ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶು ಅಭಿವೃದ್ಧಿ ಯೋಜನೆ: ₹ 35 ಲಕ್ಷ ಅವ್ಯವಹಾರ

ಇಲಾಖಾ ತನಿಖೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಓಬಳಪ್ಪ ಒತ್ತಾಯ
Last Updated 6 ಆಗಸ್ಟ್ 2019, 13:48 IST
ಅಕ್ಷರ ಗಾತ್ರ

ದಾವಣಗೆರೆ: ‘ಶಿಶು ಅಭಿವೃದ್ಧಿ ಯೋಜನೆಯಡಿ ದಾವಣಗೆರೆಯಲ್ಲಿ ಅಂದಾಜು ₹ 35 ಲಕ್ಷ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದರಲ್ಲಿ ಸಿಡಿಪಿಒ ಹಾಗೂ ಎಫ್‌ಡಿಎ ಭಾಗಿಯಾಗಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲೆಕ್ಕಪರಿಶೋಧಕರಿಂದ ತನಿಖೆ ನಡೆಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್‌. ಓಬಳಪ್ಪ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.

‘ಸುಪ್ರವೈಸರ್‌ಗಳ ವರದಿ ಆಧರಿಸಿ ಸಿಡಿಪಿಒ ಧಾನ್ಯಗಳ ಇಂಡೆಂಟ್‌ ಹಾಕಬೇಕು. ನಿಯಮದಂತೆ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಷನ್‌ ಪ್ರೊಡಕ್ಷನ್‌ ಆ್ಯಂಡ್ ಟ್ರೈನಿಂಗ್‌ ಸೆಂಟರ್‌ (ಎಂ.ಎಸ್‌.ಪಿ.ಟಿ.ಸಿ) ಮೂಲಕವೇ ಧಾನ್ಯಗಳನ್ನು ಖರೀದಿಸಬೇಕು. ಆದರೆ, ಅಂಗನವಾಡಿಗೆ ಯಾವುದು ಅಗತ್ಯವಿದೆ ಎಂಬುದಕ್ಕಿಂತ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ಯಾವ ಧಾನ್ಯಗಳಿಗೆ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ಆಧರಿಸಿ ಗುತ್ತಿಗೆದಾರರು ಆಹಾರ ಧಾನ್ಯ ಪೂರೈಕೆ ಮಾಡುತ್ತಿದ್ದಾರೆ. ಶಿಶು ಅಭಿವೃದ್ಧಿ ಯೋಜನೆಯ ಎಫ್‌ಡಿಎ ಗುತ್ತಿದಾರನೂ ಆಗಿದ್ದು, ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾಣೆ. ಎಂ.ಎಸ್‌.ಪಿ.ಟಿ.ಸಿಗೆ ಬಂದಿದ್ದ ₹ 35 ಲಕ್ಷವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ‘ಈ ಬಗ್ಗೆ ಈಗಾಗಲೇ ಸಿಡಿಪಿಒಗೆ ನೋಟಿಸ್‌ ನೀಡಲಾಗಿದೆ. ಎಂ.ಎಸ್‌.ಪಿ.ಟಿ.ಸಿಯಿಂದ ಮಾಹಿತಿ ಪಡೆದು, ಕ್ರಮಕ್ಕೆ ಇಲಾಖೆಗೆ ಶಿಫಾರಸು ಮಾಡಲಾಗುವುದು’ ಎಂದು ಹೇಳಿದರು.

‘ಈ ಬಗ್ಗೆ ಕಾಲಮಿತಿಯಲ್ಲಿ ತನಿಖೆ ನಡೆಸುವಂತೆ ಇಲಾಖೆಗೆ ಪತ್ರ ಬರೆಯೋಣ. ವರದಿ ಆಧರಿಸಿ ಕ್ರಮ ಕೈಗೊಳ್ಳೋಣ’ ಎಂದು ಅಧ್ಯಕ್ಷೆ ಶೈಲಜಾ ಬಸವರಾಜ್‌ ಹಾಗೂ ಸಿಇಒ ಎಚ್‌. ಬಸವರಾಜೇಂದ್ರ ಪ್ರತಿಕ್ರಿಯಿಸಿದರು.

ಕಳೆದ ವರ್ಷ ಹಾಸ್ಟೆಲ್‌ಗೆ ದಾಖಲಾಗಿದ್ದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಈ ಬಾರಿ ಪ್ರವೇಶ ನಿರಾಕರಿಸಿರುವುದರಿಂದ ಎಷ್ಟೋ ಮಕ್ಕಳು ಮನೆಯಲ್ಲೇ ಕೂರುವಂತಾಗಿದೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು.

ಹಿಂದೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಅವಕಾಶ ಕಲ್ಪಿಸುವಂತೆ ಸೂಚಿಸಲಾಗುವುದು ಎಂದು ಸಿಇಒ ಭರವಸೆ ನೀಡಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ಲಕ್ಷ್ಮೀಕಾಂತ, ‘ನರೇಗಾ ಯೋಜನೆಯ ಸಹಾಯಧನ ಪಡೆದು ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ ಅಡಿಕೆ ಹಾಗೂ ಬಾಳೆ ಬೆಳೆಯಲಾಗುತ್ತಿದೆ. ಯಾಂತ್ರೀಕರಣ ಯೋಜನೆಯಡಿ ₹ 1.52 ಕೋಟಿ ಅನುದಾನ ನಿಗದಿಯಾಗಿದೆ’ ಎಂದು ಮಾಹಿತಿ ನೀಡಿದರು.

‘ಕೃಷಿ ಇಲಾಖೆಯಲ್ಲಿ ಕೆಲವು ರೈತರಿಗೆ ಮಾತ್ರ ಸೌಲಭ್ಯಗಳು ಸಿಗುತ್ತಿವೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ’ ಎಂದು ಸದಸ್ಯೆ ಮಂಜುಳಾ ಟಿ.ವಿ. ರಾಜು ಆರೋಪಿಸಿದರು.

‘ಮಧ್ಯಮ ವರ್ಗದ ರೈತರಿಗೆ ಸೌಲಭ್ಯ ಸಿಗುತ್ತಿಲ್ಲ. ಮಧ್ಯವರ್ತಿಗಳ ಮೂಲಕ ದೊಡ್ಡ ರೈತರ ಮನೆಗಳಿಗೆ ಇಲಾಖೆಯ ಸೌಲಭ್ಯಗಳು ಹೋಗುತ್ತಿವೆ’ ಎಂದು ಸದಸ್ಯ ಲೋಕೇಶ್ವರ ದೂರಿದರು.

ಸದಸ್ಯ ಎಸ್‌.ಕೆ. ಮಂಜುನಾಥ, ‘ಜಗಳೂರಿನಲ್ಲಿ ಮಳೆಯಾಗುತ್ತಿದ್ದು, ಮೆಕ್ಕೆಜೋಳಕ್ಕೆ ಹಾಕಲು ಯೂರಿಯಾ ಸರಿಯಾಗಿ ಸಿಗುತ್ತಿಲ್ಲ. ಡೀಲರ್‌ಗಳು ಯೂರಿಯಾ ಜೊತೆಗೆ ಡಿಎಪಿ ಗೊಬ್ಬರವನ್ನೂ ಖರೀದಿಸಬೇಕು ಎಂದು ಷರತ್ತು ವಿಧಿಸುತ್ತಿದ್ದಾರೆ. ಇದು ರೈತರಿಗೆ ಹೊರೆಯಾಗುತ್ತಿದೆ. ವಾರದೊಳಗೆ ಯೂರಿಯಾ ಸಿಗದಿದ್ದರೆ ಪ್ರಯೋಜನವಿಲ್ಲ’ ಎಂದರು.

ರಸಗೊಬ್ಬರ ಡೀಲರ್‌ಗಳೊಂದಿಗೆ ಸಭೆ ನಡೆಸಿ, ಯೂರಿಯಾ ಜೊತೆ ಡಿಎಪಿ ಖರೀದಿಸುವುದನ್ನು ಖಡ್ಡಾಯಗೊಳಿಸದಂತೆ ನಿರ್ದೇಶನ ನೀಡಲಾಗುವುದು ಎಂದು ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌ ಭರವಸೆ ನೀಡಿದರು.

ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಕೃಷಿಯಲ್ಲಿ ಸಾಧನೆಗೈದ ರೈತರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ಫಲಕಗಳನ್ನು ಹಾಕಬೇಕು ಎಂದು ಸಿಇಒ ಬಸವರಾಜೇಂದ್ರ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಾ ನಾಯ್ಕ ಸ್ವಾಗತಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ನೀರಿನ ಸಮಸ್ಯೆ: ಮುಂಗಾರಿಗೆ ಭತ್ತ ಬೇಡ’
ದಾವಣಗೆರೆ:
‘ಭದ್ರಾ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಾರದಿರುವುದರಿಂದ ಈಗಾಗಲೇ ಅಚ್ಚುಕಟ್ಟು ಪ್ರದೇಶಗಳಲ್ಲಿ ಭತ್ತ ನಾಟಿ ವಿಳಂಬವಾಗಿದೆ. ಇನ್ನು ಮುಂದೆ ನಾಟಿ ಮಾಡಿದರೆ ನವೆಂಬರ್‌ನ ಚಳಿಗಾಲದ ವೇಳೆ ಹೊಡೆ ಒಡೆಯುವುದರಿಂದ ರೈತರಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದ ಅವರು, ‘ಒಣ ಪ್ರದೇಶಗಳಲ್ಲಿ ಶೇ 86ರಷ್ಟು ಬಿತ್ತನೆಯಾಗಿದೆ. ತುಂಗಾ ಅಚ್ಚುಕಟ್ಟು ಪ್ರದೇಶ ಹಾಗೂ ನದಿಯ ದಂಡೆ ಭಾಗದಲ್ಲಿ ಭತ್ತ ನಾಟಿ ಮಾಡಲಾಗಿದೆ. ಭದ್ರಾ ಜಲಾಶಯದ ಮಟ್ಟ ಇನ್ನೂ 150 ಅಡಿ ತಲುಪಿಲ್ಲ. ಹೀಗಾಗಿ ಮಳೆಗಾಲಕ್ಕೆ ನೀರು ಬಿಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ತಕ್ಷಣವೇ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಕರೆದು ಭತ್ತ ನಾಟಿಯ ಬದಲು ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ ನೀಡುವುದು ಒಳಿತು’ ಎಂದರು.

ಸದಸ್ಯ ತೇಜಸ್ವಿ ಪಟೇಲ್‌, ‘ಭತ್ತದಿಂದ ಒಂದಿಷ್ಟು ಪ್ರಮಾಣದ ಹಣ ಕೈಸೇರುತ್ತದೆ ಎಂಬ ವಿಶ್ವಾಸ ಇರುವುದರಿಂದ ಈ ಭಾಗದ ರೈತರು ಭತ್ತ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಆದಾಯ ತರುವಂತಹ ಪರ್ಯಾಯ ಯಾವ ಬೆಳೆ ಬೆಳೆಯಬಹುದು ಎಂಬುದನ್ನು ತಿಳಿಸಿಕೊಡಿ. ಕಾಡಾ, ಕೃಷಿ, ತೋಟಗಾರಿಕೆ ಹಾಗೂ ನೀರಾವರಿ ನಿಗಮದ ಅಧಿಕಾರಿಗಳನ್ನೂ ಸಭೆಗೆ ಕರೆಯಿರಿ’ ಎಂದು ಸಲಹೆ ನೀಡಿದರು.

‘ರಾಗಿ, ದ್ವಿದಳ ಧಾನ್ಯ ಬಿತ್ತುವುದು ಸೂಕ್ತ. ಇಲ್ಲವೇ ಮೇವು ಸಿರಿಧಾನ್ಯವನ್ನೂ ಬೆಳೆಯಬಹುದು. ಮೇವು ಬೆಳೆದರೆ ಒಂದು ಕೆ.ಜಿಗೆ ₹ 3 ದರದಲ್ಲಿ ಹಸಿ ಮೇವು ಖರೀದಿಸಲು ಮುಖ್ಯಮಂತ್ರಿ ಅವಕಾಶ ಕಲ್ಪಿಸಿದ್ದಾರೆ. ಒಂದು ಎಕರೆಗೆ ಆರರಿಂದ ಎಂಟು ಟನ್‌ ಮೇವು ಬೆಳೆಯಬಹುದು’ ಎಂದು ಶರಣಪ್ಪ ಮುದುಗಲ್‌ ಮಾಹಿತಿ ನೀಡಿದರು.

ಆಗಸ್ಟ್‌ 14ರಂದು ರೈತರೊಂದಿಗೆ ಸಭೆ ಏರ್ಪಡಿಸಲು ತೀರ್ಮಾನಿಸಲಾಯಿತು.

ಅಂಕಿ–ಸಂಖ್ಯೆ
327 ಮಿ.ಮೀ ಜಿಲ್ಲೆಯ ವಾಡಿಕೆ ಮಳೆ
212 ಮಿ.ಮೀ ಜಿಲ್ಲೆಯಲ್ಲಿ ಬಿದ್ದ ಮಳೆ
35 ಶೇ ಜಿಲ್ಲೆಯಲ್ಲಿ ಮಳೆ ಕೊರತೆ
1.14 ಲಕ್ಷ ಮೆಟ್ರಿಕ್‌ ಟನ್‌ ಬೇಡಿಕೆ ಇರುವ ರಸಗೊಬ್ಬರ
96 ಸಾವಿರ ಮೆಟ್ರಿಕ್‌ ಟನ್‌ ಪೂರೈಕೆಯಾಗಿರುವ ರಸಗೊಬ್ಬರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT