ಬುಧವಾರ, ಅಕ್ಟೋಬರ್ 20, 2021
24 °C

ಹವಾಮಾನ ವೈಪರೀತ್ಯದಿಂದ ಮಕ್ಕಳ ಆರೋಗ್ಯ ಸಮಸ್ಯೆ: ಭಯ ಬೇಡ, ಚಿಕಿತ್ಸೆಗೆ ಕರೆತನ್ನಿ

ಎಚ್‌. ಅನಿತಾ Updated:

ಅಕ್ಷರ ಗಾತ್ರ : | |

ದಾವಣಗೆರೆ: ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಮಕ್ಕಳು ಸಾಮೂಹಿಕವಾಗಿ ಅನಾರೋಗ್ಯಕ್ಕೀಡಾಗುತ್ತಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮಳೆ–ಬಿಸಿಲಿನ ವಾತಾವರಣದಿಂದಾಗಿ ಶೀತ, ಕೆಮ್ಮು, ವೈರಲ್ ಫೀವರ್, ರಿಕೆಟ್ಸಿಯಲ್ ಫೀವರ್, ಟೈಫಾಯ್ಡ್‌ ಹಾಗೂ ಡೆಂಗಿ ಹರಡುತ್ತಿದೆ. ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ.

ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಹೊರ ಮತ್ತು ಒಳರೋಗಿಗಳಾಗಿ ಒಟ್ಟು 4,162 ಮಕ್ಕಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಪೈಕಿ ಜ್ವರ 1,395, ಕಫದ ಸಮಸ್ಯೆ 369, ಉಸಿರಾಟದ ಸಮಸ್ಯೆ 580 ಪ್ರಕರಣಗಳು. ಐಸಿಯುಗೆ ದಾಖಲಾಗಿದ್ದ 57 ಮಕ್ಕಳಲ್ಲಿ 24 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್‌ ತಿಳಿಸಿದ್ದಾರೆ.

ನ್ಯುಮೋನಿಯಾ (2), ವೈರಲ್ ಫೀವರ್‌ (4), ಇತರೆ ಕಾರಣಗಳು (2) ಸೇರಿ ಒಟ್ಟು 8 ಮಕ್ಕಳು ಸಾವನ್ನಪ್ಪಿದ್ದಾರೆ. ಇದರಲ್ಲಿ ದಾವಣಗೆರೆಯ 2, ಚಿತ್ರದುರ್ಗದ 1, ಬಳ್ಳಾರಿಯ 2 ಮತ್ತು ಹಾವೇರಿಯ 3 ಮಕ್ಕಳು ಇದ್ದಾರೆ. ಬಹುತೇಕ ಖಾಸಗಿ ಆಸ್ಪತ್ರೆಯವರು ‘ಡೆಂಗಿ ಲೈಕ್‌ ಇಲ್‌ನೆಸ್‌’ ಎಂದು ಪರಿಗಣಿಸಿ ಚಿಕಿತ್ಸೆ ನೀಡುತ್ತಿದ್ದು, ತಮ್ಮಲ್ಲಿಗೆ ಬರುವ 18 ವರ್ಷದೊಳಗಿನ ಮಕ್ಕಳ ಜ್ವರದ ಪ್ರಕರಣಗಳ ಬಗ್ಗೆ ನಿಖರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವೈರಲ್ ಫೀವರ್ 5 ದಿನಗಳೊಳಗೆ ಹಾಗೂ ‘ಡೆಂಗಿ ಲೈಕ್ ಇಲ್‍ನೆಸ್’ 10 ದಿನಗಳೊಳಗೆ ಕಡಿಮೆ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

‘14 ವರ್ಷದ ಒಳಗಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ವಾತಾವರಣದಲ್ಲಿನ ಬದಲಾವಣೆ, ಮಾಲಿನ್ಯ ಮುಂತಾದ ಪ್ರತಿಕೂಲ ಸಂದರ್ಭಗಳಲ್ಲಿ ಬಹಳ ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಪ್ರತಿವರ್ಷ ಇದು ಸಾಮಾನ್ಯ. ಡಿಸೆಂಬರ್‌ವರೆಗೂ ವಾತಾವರಣದಲ್ಲಿ ಅಸಮತೋಲನ ಮುಂದುವರಿಯಲಿದ್ದು, ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಶಾಲೆಗಳಿಗೆ ಹೋಗುವ ಮಕ್ಕಳ ಕುರಿತು ದುಪ್ಪಟ್ಟು ಮುಂಜಾಗ್ರತೆ ವಹಿಸಬೇಕು’ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆ ಮಕ್ಕಳ ವಿಭಾಗದ ತಜ್ಞರಾದ ಡಾ.ಲೋಹಿತ್‌ ಮತ್ತು ಡಾ.ರೇವಪ್ಪ ಅವರು ಸಲಹೆ ನೀಡಿದ್ದಾರೆ.

‘ಯಾವುದೇ ಬಗೆಯ ಜ್ವರ, ಉಸಿರಾಟ ಮತ್ತು ಕಫದ ಸಮಸ್ಯೆ ಇರುವ ಮಕ್ಕಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗುತ್ತಿದೆ. ಚಿಕಿತ್ಸೆಗೆ ಬರುವ ಮಕ್ಕಳಲ್ಲಿ ಎತ್ತರಕ್ಕೆ ತಕ್ಕಷ್ಟು ತೂಕ ಇಲ್ಲದಿರುವುದು, ಕಾಲು ಊತ, ಎಡತೋಳಿನ ಸುತ್ತಳತೆ ನಿಗದಿಗಿಂತ ಕಡಿಮೆ ಇದ್ದರೆ ತೀವ್ರ ಅಪೌಷ್ಟಿಕದಿಂದ ಬಳಲುತ್ತಿರುವ ಮಗು ಎಂದು ಪರಿಗಣಿಸಿ ಅಪೌಷ್ಟಿಕ ಪುನರ್‌ವಸತಿ ಕೇಂದ್ರಕ್ಕೆ ದಾಖಲಿಸಿ ಸೂಕ್ತ ಆಹಾರ ಮತ್ತು ಔಷಧೋಪಚಾರ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ನವಜಾತ ಶಿಶುಗಳಿಗೆ ಆರ್‌ಎಸ್‌ವಿ ಸೋಂಕು: ನವಜಾತ ಶಿಶುಗಳಲ್ಲಿ ಎರಡು ತಿಂಗಳುಗಳಿಂದ ಆರ್‌ಎಸ್‌ವಿ ವೈರಸ್ ಸೋಂಕು ಕಂಡುಬಂದಿದೆ. ಕಿರಿ ಕಿರಿ, ಮೂತ್ರ ಕಡಿಮೆ, ಜ್ವರ, ಹೆಚ್ಚು ಉಸಿರಾಟ ಮತ್ತು ಉಸಿರಾಡುವಾಗ ಗೊರ ಗೊರ ಶಬ್ದ ಬರುವುದು ರೋಗದ ಲಕ್ಷಣಗಳು. ಈ ಸೋಂಕಿಗೆ ತುತ್ತಾದ ಮಗುವಿಗೆ ಹಾಲು ಕುಡಿಯಲು ಆಗುವುದಿಲ್ಲ. ಇದರಿಂದ ಮಗು ಅಪೌಷ್ಟಿಕಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಲಕ್ಷಣಗಳು ಕಂಡುಬಂದ ತಕ್ಷಣ ಮಕ್ಕಳ ತಜ್ಞರ ಬಳಿ ಕರೆತರಬೇಕು. ಹಾಗೇ ಬಿಟ್ಟರೆ ವೈರಲ್‌ ನ್ಯುಮೋನಿಯಾ ಆಗಿ ಬದಲಾಗುತ್ತದೆ. ತೀವ್ರ ಸೋಂಕಿನಿಂದ ಮಗುವಿನ ಸಾವು ಕೂಡ ಸಂಭವಿಸಬಹುದು. ಶೇ 95ರಷ್ಟು ಮಕ್ಕಳು ಗುಣಮುಖರಾಗುತ್ತಿದ್ದು, ಶೇ 4ರಷ್ಟು ಮಕ್ಕಳು ತೀವ್ರ ನಿಗಾ ಘಟಕ, ಶೇ 1ರಷ್ಟು ಮಕ್ಕಳಿಗೆ ವೆಂಟಿಲೇಟರ್‌ ಬೆಡ್‌ ಬೇಕಾಗುತ್ತಿದೆ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆ ನವಜಾತ ಶಿಶು ತಜ್ಞ ಡಾ.ರಾಘವೇಂದ್ರ ತಿಳಿಸಿದ್ದಾರೆ.

83 ಮಕ್ಕಳಿಗೆ ಡೆಂಗಿ: ಕಳೆದ ಜನವರಿಯಿಂದ ಸೆಪ್ಟೆಂಬರ್‌ 30ರ ವರೆಗೆ ಜಿಲ್ಲೆಯಲ್ಲಿ ಒಟ್ಟು 83 ಮಕ್ಕಳಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಡೆಂಗಿಗೆ ಕಾರಣವಾಗುವ ಈಡಿಸ್‌ ಈಜಿಪ್ಟೈ ಸೊಳ್ಳೆ ಅತ್ಯಂತ ಅಪಾಯಕಾರಿ. ಮಲೇರಿಯಾ ಹರಡಲು ಕಾರಣವಾಗುವ ಅನಾಫಿಲಿಸ್‌ ಸೊಳ್ಳೆಯು ರೋಗ ಇರುವವರಿಗೆ ಕಚ್ಚಿ ಬೇರೆಯವರಿಗೆ ಕಚ್ಚಿದಾಗ ರೋಗ ಹರಡುತ್ತದೆ. ಆದರೆ, ಈಡಿಸ್‌ ಈಜಿಪ್ಟೈ ಸೊಳ್ಳೆ ಡೆಂಗಿ ರೋಗಿಗೆ ಕಚ್ಚಿ ರಕ್ತ ಹೀರಿ ಇನ್ನೊಬ್ಬರಿಗೆ ಕಚ್ಚಿದಾಗ ಹರಡುವುದಷ್ಟೇ ಅಲ್ಲ, ತಾನು ಇಡುವ ಮೊಟ್ಟೆಗಳಿಗೂ ರವಾನೆ ಮಾಡುತ್ತದೆ. ಆ ಮೊಟ್ಟೆ ಲಾರ್ವಾ ಆಗಿ ಮತ್ತೆ ಸೊಳ್ಳೆಗಳಾಗುವಾಗ ಸೋಂಕನ್ನು ಹಾಗೇ ಇಟ್ಟುಕೊಂಡಿರುತ್ತವೆ. ಈ ಸೊಳ್ಳೆ ಹಗಲಿನ ವೇಳೆ ಕಚ್ಚುವುದರಿಂದ ಮಕ್ಕಳ ಕೈ ಮತ್ತು ಕಾಲು ಮುಚ್ಚುವಂತೆ ಬಟ್ಟೆಗಳನ್ನು ತೊಡಿಸಬೇಕು ಎನ್ನುತ್ತಾರೆ ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ.ನಟರಾಜ್‌.

ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ಮನವಿ
‘ನಗರ ಮತ್ತು ಗ್ರಾಮೀಣ ಪ್ರದೇಶಗಳ ಬಡವರು, ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುತ್ತೇವೆ. ಇಲ್ಲಿನ ವೈದ್ಯರೂ ಉತ್ತಮವಾಗಿ ಚಿಕಿತ್ಸೆ ನೀಡುತ್ತಾರೆ. ಆದರೆ, ಸ್ವಚ್ಛತೆ ಕೊರತೆ ಇದೆ. ಆಸ್ಪತ್ರೆಗೆ ದಾಖಲಾದ ದಿನದಿಂದ ಮನೆಗೆ ಹೋಗುವವರೆಗೂ ಒಂದೇ ಬೆಡ್‌ಶೀಟ್‌ ಮತ್ತು ಹೊದಿಕೆ ಇರುತ್ತದೆ. ವಾರ್ಡ್‌ ಮತ್ತು ಶೌಚಾಲಯಗಳಲ್ಲೂ ಸ್ವಚ್ಛತೆ ಕೊರತೆ ಇದೆ. ಸ್ವಚ್ಛತೆ ಬಗ್ಗೆ ಪಾಠ ಮಾಡುವವರೇ ಈ ರೀತಿ ಮಾಡಿದರೆ ಹೇಗೆ? ವೈದ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಆಸ್ಪತ್ರೆಯಿಂದ ಮನೆಗೆ ತೆರಳಿರುವ ಮಗುವಿನ ಪೋಷಕರೊಬ್ಬರು ಮನವಿ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪಿಸಿವಿ ಲಸಿಕೆ
ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ, ನ್ಯುಮೊಕಾಕಲ್ ಇನ್ನಿತರ ರೋಗಗಳಿಂದ ರಕ್ಷಣೆ ನೀಡುವಂತಹ ಪಿಸಿವಿ (ನ್ಯುಮೊಕಾಕಲ್ ಕಾಂಜುಗೇಟ್ ವ್ಯಾಕ್ಸಿನ್) ನೂತನ ಲಸಿಕೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದ್ದಾರೆ.

ಪಿಸಿವಿ ನೂತನ ಲಸಿಕೆಯನ್ನು 3 ಡೋಸ್‌ನಲ್ಲಿ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ ₹ 2 ಸಾವಿರದಿಂದ ₹ 4 ಸಾವಿರ ನೀಡಿ ಪಾಲಕರು ತಮ್ಮ ಮಕ್ಕಳಿಗೆ ಹಾಕಿಸುತ್ತಿದ್ದಾರೆ. ಇದೀಗ ಸರ್ಕಾರ ಪಿಸಿವಿ ಲಸಿಕೆಯನ್ನು ಉಚಿತವಾಗಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ನೀಡಲು ತೀರ್ಮಾನಿಸಿದೆ. ನ್ಯುಮೋನಿಯಾ, ನ್ಯುಮೊಕಾಕಲ್ ಶ್ವಾಸಕೋಶ ಸಂಬಂಧಿ ಸೋಂಕು. ಇದು ತೀವ್ರ ಸ್ವರೂಪ ಪಡೆದಲ್ಲಿ ಮರಣವೂ ಸಂಭವಿಸಬಹುದು. ಪಿಸಿವಿ ಲಸಿಕೆ ಡೋಸ್ ಅನ್ನು 6 ವಾರ, 14 ವಾರದ ಮಗುವಿಗೆ ನೀಡಲಾಗುತ್ತದೆ. 9 ತಿಂಗಳ ಮಗುವಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

*

ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯ ಚಿಕಿತ್ಸೆಗೆ ಬರುವವರಿಗೆ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಉಚಿತವಾಗಿರಕ್ತದ ಮಾದರಿಯ ಪರೀಕ್ಷೆ ಮಾಡಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಂದ ಬರುವ ಮಾದರಿಗಳನ್ನೂ ಪರೀಕ್ಷಿಸಿ ವರದಿ ನೀಡಲಾಗುತ್ತಿದೆ. ಸಾರ್ವಜನಿಕರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು.
-ಡಾ.ಜಿ.ಡಿ. ರಾಘವನ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ, ದಾವಣಗೆರೆ

ಮಕ್ಕಳ ಆರೋಗ್ಯಕ್ಕೆ ವೈದ್ಯರ ಸಲಹೆಗಳು
* ನವಜಾತ ಶಿಶುವಿಗೆ ತಾಯಿ ನಿಯಮಿತವಾಗಿ ಹಾಲುಣಿಸಬೇಕು
* ಮಕ್ಕಳಲ್ಲಿ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಕಾಣಬೇಕು
* ಮನೆಯಲ್ಲಿ ಶೀತ, ಕೆಮ್ಮು, ಜ್ವರ ಇರುವವರಿಂದ ಮಕ್ಕಳನ್ನು ದೂರವಿಡಬೇಕು
* ತಾಯಿಗೆ ರೋಗ ಲಕ್ಷಣವಿದ್ದರೆ ಮಾಸ್ಕ್‌ ಹಾಕಿಕೊಂಡಿರಬೇಕು. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು
* ತಣ್ಣೀರಿನಲ್ಲಿ ಆಟವಾಡಲು ಮಕ್ಕಳನ್ನು ಬಿಡಬಾರದು
* ಮಕ್ಕಳ ಕಿವಿಗೆ ಹತ್ತಿ ಇಡಬೇಕು. ಹತ್ತಿಗೆ ಎಣ್ಣೆ ಹಾಕಬಾರದು
* ಮನೆಗಳಲ್ಲಿ ಗ್ರಾನೈಟ್‌ ನೆಲದಲ್ಲಿ ಮಕ್ಕಳನ್ನು ನೇರವಾಗಿ ಆಡಲು ಬಿಡಬಾರದು. ಮ್ಯಾಟ್‌ ಬಳಸಬೇಕು
* ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮಲಗುವಾಗ ಸೊಳ್ಳೆಪರದೆಗಳನ್ನು ಬಳಸಬೇಕು.

ಅಂಕಿ–ಅಂಶ...

28 ದಿವಸಗಳೊಳಗಿನ ನವಜಾತ ಶಿಶು ವಿಭಾಗ
* 40: ಸುಸಜ್ಜಿತ ನವಜಾತ ಶಿಶು ವಿಭಾಗ (ಎನ್‌ಐಸಿಯು) ದಲ್ಲಿರುವ ಬೆಡ್‌ಗಳು
* 40: ಮಕ್ಕಳ ಕಾಳಜಿಗೆ ಇರುವ ನರ್ಸ್‌ಗಳು
* 2: ನವಜಾತ ಶಿಶು ತಜ್ಞರು
* 8: ಕರ್ತವ್ಯನಿರತ ವೈದ್ಯರು

28 ದಿವಸಗಳ ಮೇಲಿನ ಮಕ್ಕಳ ವಿಭಾಗ
53: ಒಳರೋಗಿಗಳಾಗಿ ದಾಖಲಾಗುವವರಿಗೆ ಇರುವ ಬೆಡ್‌ಗಳು
* 12: ತೀವ್ರ ನಿಗಾ ಘಟಕ (ಪಿಐಸಿಯು)ದಲ್ಲಿರುವ ಬೆಡ್‌ಗಳು

ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಕ್ರಮ
-ಡಿ. ಶ್ರೀನಿವಾಸ್‌

ಜಗಳೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಪಟ್ಟಣದ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗಾಗಿ ಸಾಲುಗಟ್ಟಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.

ತಾಲ್ಲೂಕಿನಲ್ಲಿ ಇದುವರೆಗೆ ವಿವಿಧ ಆಸ್ಪತ್ರೆಗಳಲ್ಲಿ 1500ಕ್ಕೂ ಹೆಚ್ಚು ಮಕ್ಕಳು ವೈರಲ್ ಜ್ವರದಿಂದ ನರಳಿದ್ದು, ಬಹುತೇಕರು ಗುಣಮುಖರಾಗಿದ್ದಾರೆ. ಜ್ವರಪೀಡಿತ ಮಕ್ಕಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದ್ದು, ಯಾರಲ್ಲೂ ಸೋಂಕು ಕಂಡುಬಂದಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಇದುವರೆಗೆ 5 ಶಂಕಿತ ಡೆಂಗಿ ಪ್ರಕರಣಗಳು ಕಂಡುಬಂದಿದ್ದು, ಕೆಳಗೋಟೆ ಗ್ರಾಮದ ಒಂದೂವರೆ ವರ್ಷದ ಮಗು ಶಂಕಿತ ಡೆಂಗಿಯಿಂದ ಮೃತಪಟ್ಟಿದೆ. ಪಟ್ಟಣದಲ್ಲಿ ಸೊಳ್ಳೆ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಲು ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಚಿಕಿತ್ಸೆಗೆ ಅಗತ್ಯ ಕ್ರಮ
-
ವಿಶ್ವನಾಥ ಡಿ.
ಹರಪನಹಳ್ಳಿ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ವಾರದಿಂದ ಸಾಮಾನ್ಯ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, 25 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಂಕಿತ ಡೆಂಗಿ ಲಕ್ಷಣಗಳಿರುವ 4 ಮಕ್ಕಳು, ಕೆಮ್ಮು, ಕಫ, ಶೀತದಿಂದ ಬಳಲುವವರು 9 ಮಕ್ಕಳು, ಜ್ವರ 8, ತೀವ್ರ ಜ್ವರವಿರುವ 6 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಟ್ಟಣದಲ್ಲಿ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ, 2 ಸಮುದಾಯ ಆರೋಗ್ಯ ಕೇಂದ್ರ, 17 ಪ್ರಾಥಮಿಕ ಆರೋಗ್ಯ ಕೇಂದ್ರ, 57 ಉಪಕೇಂದ್ರಗಳಿವೆ. ಮಕ್ಕಳಿಗೆ 10 ಹಾಸಿಗೆ ಸುಸಜ್ಜಿತ ಚಿಕಿತ್ಸಾ ಕೊಠಡಿ, 4 ವೆಂಟಿಲೇಟರ್ ಇರುವ ಹಾಸಿಗೆ, ಆಮ್ಲಜನಕ ಇರುವ 15 ಬೆಡ್‌ಗಳಿರುವ ಕೊಠಡಿ ರಚಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರತಿ ವರ್ಷ ಮಳೆಗಾಲ ಆರಂಭವಾದಾಗ ಶೀತದ ವಾತಾವರಣಕ್ಕೆ ವೈರಸ್‌ಗಳು ಉತ್ಪತ್ತಿಯಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ ಬಾಧೆಗೆ ಕಾರಣವಾಗುತ್ತವೆ. ಇದಕ್ಕೆ ಪಾಲಕರು ಭಯಪಡುವ ಅಗತ್ಯವಿಲ್ಲ. ತಕ್ಷಣ ವೈದ್ಯರಲ್ಲಿಗೆ ಕರೆತಂದು ಚಿಕಿತ್ಸೆ ಕೊಡಿಸಬೇಕು ಎಂದು ಸರ್ಕಾರಿ ಆಸ್ಪತ್ರೆ ಮಕ್ಕಳ ತಜ್ಞ ಡಾ.ದತ್ತಾತ್ರೇಯ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು