ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಮಾಡಿ ಪ್ರತಿಭಟಿಸಿದ ವಿದ್ಯಾರ್ಥಿಗಳು

ದಾವಣಗೆರೆಯ ಜೆಜೆಎಂಎಂಸಿ ವಿದ್ಯಾರ್ಥಿಗಳಿಗೆ 16 ತಿಂಗಳಿಂದ ಬಾರದ ಶಿಷ್ಯ ವೇತನ
Last Updated 1 ಜುಲೈ 2020, 10:46 IST
ಅಕ್ಷರ ಗಾತ್ರ

ದಾವಣಗೆರೆ: ಹದಿನಾರು ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನ ಪಡೆಯಲು ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಆರಂಭಿಸಿರುವ ಪ್ರತಿಭಟನೆ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಜಯದೇವ ವೃತ್ತದಲ್ಲೇ ರಕ್ತದಾನ ಮಾಡುವ ಮೂಲಕ ವೈದ್ಯ ವಿದ್ಯಾರ್ಥಿಗಳು ವೈದ್ಯರ ದಿನವನ್ನೂ ಆಚರಿಸಿ ಗಮನ ಸೆಳೆದರು.

ವಿದ್ಯಾರ್ಥಿಗಳ ಹೋರಾಟದಿಂದ ಮುಜುಗರಕ್ಕೆ ಒಳಗಾದ ಜಿಲ್ಲಾಡಳಿತವು ಮಂಗಳವಾರ ರಾತ್ರಿ 8 ಗಂಟೆಯೊಳಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರಿಂದ ವಿದ್ಯಾರ್ಥಿಗಳು ಬಂಧನದ ಭೀತಿ ಎದುರಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಜಯದೇವ ವೃತ್ತಕ್ಕೆ ವಿದ್ಯಾರ್ಥಿಗಳು ಬಂದು ಪ್ರತಿಭಟನೆ ಆರಂಭಿಸಿದಾಗ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡ ಪೊಲೀಸರು ಪ್ರತಿಭಟನೆಯನ್ನು ಕೈಬಿಡುವಂತೆ ಎಚ್ಚರಿಕೆ ನೀಡಿದರು. ಆದರೆ, ಇದಕ್ಕೆ ಜಗ್ಗದ ವಿದ್ಯಾರ್ಥಿಗಳು, ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದ ನೇತ್ರ ತಜ್ಞ ಡಾ.ವಸುದೇಂದ್ರ, ‘ಶಿಷ್ಯ ವೇತನ ನೀಡುವಂತೆ ನೀವು ನ್ಯಾಯಯುತವಾಗಿಯೇ ಕೇಳುತ್ತಿದ್ದೀರಿ. ವೈದ್ಯರ ದಿನಾಚರಣೆ ದಿನ ಕೋವಿಡ್‌ ವಾರಿಯರ್‌ಗಳಾದ ನೀವು ರೋಗಿಗಳೊಂದಿಗೆ ದಿನ ಕಳೆಯಬೇಕಾಗಿತ್ತು. ಆದರೆ, ಬೀದಿಯಲ್ಲಿ ನಿಂತು ನೀವು ಹೋರಾಟ ಮಾಡುವಂತಹ ಸ್ಥಿತಿ ನಿರ್ಮಿಸಿದ ಸರ್ಕಾರಕ್ಕೆ ನಾಚಿಕೆಯಾಗಬೇಕು. ನಿಮ್ಮ ಹೋರಾಟಕ್ಕೆ ಎಲ್ಲಾ ವೈದ್ಯರು ನೈತಿಕ ಬೆಂಬಲ ಸೂಚಿಸುತ್ತಾರೆ’ ಎಂದು ಧೈರ್ಯ ತುಂಬಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ವಸುದೇಂದ್ರ, ‘ವೈದ್ಯ ವಿದ್ಯಾರ್ಥಿಗಳು ಕೆಲಸ ನಿಲ್ಲಿಸಿ ಹೋರಾಟ ಮಾಡುತ್ತಿಲ್ಲ. ವೈದ್ಯಕೀಯ ಸೇವೆ ವ್ಯತ್ಯಯ ಆಗದಂತೆ ನೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಶಾಂತಿಯುತವಾಗಿ ಹೋರಾಟ ನಡೆಸುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೀಗಿರುವಾಗ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಬೆದರಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ವೈದ್ಯ ವಿದ್ಯಾರ್ಥಿ ಡಾ. ಹರೀಶ್‌, ‘16 ತಿಂಗಳಿಂದ ಶಿಷ್ಯ ವೇತನವನ್ನು ಬಿಡುಗಡೆ ಮಾಡದೆ ಸರ್ಕಾರ ಈಗಾಗಲೇ ನಮ್ಮ ರಕ್ತವನ್ನು ಹೀರಿದೆ. ಇರುವ ಅಲ್ಪ ಸ್ವಲ್ಪ ರಕ್ತವನ್ನು ದಾನ ಮಾಡೋಣ ಎಂದುಕೊಂಡು ಪ್ರತಿಭಟನಾ ಸ್ಥಳದಲ್ಲಿ ರಕ್ತದಾನ ಶಿಬಿರ ಆಯೋಜಿಸಲು ಮುಂದಾದರೆ ಪೊಲೀಸರು ಅದಕ್ಕೂ ಅನುಮತಿ ನೀಡದೇ ದಬ್ಬಾಳಿಕೆ ನಡೆಸುತ್ತಿದ್ದಾರೆ. ಹೀಗಿದ್ದರೂ 30ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ರಕ್ತದಾನ ಮಾಡಿ ಸರ್ಕಾರದ ಗಮನ ಸೆಳೆಯಲಿದ್ದಾರೆ’ ಎಂದು ತಿಳಿಸಿದರು.

ಜಯದೇವ ವೃತ್ತದ ಹಿಂಭಾಗದಲ್ಲಿ ಬಾಪೂಜಿ ಬ್ಲಡ್‌ ಬ್ಯಾಂಕ್‌ನ ಆಂಬುಲೆನ್ಸ್‌ನಲ್ಲೇ ಹಲವು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ವೈದ್ಯರ ದಿನಾಚರಣೆ ದಿನದಂದು ರಕ್ತದಾನ ಮಾಡುವ ಮೂಲಕ ರಕ್ತ ಅವಶ್ಯವಿರುವ ರೋಗಿಗಳಿಗೆ ನೆರವಾದರು.

‘ಕೇಳಿದರೆ ಕಾಸು, ಹೊಡಿತಾರೆ ಕ್ಲ್ಯಾಪ್ಸು’, ‘ಮೇಲೆ ಬಿಳಿ ಬಟ್ಟೆ, ಒಳಗೆ ಖಾಲಿ ಹೊಟ್ಟೆ’, ‘ಒನ್ಲಿ ಪೇನ್‌, ನೋ ಗೇನ್‌’, ‘ವೈದ್ಯೋ ನಾರಾಯಣ ಹರಿ, ವೈದ್ಯರ ಜೇಬಿಗೆ ಕತ್ತರಿ’... ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾರ್ಥಿಗಳು ಸಾರ್ವಜನಿಕರ ಗಮನ ಸೆಳೆದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ವೈದ್ಯ ವಿದ್ಯಾರ್ಥಿಗಳು,ಶಿಷ್ಯ ವೇತನ ಬಾರದೇ ಇರುವುದರಿಂದ ಜೀವನ ನಿರ್ವಹಣೆ ಮಾಡಲು ತೊಂದರೆಯಾಗಿರುವುದರಿಂದ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT