ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಯವೇತನ ನಿಲ್ಲಿಸಿದ ಸರ್ಕಾರ: ಜೆಜೆಎಂಎಂಸಿ ವೈದ್ಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

ರಾಜ್ಯ ಸರ್ಕಾರದಿಂದ 16 ತಿಂಗಳಿಂದ ಬಾರದ ಶಿಷ್ಯ ವೇತನ
Last Updated 29 ಜೂನ್ 2020, 12:33 IST
ಅಕ್ಷರ ಗಾತ್ರ

ದಾವಣಗೆರೆ: ಹದಿನಾರು ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನ ಬಿಡುಗಡೆಗೆ ಒತ್ತಾಯಿಸಿ ನಗರದ ಜೆ.ಜೆ.ಎಂ.ಸಿ ಜೂನಿಯರ್‌ ಡಾಕ್ಟರ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ವೈದ್ಯ ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ಜೆ.ಜೆ.ಎಂ.ಎಂ.ಸಿ. ಕಾಲೇಜಿನಲ್ಲಿ ಸರ್ಕಾರಿ ಖೋಟಾದಡಿ ಪ್ರವೇಶ ಪಡೆದಿರುವ 230 ವೈದ್ಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿರುವುದರಿಂದ ಕಾಲೇಜಿನ ಶುಲ್ಕ ಹಾಗೂ ಇನ್ನಿತರೆ ಶೈಕ್ಷಣಿಕ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗದೇ ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ‘ಮೇಲೆ ಬಿಳಿ ಬಟ್ಟೆ, ಒಳಗೆ ಖಾಲಿ ಹೊಟ್ಟೆ’; ‘ಡಿಎಂಇಗೆ ಚಲ್ಲಾಟ, ವೈದ್ಯರಿಗೆ ಪ್ರಾಣ ಸಂಕಟ’, ‘ವೈದ್ಯೋ ನಾರಾಯಣ ಹರಿ, ವೈದ್ಯರ ಜೇಬಿಗೆ ಕತ್ತರಿ’ ಎಂಬಂತಹ ಬರಹಗಳಿರುವ ಫಲಕಗಳನ್ನು ಹಿಡಿದು ಗಮನ ಸೆಳೆದರು.

ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಹಿತಾ, ‘2018–19ನೇ ಸಾಲಿನಲ್ಲಿ ಸರ್ಕಾರಿ ಖೋಟಾದಡಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ 2019ರ ಮಾರ್ಚ್‌ನಿಂದ ಶಿಷ್ಯ ವೇತನ ನೀಡುವುದನ್ನು ಸರ್ಕಾರ ನಿಲ್ಲಿಸಿದೆ. ಈ ಬಗ್ಗೆ ಪ್ರತಿಭಟನೆ ಮಾಡಿ ಮುಖ್ಯಮಂತ್ರಿ, ವೈದ್ಯಕೀಯ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 15 ತಿಂಗಳು ಮೌನವಾಗಿದ್ದ ಸರ್ಕಾರ ಈಗ ಕಾಲೇಜಿನ ಆಡಳಿತ ಮಂಡಳಿಯೇ ನೀಡಬೇಕು ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಸರ್ಕಾರಿ ಖೋಟಾದಡಿ ಪ್ರವೇಶ ಶುಲ್ಕ ಕಡಿಮೆ ಪಡೆಯುವುದರಿಂದ ಶಿಷ್ಯ ವೇತನವನ್ನು ನೀಡಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಹೇಳುತ್ತಿದೆ. ಪ್ರವೇಶ ಪಡೆಯುವ ಮುನ್ನವೇ ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಿದ್ದರೆ ನಾವು ಈ ಕಾಲೇಜಿನಲ್ಲಿ ಪ್ರವೇಶವನ್ನೇ ಪಡೆಯುತ್ತಿರಲಿಲ್ಲ’ ಎಂದು ಹೇಳಿದರು.

‘ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶೇ 90ರಷ್ಟು ಕೆಲಸಗಳು ಜೂನಿಯರ್‌ ಡಾಕ್ಟರ್‌ಗಳಿಂದಲೇ ನಡೆಯುತ್ತಿದೆ. ಕೊರೊನಾ ವಾರಿಯರ್‌ಗಳಾಗಿ ನಾವೂ ಕೆಲಸ ಮಾಡುತ್ತಿದ್ದೇವೆ. ಚಿಕಿತ್ಸೆ ನೀಡುತ್ತಿದ್ದ ಜೂನಿಯರ್‌ ಡಾಕ್ಟರ್‌ಗಳಿಗೂ ಕೊರೊನಾ ಸೋಂಕು ತಗುಲಿದೆ. ನಮ್ಮ ಸೇವೆಯನ್ನು ಬಳಸಿಕೊಳ್ಳುತ್ತಿರುವ ಸರ್ಕಾರ ಶಿಷ್ಯ ವೇತನ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ.ರಾಹುಲ್‌ ಮಾತನಾಡಿ, ‘ವೈದ್ಯರಿಗೆ ಸಕಾಲಕ್ಕೆ ಸಂಬಳ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಹೀಗಿದ್ದರೂ ಈ ಆದೇಶವನ್ನು ಸರ್ಕಾರ ಪಾಲಿಸುತ್ತಿಲ್ಲ. ಹೋರಾಟ ಮಾಡಲು ಪರವಾನಗಿ ನೀಡುವಂತೆ ಮನವಿ ಮಾಡಲು ಹೋದರೆ ಜಿಲ್ಲಾಡಳಿತ ನಮಗೇ ಬೆದರಿಕೆ ಹಾಕಿ ವಾಪಸ್‌ ಕಳುಹಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತುರ್ತು ಸೇವೆಗೆ ತೊಂದರೆಯಾಗದಂತೆ ಸದ್ಯ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆಗಳಿಗೆ ಆಗಸ್ಟ್‌ 31ರೊಳಗೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ತುರ್ತು ಸೇವೆಗಳನ್ನೂ ನಿಲ್ಲಿಸಿ ಎಲ್ಲಾ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಗರಿಕರಿಗೆ ಆರೋಗ್ಯ ಸೇವೆ ಸಿಗದಿದ್ದರೆ ಸರ್ಕಾರವೇ ಅದಕ್ಕೆ ಹೊಣೆಯಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಡಾ.ಮೇಘನಾ, ಡಾ. ನಿಧಿ, ಡಾ.ಹರೀಶ್‌ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

'ನಾವು ಕೊರೊನಾ ವಾರಿಯರ್‌ಗಳಾ ಅಥವಾ ಜೀತದಾಳುಗಳಾ'

ನಾವೇನೂ ಹೆಚ್ಚು ಹಣ ಕೊಡಿ ಎಂದು ಕೇಳುತ್ತಿಲ್ಲ. ನಮ್ಮ ಹಕ್ಕಿನ ಶಿಷ್ಯ ವೇತನವನ್ನಷ್ಟೇ ಕೇಳುತ್ತಿದ್ದೇವೆ. ನಾವು ಕೊರೊನಾ ವಾರಿಯರ್‌ಗಳಾ ಅಥವಾ ಜೀತದಾಳುಗಳಾ ತಿಳಿಯುತ್ತಿಲ್ಲ ಎಂದು ಜೆಜೆಎಂಎಂಸಿ ವೈದ್ಯ ಡಾ.ರಾಹುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT