ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ರಾಷ್ಟ್ರೀಯ ಲೋಕ ಅದಾಲತ್: 5 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ

Published 7 ಸೆಪ್ಟೆಂಬರ್ 2023, 6:54 IST
Last Updated 7 ಸೆಪ್ಟೆಂಬರ್ 2023, 6:54 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸೆ.9ರಂದು ಜಿಲ್ಲೆಯ 25 ನ್ಯಾಯಾಲಯಗಳು ಹಾಗೂ ಕಾನೂನು ಸೇವಾ ಪ್ರಾಧಿಕಾರದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಹಾಗೂ ಲೋಕ ಅದಾಲತ್ ಆಯೋಜಿಸಿದ್ದು, ಕಳೆದ ಆಗಸ್ಟ್ ವೇಳೆಗೆ ಜಿಲ್ಲೆಯಲ್ಲಿ 39,157 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ 5,000 ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಇದೆ’ಎಂದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಳೆದ ಜುಲೈ 8ರಂದು ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಇದ್ದ 38,500 ಪ್ರಕರಣಗಳಲ್ಲಿ 3,590 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಖಾಸಗಿ ಬ್ಯಾಂಕ್‌ಗಳ 46,223, ಖಾತಾ ಬದಲಾವಣೆಯ 37,197 ಹಾಗೂ ಸಂಚಾರ ನಿಯಮ ಉಲ್ಲಂಘನೆಯ 11,064 ಪ್ರಕರಣಗಳು ಸೇರಿದಂತೆ 1,38,992 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಲೋಕ ಅದಾಲತ್‌ನಿಂದ ಶೀಘ್ರಗತಿಯಾಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದರ ಜೊತೆಗೆ ಕಕ್ಷಿದಾರರಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಕಡಿಮೆ ಖರ್ಚಿನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು. ಅಲ್ಲದೇ ಮೇಲ್ಮನವಿಗೂ ಅವಕಾಶವಿರುವುದಿಲ್ಲ’ ಎಂದು ಹೇಳಿದರು.

‘ಲೋಕ ಅದಾಲತ್‍ನಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಹಾಗೂ ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪರಿಹಾರ ಕ್ರಮಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ಬ್ಯಾಂಕ್ ಸಾಲ, ಎಂ.ಎಂ.ಡಿ.ಆರ್ (ಅಕ್ರಮ ಮರಳು ಸಾಗಣೆ) ಕಾಯ್ದೆಯಡಿಯ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು’ ಎಂದು ತಿಳಿಸಿದರು.

‘ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು (ವಿಚ್ಛೇದನ ಹೊರತುಪಡಿಸಿ) ಪಿಂಚಣಿ, ವೇತನ ಭತ್ಯೆ, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾದದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು’ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್‌.ಎಚ್. ಅರುಣ್‌ಕುಮಾರ್ ಮಾತನಾಡಿ, ‘ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ವಕೀಲರ ಸಂಘದ ಸಹಕಾರವಿಲ್ಲದೇ ಲೋಕ ಅದಾಲತ್ ಯಶಸ್ವಿಯಾಗುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ ವಕೀಲರು ರಾಜಿಯಾಗುವಂತೆ ಸಲಹೆ ನೀಡಿದ್ದಾರೆ’ ಎಂದು ಹೇಳಿದರು.

ಹಾಸ್ಟೆಲ್ ಭೇಟಿ:

‘ಹಾಸ್ಟೆಲ್‌ಗಳ ಅವ್ಯವಸ್ಥೆ ಹಾಗೂ ಸಂಚಾರ ಸಮಸ್ಯೆಗಳ ಬಗ್ಗೆ ಅರಿವಿದ್ದು, ಸಂಚಾರ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಹಾಸ್ಟೆಲ್‌ಗಳಿಗೆ ಲೋಕ ಅದಾಲತ್‌ ಬಳಿಕ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಕ್ರಿಯಾಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ. ಕರಣ್ಣನವರ್, ವಕೀಲರ ಸಂಘದ ಕಾರ್ಯದರ್ಶಿ ಎಸ್‌. ಬಸವರಾಜ್‌, ಸಹ ಕಾರ್ಯದರ್ಶಿ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT