ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಒತ್ತಾಯ

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಶಾಖೆ ಅಧಿಕಾರಿಗಳ ಬಗ್ಗೆ ಸದಸ್ಯರಿಂದ ದೂರುಗಳ ಸರಮಾಲೆ
Last Updated 24 ಸೆಪ್ಟೆಂಬರ್ 2018, 13:10 IST
ಅಕ್ಷರ ಗಾತ್ರ

ದಾವಣಗೆರೆ: ಹೋಟೆಲ್‌, ಅಂಗಡಿ ಸೇರಿ ವಾಣಿಜ್ಯ ಮಳಿಗೆಗಳಲ್ಲಿ ನಿತ್ಯ ಉತ್ಪತ್ತಿಯಾಗುವ ಕಸ ಸಂಗ್ರಹಿಸಲು ಪ್ರತ್ಯೇಕ ವಾಹನ ವ್ಯವಸ್ಥೆಯನ್ನು ಮಾಡಬೇಕು ಎಂದು ಹಲವು ಸದಸ್ಯರು ಸೋಮವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ದಿನೇಶ್‌ ಶೆಟ್ಟಿ, ‘ಅಂಗಡಿ, ಹೋಟೆಲ್‌ಗಳಿಂದ ದಿನಾಲೂ ನಿಗದಿತ ಸಮಯಕ್ಕೆ ಆಪೆ ವಾಹನಗಳ ಮೂಲಕ ಕಸವನ್ನು ಸಂಗ್ರಹಿಸಬೇಕು. ಎಷ್ಟು ಕಸ ಉತ್ಪತ್ತಿಯಾಗುತ್ತದೆ ಎಂಬುದನ್ನು ಪರಿಗಣಿಸಿ ಅವುಗಳಿಗೆ ಶುಲ್ಕ ನಿಗದಿಗೊಳಿಸಬೇಕು. ಸಮರ್ಪಕವಾಗಿ ಕಸವನ್ನು ಒಯ್ಯದೇ ಇರುವುದರಿಂದ ರಸ್ತೆಯ ಪಕ್ಕದಲ್ಲೇ ಎಸೆಯಲಾಗುತ್ತಿದೆ. ಆರೋಗ್ಯ ನಿರೀಕ್ಷಕರು ವಾರ್ಡ್‌ಗಳಲ್ಲಿ ಅಡ್ಡಾಡಿ ರಸ್ತೆ ಮೇಲೆ ಕಸ ಹಾಕುವವರಿಗೆ ದಂಡ ವಿಧಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಎಂ. ಹಾಲೇಶ್‌, ‘ಪಾಲಿಕೆ ಆವರಣದಲ್ಲಿದ್ದರೂ ಆರೋಗ್ಯಾಧಿಕಾರಿ ಚಂದ್ರಶೇಖರ್‌ ಸುಂಕದ ಅವರು ಕಳೆದ ಆರೋಗ್ಯ ಸ್ಥಾಯಿ ಸಮಿತಿ ಸಭೆಗೆ ಗೈರಾಗಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು.

ಸದಸ್ಯ ಎಚ್‌.ಜಿ. ಉಮೇಶ್‌, ‘ಇದು ಪಾಲಿಕೆ ಆಡಳಿತವನ್ನು ತೋರಿಸುತ್ತದೆ. ಐದು– ಆರು ತಿಂಗಳಿಂದ ಟ್ರೇಡ್‌ ಲೈಸೆನ್ಸ್‌ಗಾಗಿ ಜನ ಅಲೆದಾಡುತ್ತಿದ್ದಾರೆ. ಬೀದಿ ದೀಪ ಸರಿಪಡಿಸದೇ ಮೂರ್ನಾಲ್ಕು ತಿಂಗಳಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ ಬಳ್ಳಾರಿ, ‘ಆಟೊ ಟಿಪ್ಪರ್‌ಗಳಲ್ಲಿ ಒಂದೂವರೆ ಟನ್‌ ಕಸವನ್ನು ಮಾತ್ರ ತುಂಬುವ ಸಾಮರ್ಥ್ಯವಿದೆ. ಆದರೆ, ಕೆಲವೆಡೆ ಅದಕ್ಕಿಂತಲೂ ಹೆಚ್ಚು ಕಸವನ್ನು ತಂದು ಹಾಕಲಾಗುತ್ತಿತ್ತು. ಹೀಗಾಗಿ ಸದಸ್ಯ ವಾಣಿಜ್ಯ ಮಳಿಗೆಗಳಿಂದ ಕಸ ಒಯ್ಯುವುದನ್ನು ನಿಲ್ಲಿಸಿದ್ದೇವೆ. ಶೀಘ್ರದಲ್ಲೇ ದೊಡ್ಡ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುತ್ತಿರುವ ವಾಣಿಜ್ಯ ಮಳಿಗೆಗಳಿಂದ ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಬಗ್ಗೆ ಟೆಂಡರ್‌ ಕರೆಯಲಾಗುವುದು’ ಎಂದು ಭರವಸೆ ನೀಡಿದರು.

ಮಾಂಸದಂಗಡಿ ಸಮಸ್ಯೆ

ಸದಸ್ಯ ಲಿಂಗರಾಜ ಪಿ.ಕೆ, ‘ಮಟನ್‌ ಹಾಗೂ ಕೋಳಿ ಅಂಗಡಿಗಳಲ್ಲಿ ಮಾಂಸದ ಮೇಲೆ ನೊಣಗಳು ಕುಳಿತುಕೊಳ್ಳುತ್ತಿದ್ದು, ರೋಗ ಹರಡುತ್ತಿದೆ. ತ್ಯಾಜ್ಯಗಳು ಚರಂಡಿಗೆ ಸೇರಿ ದುರ್ವಾಸನೆ ಬರುತ್ತಿದೆ. ತ್ಯಾಜ್ಯವನ್ನು ಎಲ್ಲೆಂದರೆಲ್ಲಿ ಎಸೆಯುತ್ತಿದ್ದಾರೆ’ ಎಂದು ದೂರಿದರು.

ದಿನೇಶ್‌ ಶೆಟ್ಟಿ, ‘ಅಂಥ ಎರಡು ಅಂಗಡಿಗಳನ್ನು ಮುಚ್ಚಿಸಿದರೆ ಕಸ ಎಸೆಯುವುದನ್ನು ನಿಲ್ಲಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಚಂದ್ರಶೇಖರ್‌ ಪಿ.ಎನ್‌, ನಗರದಲ್ಲಿ ಕಸಾಯಿಖಾನೆ ಆರಂಭಿಸಿದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.

ಬಿಜೆಪಿ ಸದಸ್ಯ ಡಿ.ಕೆ. ಕುಮಾರ್‌ ಮಾತನಾಡಿ, ‘ಪೆಟ್ರೋಲ್‌ ಬಂಕ್‌ಗೆ ಟ್ರೇಡ್‌ ಲೈಸೆನ್ಸ್‌ಗೆ ಅರ್ಜಿ ಹಾಕಿ ಐದು ತಿಂಗಳಾದರೂ ನೀಡಿಲ್ಲ. ಆದರೆ, ಕೋಳಿ ಅಂಗಡಿ ತೆರೆಯಲು 15 ದಿನಗಳ ಒಳಗೆ ಲೈಸೆನ್ಸ್‌ ಕೊಡಲಾಗಿದೆ. ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ಈಗ ಟ್ರೇಡ್‌ ಲೈಸೆನ್ಸ್‌ ನೀಡುವ ಪದ್ಧತಿಯನ್ನು ಗಣಕೀಕರಣಗೊಳಿಸಲಾಗಿದೆ. ಆಯಾ ವಾರ್ಡ್‌ಗಳ ಆರೋಗ್ಯ ನಿರೀಕ್ಷಕರೇ ಕೊಡುತ್ತಾರೆ. ನಗರದಲ್ಲಿ ಸದ್ಯ 6,500 ಟ್ರೇಡ್‌ಲೈಸೆನ್ಸ್‌ ಕೊಡಲಾಗಿದೆ. ಇನ್ನು ಮುಂದೆ ತ್ವರಿತವಾಗಿ ಟ್ರೇಡ್‌ ಲೈಸೆನ್ಸ್‌ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಜಾಗಕ್ಕಾಗಿ ತಿಕ್ಕಾಟ

ರವೀಂದ್ರನಾಥ ನಗರದಲ್ಲಿ ಸರ್ಕಾರಿ ಶಾಲೆಗೆ ಮೀಸಲಿಟ್ಟಿದ್ದ ಜಾಗದಲ್ಲಿ ಅಂಬೇಡ್ಕರ್‌ ಭವನ ನಿರ್ಮಿಸುವುದಕ್ಕೆ ಕಳೆದ ಸಭೆಯಲ್ಲಿ ಒಪ್ಪಿಗೆ ನೀಡಿರುವುದಕ್ಕೆ ಶಾಸಕ ಎಸ್‌.ಎ. ರವೀಂದ್ರನಾಥ ಆಕ್ಷೇಪ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲೆಗಳಿಗೆ ಮಕ್ಕಳು ಬಾರದೇ ಮುಚ್ಚುತ್ತಿವೆ. ಮುಂದೆ ಈ ಜಾಗವೂ ಖಾಸಗಿ ಶಾಲೆಯವರ ಪಾಲಾಗುತ್ತದೆ. ಅದರ ಬದಲು ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಒಪ್ಪಿಗೆ ಕೊಡಬೇಕು’ ಎಂದು ಉಮೇಶ್‌ ಮನವಿ ಮಾಡಿದರು.

ಹಾಲೇಶ್‌, ‘ಈ ಹಿಂದಿನ ಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದ್ದು, ಸರ್ಕಾರಕ್ಕೆ ಕಳುಹಿಸಿಕೊಡಿ’ ಎಂದು ಒತ್ತಾಯಿಸಿದರು.

‘ತಮ್ಮ ವಿರೋಧವಿದೆ ಎಂಬುದನ್ನು ನಮೂದಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಿ’ ಎಂದು ಶಾಸಕರು ಸೂಚಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ಸಾಬ್‌ ಅವರೂ ಇದ್ದರು.

ಇಂದಿರಾ ಕ್ಯಾಂಟೀನ್‌ ಹೊರೆ ಇಳಿಸಲು ಪ್ರಸ್ತಾವ

ನಗರದಲ್ಲಿರುವ ಎಂಟು ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಮಹಾನಗರ ಪಾಲಿಕೆ ವಾರ್ಷಿಕ ₹ 3 ಕೋಟಿ ಪಾವತಿಸಬೇಕಾಗುತ್ತಿದೆ. ಹೀಗಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಡಿ.ಕೆ. ಕುಮಾರ್‌, ‘ಕೆಲವೆಡೆ ಇಂದಿರಾ ಕ್ಯಾಂಟೀನ್‌ಗೆ ಜನ ಬರುತ್ತಿಲ್ಲ. ಆಹಾರದ ಗುಣಮಟ್ಟವೂ ಉತ್ತಮವಾಗಿಲ್ಲ. ಹಣ ಪಾವತಿಸುವ ಮೊದಲು ಎಷ್ಟು ಜನ ಊಟ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.

ಎಚ್‌.ಜಿ. ಉಮೇಶ್‌ ಮಾತನಾಡಿ, ‘ಜನ್ಮದಿನ ಆಚರಿಸಿಕೊಳ್ಳುವ ಗಣ್ಯರು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ಇಂದಿರಾ ಕ್ಯಾಂಟೀನ್‌ಗೆ ಹಣ ಹೊಂದಿಸುವ ವ್ಯವಸ್ಥೆ ಮಾಡಬೇಕು. ಕೊನೆ ಪಕ್ಷ ರಾಜ್ಯ ಸರ್ಕಾರ ಶೇ 30 ಹಾಗೂ ಪಾಲಿಕೆ ಶೇ 70ರಷ್ಟು ಇರುವುದನ್ನು ಬದಲಾಯಿಸಿ ಸಮನಾಗಿ ಶೇ 50ರಷ್ಟು ಹಣ ಪಾವತಿಸುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

ದಿನೇಶ್‌ ಶೆಟ್ಟಿ, ‘ಬಡವರಿಗೆ ಕ್ಯಾಂಟೀನ್‌ನಿಂದ ಅನುಕೂಲವಾಗುತ್ತಿದೆ. ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸಬಾರದು. ಕೆಲವರು ಮೊಸರಲ್ಲಿ ಕಲ್ಲು ಹುಡುಕುತ್ತಾರೆ’ ಎಂದು ಕಿಚಾಯಿಸಿದರು. ಇದಕ್ಕೆ ಹಾಲೇಶ್‌ ಸಹ ದನಿಗೂಡಿಸಿದರು.

ಪೌರಕಾರ್ಮಿಕರಿಗೆ ಉಪಾಹಾರ:

‘ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಬೆಳಗಿನ ಉಪಾಹಾರ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು’ ಎಂದೂ ದಿನೇಶ್‌ ಶೆಟ್ಟಿ ಸಲಹೆ ನೀಡಿದರು.

ಜಾಹೀರಾತು ತೆರಿಗೆ ಬಾಕಿಗೆ ಆಕ್ಷೇಪ

ಬೆಂಗಳೂರಿನಲ್ಲಿ ಫೆಕ್ಸ್‌ಗಳನ್ನು ನಿಷೇಧಿಸಿ ಹೈಕೋರ್ಟ್‌ ನಿರ್ದೇಶನ ನೀಡಿರುವ ಕುರಿತ ವಿಷಯದ ಚರ್ಚೆ ವೇಳೆ ನಗರದಲ್ಲಿ ಅಳವಡಿಸುತ್ತಿರುವ ಜಾಹೀರಾತು ಫಲಕಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿ ಆಗದೇ ಇರುವುದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಫೆಕ್ಸ್‌ಗಳನ್ನು ಹಾಕುವುದಕ್ಕೆ ಅನುಮತಿ ನೀಡುವ ಬದಲು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸುವುದು ಒಳಿತು ಎಂದು ಎಚ್‌.ಜಿ. ಉಮೇಶ್‌ ಅಭಿಪ್ರಾಯಪಟ್ಟರು.

ಲಿಂಗರಾಜ ಪಿ.ಕೆ, ‘ಕೆಲವರ ಜನ್ಮದಿನ ಫೆಲ್ಸ್‌ಗಳನ್ನು ಎರಡು ತಿಂಗಳಾದರೂ ತೆರವುಗೊಳಿಸಿಲ್ಲ. ಹೀಗಾಗಿ ನಗರದಲ್ಲಿ ಫ್ಲೆಕ್ಸ್‌ಗಳನ್ನು ನಿಷೇಧಿಸುವುದು ಒಳ್ಳೆಯದು’ ಎಂದು ಪ್ರತಿಪಾದಿಸಿದರು.

ಜಿ.ಬಿ. ಲಿಂಗರಾಜ್‌, ‘ಜಾಹೀರಾತು ಫಲಕಗಳ ಅಳವಡಿಕೆ ಹಿಂದೆ ದೊಡ್ಡ ಮಾಫಿಯಾ ಇದೆ. ಅದನ್ನು ನಿಯಂತ್ರಿಸಬೇಕು’ ಎಂದರು.

‘ಜನಸಾಮಾನ್ಯರು ತೆರಿಗೆ ಪಾವತಿಸಿಲ್ಲ ಎಂದು ನಲ್ಲಿ ಸಂಪರ್ಕ ಕಡಿತಗೊಳಿಸುತ್ತೀರಿ. ಅದೇ ಜಾಹೀರಾತು ಏಜನ್ಸಿಯವರು ಲಕ್ಷಾಂತರ ರೂಪಾಯಿ ಬಾಕಿ ಇಟ್ಟುಕೊಂಡರೂ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ನಗರದ ಎಲ್ಲ ಜಾಹೀರಾತು ಹೋರ್ಡಿಂಗ್‌ಗಳಿಗೆ ಹೊಸದಾಗಿ ಟೆಂಡರ್‌ ಕರೆಯಬೇಕು’ ಎಂದು ಹಾಲೇಶ್‌ ಒತ್ತಾಯಿಸಿದರು. ಉಪ ಮೇಯರ್‌ ಚಮನ್‌ ಸಾಬ್‌ ಅವರೂ ಇದಕ್ಕೆ ಧ್ವನಿಗೂಡಿಸಿದರು.

ನಗರದಲ್ಲಿ 146 ಜಾಹೀರಾತು ಏಜನ್ಸಿಗಳಿವೆ. ಇವುಗಳಿಂದ ವಾರ್ಷಿಕ ₹ 54 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಕಳೆದ ಒಂದು ತಿಂಗಳಲ್ಲಿ ₹ 3.22 ಲಕ್ಷ ವಸೂಲಿ ಮಾಡಲಾಗಿದೆ. ಬಕಿ ಉಳಿದ ತೆರಿಗೆಯನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸದಸ್ಯರು ನಿರ್ಧರಿಸಿದರೆ ಇವುಗಳಿಗೆ ಹೊಸದಾಗಿ ಟೆಂಡರ್‌ ಕರೆಯಲಾಗುವುದು ಎಂದು ಆಯುಕ್ತರು ತಿಳಿಸಿದರು. ಇದಕ್ಕೆ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT