ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗಳೂರು | ಮಾಜಿ ಶಾಸಕ ಎಚ್. ಪಿ.ರಾಜೇಶ್ ಶೀಘ್ರ ಬಿಜೆಪಿಗೆ

Published 2 ಮಾರ್ಚ್ 2024, 7:00 IST
Last Updated 2 ಮಾರ್ಚ್ 2024, 7:00 IST
ಅಕ್ಷರ ಗಾತ್ರ

ಜಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಜಗಳೂರು ತಾಲ್ಲೂಕಿನಲ್ಲಿ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅತ್ಯಲ್ಪ ಮತಗಳ ಅಂತರದಲ್ಲಿ ಸೋಲುಂಡಿದ್ದ ಎಚ್.ಪಿ.ರಾಜೇಶ್ ಅವರು, ಮಹತ್ವದ ಬೆಳವಣಿಗೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ವಿಧಾನಸಭಾ ಚುನಾವಣೆಯ ಸೋಲಿನ ನಂತರ ಹಲವು ಬಾರಿ ತಮ್ಮ ಬೆಂಬಲಿಗರ ಸಭೆ ಕರೆದು ಚರ್ಚಿಸಿದ್ದ ರಾಜೇಶ್ ಕೊನೆಗೂ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ರಾಜೇಶ್ ಸೇರ್ಪಡೆಯನ್ನು ಪ್ರಬಲವಾಗಿ ವಿರೋಧಿಸಿದ್ದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹಾಗೂ ರಾಜೇಶ್ ಅವರನ್ನು ಐದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಒಂದೇ ವೇದಿಕೆಯಲ್ಲಿ ಕೂರಿಸಿ ಇಬ್ಬರ ಮಧ್ಯೆ ಸಂಧಾನ ಮಾಡಿರುವ ಬಿಜೆಪಿ ವರಿಷ್ಠರು ಕೊನೆಗೂ ರಾಜೇಶ್ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜೇಶ್ ಅವರ ವಿರುದ್ಧ ಐದು ಚುನಾವಣೆಗಳಲ್ಲಿ ನೇರಾನೇರ ಪೈಪೋಟಿ ನಡೆಸಿ ಮೂರು ಬಾರಿ ಶಾಸಕರಾಗಿರುವ ರಾಮಚಂದ್ರ, ತಮ್ಮ ಪ್ರಬಲ ರಾಜಕೀಯ ವಿರೋಧಿ ರಾಜೇಶ್ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸರಿಸಮನಾಗಿ ಮತಗಳನ್ನು ಪಡೆದಿದ್ದ ರಾಜೇಶ್ ಅವರ ಸಂಘಟನಾ ಶಕ್ತಿಯನ್ನು ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಳ್ಳುವ ಬಿಜೆಪಿ ಮುಖಂಡರ ತಂತ್ರಗಾರಿಕೆ ಮತ್ತು ಒತ್ತಡಕ್ಕೆ ರಾಮಚಂದ್ರ ಕೊನೆಗೂ ಮಣಿದಿದ್ದಾರೆ ಎನ್ನಲಾಗಿದೆ.

ಪಟ್ಟಣದಲ್ಲಿ ಗುರುವಾರ ತಮ್ಮ ಬೆಂಬಲಿಗರ ಸಭೆ ಕರೆದಿದ್ದ ಮಾಜಿ ಶಾಸಕ ರಾಮಚಂದ್ರ, ‘ಕೆಲವು ಷರತ್ತುಗಳ ಹಿನ್ನೆಲೆಯಲ್ಲಿ ರಾಜೇಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದು, ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವುದು ಖಚಿತ ಎನ್ನುವುದನ್ನು ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ’ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನನ್ನ ಸ್ವಾಭಿಮಾನಿ ಬೆಂಬಲಿಗರ ಒತ್ತಾಸೆಯಿಂದಾಗಿ ಯಾವುದೇ ಷರತ್ತುಗಳಿಲ್ಲದೆ ನಾನು ಶನಿವಾರ ಬೆಂಗಳೂರಿನಲ್ಲಿ ವರಿಷ್ಠರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ’ ಎಂದು ಖಚಿತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲನೇ ಬಾರಿಗೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕೊನೆ ಕ್ಷಣದವರೆಗೆ ತುರುಸಿನ ಪೈಪೋಟಿ ಕಂಡು ಬಂದಿತ್ತು. ಕಾಂಗ್ರೆಸ್‌ನಿಂದ ಬಿ.ದೇವೇಂದ್ರಪ್ಪ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಎಸ್.ವಿ.ರಾಮಚಂದ್ರ ಹಾಗೂ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಪಿ.ರಾಜೇಶ್ ಸ್ವಲ್ಪ ಮತಗಳ ಅತ್ಯಲ್ಪ ಅಂತರದಲ್ಲಿ ಸೋಲುಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT