ತು. ದಾವಣಗೆರೆ ನಗರದಲ್ಲಿ ಹೆಚ್ಚಿನ ಮಳೆಯಾಗಿದೆ.

ಅಂಗಡಿಗಳಿಗೆ ನುಗ್ಗಿದ ನೀರು

ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದಾಗಿ ಚಾಮರಾಜಪೇಟೆಯ ಮುಖ್ಯ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ಸಮರ್ಪಕವಾಗಿ ಇಲ್ಲದೇ ಇರುವುದರಿಂದ 25ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿಗೆ ನೀರು ನುಗ್ಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿವೆ.

ಅಂಗಡಿಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ವ್ಯಾಪಾರಿಗಳು ಹರಸಾಹಸ ಪಡಬೇಕಾಯಿತು.

‘ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಮಳೆ ನೀರು ಅಂಗಡಿಯಳಗೆ ನುಗ್ಗಿದೆ. ₹ 2 ಲಕ್ಷ ಮೌಲ್ಯದ ಸರಕುಗಳು ನಷ್ಟವಾಗಿವೆ. ಈ ನಷ್ಟವನ್ನು ಯಾರು ಭರಿಸಿಕೊಡುತ್ತಾರೆ’ ಎಂದು ವರ್ತಕ ಅಮರೇಶ್ ಅಸಮಾಧಾನ ಹೊರಹಾಕಿದರು.

ಮಾವಿನ ಬೆಳೆಗೆ ಅಪಾಯಕಾರಿ

ದಾವಣಗೆರೆ: ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಮಾವಿನ ಬೆಳೆಗೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ 3,608 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತಿದೆ. ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯಲ್ಲೇ 2,200 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಅಕಾಲಿಕ ಮಳೆಯಿಂದ ಮಾವಿನ ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟಿದ್ದಾರೆ.

ಜನವರಿ ಮೊದಲ ವಾರ ಜಿಲ್ಲೆಯಾದ್ಯಂತ ಶೇ 70ರಷ್ಟು ಮಾವಿನ ತೋಪುಗಳಲ್ಲಿ ಹೂವು ಬಿಟ್ಟಿದೆ. ಕಳೆದ ವಾರ ಇಬ್ಬನಿ ಹೆಚ್ಚಾಗಿದ್ದರಿಂದ ಬೂದಿ ರೋಗದ ಹಾವಳಿ ಅಲ್ಲಲ್ಲಿ ಕಾಣಿಸಿಕೊಂಡಿತ್ತು. ಈಗ ಮಳೆ ಬಂದಿರುವುದರಿಂದ ಇಬ್ಬನಿಯು ತೊಳೆದು ಹೋಗಿ ಬೂದಿ ರೋಗ ಹತೋಟಿಗೆ ಬರುತ್ತದೆ. ಆದರೆ, ಭೂಮಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಹೂವು ಉದುರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಹೂವು ಉದುರುವುದನ್ನು ನಿಯಂತ್ರಿಸಲು ರೈತರು ಮಾವು ಸ್ಪೆಷಲ್ ಲಘು ಪೋಷಕಾಂಶವನ್ನು 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ರಸ ಹೀರುವ ಕೀಟಬಾಧೆ ಹೆಚ್ಚಾಗಿದ್ದರೆ, ಪಿಪ್ರೋನಲ್ 5% SC ಕೀಟನಾಶಕವನ್ನು 1.5 ಮಿಲಿ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ವಿಜ್ಞಾನ ಕೇಂದ್ರ ಅಥವಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು