ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಜತೆಗೆ ಸ್ಫೋಟದ ಹೊಡೆತ

ಒಂದೇ ವರ್ಷದಲ್ಲಿ ಅರ್ಧಕ್ಕಿಂತ ಕಡಿಮೆಯಾಗಿರುವ ಕಲ್ಲು ಗಣಿಗಾರಿಕೆಯ ಪ್ರಮಾಣ
Last Updated 15 ಫೆಬ್ರುವರಿ 2021, 4:27 IST
ಅಕ್ಷರ ಗಾತ್ರ

ದಾವಣಗೆರೆ: ಶಿವಮೊಗ್ಗದ ಹುಣಸೋಡಿನಲ್ಲಿ ಸ್ಫೋಟ ನಡೆದ ಬಳಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಲ್ಲುಗಣಿಗಾರಿಕೆಗೆ ಈ ಕಟ್ಟುನಿಟ್ಟಿನ ನಿಯಮ ಬರೋ ಮೊದಲೇ ಕೊರೊನಾ ಹೊಡೆತ ನೀಡಿತ್ತು. ಸ್ಫೋಟ ಗಾಯದ ಮೇಲೆ ಬರೆ ಎಳೆದಿದೆ. ಅದಕ್ಕೆ 2019–20ನೇ ಸಾಲಿನಲ್ಲಿ ನಡೆದ ಕಲ್ಲು ಗಣಿಗಾರಿಕೆಯ ಅರ್ಧದಷ್ಟು ಕೂಡ 2020–21ರಲ್ಲಿ ನಡೆದಿರುವುದೇ ಸಾಕ್ಷಿ.

2019–20ರಲ್ಲಿ 6.82 ಲಕ್ಷ ಟನ್‌ ಕಲ್ಲು ಗಣಿಗಾರಿಕೆ ನಡೆದಿದ್ದರೆ, ಈ ಬಾರಿ 3.36 ಲಕ್ಷ ಟನ್ ಅಷ್ಟೇ ಆಗಿದೆ. ಕೊರೊನಾ ಕಾರಣದಿಂದ ಕಳೆದ ವರ್ಷ ಮಾರ್ಚ್‌, ಏಪ್ರಿಲ್‌, ಮೇಯಲ್ಲಿ ಕ್ವಾರಿಗಳು ಮುಚ್ಚಿದ್ದವು. ಬಳಿಕ ತೆರೆದವಾದರೂ ಹಿಂದಿನ ಪ್ರಮಾಣದಲ್ಲಿ ನಡೆದಿಲ್ಲ. ಕಲ್ಲು ಒಡೆಯುವವರು, ಲೋಡರ್‌ಗಳು, ಲಾರಿ ಚಾಲಕರು ಹೀಗೆ ಜಿಲ್ಲೆಯಲ್ಲಿ 2000ಕ್ಕೂ ಅಧಿಕ ಕಾರ್ಮಿಕರು ಕ್ವಾರಿ ಮತ್ತು ಕ್ರಷರ್‌ಗಳನ್ನು ನಂಬಿ ಬದುಕುತ್ತಿದ್ದಾರೆ. ಇದೀಗ ಅವರಿಗೂ ತೊಂದರೆ ಉಂಟಾಗಿದೆ.

ಜಿಲ್ಲೆಯಲ್ಲಿ ರಸ್ತೆ, ಕಟ್ಟಡ ಸಹಿತ ಯಾವುದೇ ಕಾಮಗಾರಿಗಳಿಗೆ ಕೊರತೆಯಾಗಿಲ್ಲ. ಈಗಾಗಲೇ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಎರಡು ಬಾರಿ ಕ್ವಾರಿ ಮತ್ತು ಕ್ರಷರ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ತಯಾರಿಸಲಾಗಿದೆ. ಕೆಲಸ ಮಾಡದೇ ಇರುವ ಐಡಲ್ ಕ್ವಾರಿಗಳಿಗೆ 30 ದಿನಗಳ ನೋಟಿಸ್ ನೋಡಿ ಅವಕಾಶ ನೀಡಲಾಗುವುದು. ಆದರೂ ಕ್ವಾರಿ ಕಾರ್ಯಾರಂಭಿಸದಿದ್ದರೆ ಕಲ್ಲುಗಣಿ ಗುತ್ತಿಗೆಯನ್ನು ರದ್ದುಪಡಿಸಲಾಗುವುದು. ಕಲ್ಲುಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ನಮ್ಮ ಭೂವಿಜ್ಞಾನಿಗಳು ಮತ್ತು ಸಿಬ್ಬಂದಿ ಪ್ರತಿದಿನ ಕ್ವಾರಿಗಳಿಗೆ ತೆರಳಿ ಕಲ್ಲುಗಣಿ ಸುರಕ್ಷತೆ, ಗಡಿ ಪ್ರಾಂತ್ಯ, ತಡೆಗೋಡೆ ನಿರ್ಮಾಣ ಸೇರಿ ಇನ್ನಿತರೆ ನಿಯಮಾವಳಿಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಹೆಚ್ಚು ಜಲ್ಲಿ, ಕಲ್ಲು ಅಲ್ಲಿಗೆ ಪೂರೈಕೆಯಾಗುತ್ತಿದೆ. ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಹೋಗುತ್ತಿದೆ. ಶೇ 30ರಷ್ಟು ಮಾತ್ರ ಕಟ್ಟಡ ಕಾಮಗಾರಿಗಳಿಗೆ ಹೋಗುತ್ತಿದೆ. ಹಾವೇರಿ, ಚಿತ್ರದುರ್ಗ, ಹರಪನಹಳ್ಳಿ ಸಹಿತ ಸುತ್ತಮುತ್ತಲಿಂದಲೂ ಹಿಂದಿನಂತೆ ಜಲ್ಲಿ, ಕಲ್ಲುಗಳು ಬರುತ್ತಿವೆ ಎಂದು ಅವರು ವಿವರಿಸಿದರು.

ಹಲವೆಡೆ ಸ್ಫೋಟಕ ವಶ: ದಾವಣಗೆರೆ ನಗರದಲ್ಲಿಯೇ ದುಗ್ಗಮ್ಮನ ಜಾತ್ರೆ ನಂತರ ದೇವಸ್ಥಾನದ 300 ಮೀಟರ್ ಅಂತರದಲ್ಲಿ ಹಂಚಿನ ಗೋದಾಮೊಂದರಲ್ಲಿ ದೊಡ್ಡ ಪ್ರಮಾಣದ ಸ್ಫೋಟಕ ಸಂಗ್ರಹಿಸಿರುವುದನ್ನು ಪತ್ತೆಹಚ್ಚಿ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ಆಜಾದ್ ನಗರದ ಕಟ್ಟಡದ ಬೇಸ್‍ಮೆಂಟ್‍ನಲ್ಲಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕವನ್ನು ಸೀಜ್ ಮಾಡಿ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಕಾಡಜ್ಜಿ ಬಳಿ ಕೂಡ ಸ್ಫೋಟಕ ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ವಿವರ ನೀಡಿದ್ದಾರೆ.

‘ಒಂದು ವಾರದೊಳಗೆ ವರದಿ ನೀಡಲು ಗಡುವು: ಕ್ವಾರಿಗಳಿರುವ ವ್ಯಾಪ್ತಿಯ ತಹಶೀಲ್ದಾರ್, ಪೊಲೀಸ್ ಅಧಿಕಾರಿ, ಆರ್‌ಐ ಮತ್ತು ವಿಎ ಸೇರಿ ತಂಡ ರಚಿಸಿ ಗಣಿ ಇಲಾಖೆಯ ವರದಿಯಲ್ಲಿರುವಂತೆ ಕ್ವಾರಿಗಳು ಕೆಲಸ ನಿರ್ವಹಿಸುತ್ತಿವೆಯೇ? ಕೆಲಸ ನಿಲ್ಲಿಸಿರುವ(ಐಡಲ್) ಕ್ವಾರಿಗಳ ಸ್ಥಿತಿಗತಿ ಏನು ಎಂಬ ಬಗ್ಗೆ ಒಂದು ವಾರದೊಳಗೆ ವರದಿ ಪಡೆಯುತ್ತೇನೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

***

ಸ್ಫೋಟಕ್ಕೆ ಬಿತ್ತು ನಿಯಂತ್ರಣ

ಡಿ.ಶ್ರೀನಿವಾಸ್

ಜಗಳೂರು: ತಾಲ್ಲೂಕಿನಲ್ಲಿ 2 ಕಲ್ಲು ಕ್ರಷರ್ ಕ್ವಾರಿಗಳಿವೆ. ತಾಲ್ಲೂಕಿನ ಪಲ್ಲಾಗಟ್ಟೆ ಹಾಗೂ ದೊಣೆಹಳ್ಳಿ ಗ್ರಾಮದ ಸಮೀಪ ಕ್ವಾರಿಗಳಿವೆ. ಶಿವಮೊಗ್ಗದ ಹುಣಸೋಡು ಘಟನೆಯ ನಂತರ ಎರಡೂ ಕ್ವಾರಿಗಳಲ್ಲಿ ಜಲ್ಲಿಕಲ್ಲು ಪೂರೈಕೆ ಕಡಿಮೆಯಾಗಿದೆ. ತಾಯಿಟೊನೆ ಗ್ರಾಮದ ಸಮೀಪ ಪ್ರಮಾಣದ ಸ್ಫೋಟಕ ದಾಸ್ತಾನು ಗೋದಾಮಿನ ಮೇಲೆ ಜಿಲ್ಲಾಡಳಿತ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ. ಅಕ್ಕಪಕ್ಕದ ಕ್ವಾರಿಗಳಿಗೆ ಇಲ್ಲಿಂದ ಪೂರೈಕೆಯಾಗುತ್ತಿದ್ದ ಸ್ಫೋಟಕಗಳಿಗೆ ಕಡಿವಾಣ ಬಿದ್ದಿದೆ.

ತಾಲ್ಲೂಕಿನಲ್ಲಿ ಲೋಕೋಪಯೋಗಿ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳು ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾದ ಕಲ್ಲು ಮತ್ತು ಜಲ್ಲಿ ಹಿಂದಿನಿಂದಲೂ ಚಿತ್ರದುರ್ಗ ಹಾಗೂ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಿಂದ ಬಹುತೇಕ ಪೂರೈಕೆಯಾಗುತ್ತಿದೆ. ತಾಲ್ಲೂಕಿನಲ್ಲಿರುವ ಎರಡೂ ಕ್ರಷರ್, ಕ್ವಾರಿಗಳಲ್ಲಿ ಜಿಲ್ಲಾಡಳಿತದ ಸೂಚನೆಯ ಮೇರೆಗೆ ತಾತ್ಕಾಲಿಕವಾಗಿ ಜಲ್ಲಿಕಲ್ಲು ಪೂರೈಕೆಯನ್ನು ನಿಯಂತ್ರಿಸಲಾಗಿದೆ.

***

ಮಾಲೀಕರು ಹೀಗಂತಾರೆ

ಕೊರೊನಾದಿಂದಾಗಿ ಬೇಡಿಕೆ ಇರಲಿಲ್ಲ. ಆಮೇಲೆ ಮಳೆಗಾಲ ಆರಂಭವಾಯಿತು. ಹೀಗಾಗಿ ಏಳೆಂಟು ತಿಂಗಳು ಚಟುವಟಿಕೆ ಇಲ್ಲದಂತಾಯಿತು. ಸಾಲ ಕಟ್ಟಲೂ ತೊಂದರೆ ಆಯಿತು. ಕಾರ್ಮಿಕರು ಕೆಲಸವಿಲ್ಲದೇ ಪರದಾಡಿದರು. ಮಾರುಕಟ್ಟೆ ಆರಂಭಗೊಳ್ಳುವ ಹೊತ್ತಿಗೆ ಸಾಮಗ್ರಿ ಸಿಗುವುದು, ಲೈಸನ್ಸ್‌ ಸುಲಭದಲ್ಲಿ ಸಿಗುತ್ತಿಲ್ಲ. ನಾವೆಲ್ಲ ನಿಯಮಾನುಸಾರವಾಗಿ ನಡೆಸುತ್ತಿದ್ದೆವು. ರಾಯಲ್ಟಿ ಕೊಟ್ಟು ಒಯ್ಯಲು ಯಾರೂ ಬರುತ್ತಿರಲಿಲ್ಲ. ಈಗ ಬರುತ್ತಿದ್ದಾರೆ. ಸ್ಥಳೀಯ ಬೇಡಿಕೆಯಷ್ಟೇ ಕ್ರಷರ್‌ನಲ್ಲಿ ಉತ್ಪಾದನೆ ಮಾಡುತ್ತಿದ್ದೇವೆ. ಕ್ರಷರ್‌ ಅಂದರೇನೆ ನೋವು ಇರುವಂಥ ಕ್ಷೇತ್ರ. ಅಭಿವೃದ್ಧಿ ಅಂದರೆ ಮೂಲ ಅವಶ್ಯವೇ ಕಲ್ಲು, ಜಲ್ಲಿ.

ಧನಂಜಯ ಪಾಟೀಲ್, ರೇವಣಸಿದ್ದೇಶ್ವರ ಸ್ಟೋನ್‌ ಕ್ರಷರ್‌, ದಾವಣಗೆರೆ

***

ನಾವು ಸ್ಫೋಟಕಗಳ ಬಳಕೆಯ ಪರವಾನಗಿ ಹೊಂದಿದ್ದೇವೆ. ಸಣ್ಣ ಪ್ರಮಾಣದಲ್ಲಿ ಜಲ್ಲಿಕಲ್ಲು ಪೂರೈಸುತ್ತಿದ್ದೇವೆ. ಈಗ ಬಹುತೇಕ ಕಡಿಮೆ ಮಾಡಲಾಗಿದೆ.

ಸುರೇಂದ್ರನ್, ನವಭಾರತ ಬಿಲ್ಡಿಂಗ್ ಕಂಪನಿಯ ಜಂಟಿ ವ್ಯವಸ್ಥಾಪಕ

***

ಕಲ್ಲು ಕ್ವಾರಿಯಲ್ಲಿ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದೆವು. ಇಲ್ಲಿ ಸಿಗುವ ಹಣದಿಂದ ಕುಟುಂಬದ ನಿರ್ವಹಣೆ ಮಾಡುತ್ತಿದ್ದೆವು. ಈಗ ಏಕಾಏಕಿ ಕ್ವಾರಿ ಹಾಗೂ ಕ್ರಷರ್‌ಗಳನ್ನು ಬಂದ್ ಮಾಡಿರುವುದರಿಂದ ಕೆಲಸ ಇಲ್ಲದೇ ತೊಂದರೆಯಾಗಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕಠಿಣ ಪರಿಸ್ಥಿತಿ ಎದುರಿಸಿದ್ದೆವು. ಅದು ಮಾಸುವ ಮುನ್ನವೇ ಮತ್ತೆ ಈ ರೀತಿ ಗಣಿಗಾರಿಕೆ ಸ್ಥಗಿತಗೊಂಡಿರುವುದು ಬೆಂಕಿಗೆ ಬಿದ್ದಂತಾಗಿದೆ.

ಗೋವಿಂದರಾಜು, ದೊಡ್ಡಬ್ಬಿಗೆರೆ ಗ್ರಾಮದ ಕ್ವಾರಿ ಕಾರ್ಮಿಕ

***

ಹುಣಸೋಡು ಸ್ಫೋಟವಾದ ಬಳಿಕ ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಮಾಲೀಕರು ಹಾಗೂ ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ನೂರಾರು ಕಾರ್ಮಿಕರಿಗೆ ತೊಂದರೆ ಉಂಟಾಗಿದೆ. ಸರ್ಕಾರದಿಂದ ಸ್ಪಷ್ಟವಾದ ನಿರ್ದೇಶನ ಬರುವುದನ್ನು ಕಾಯುತ್ತಿದ್ದೇವೆ.

ಶಶಿಕುಮಾರ್, ದೊಡ್ಡಬ್ಬಿಗೆರೆ ಗ್ರಾಮದ ಕಲ್ಲು ಕ್ವಾರಿಯ ಮಾಲೀಕ

***

23 ಕಲ್ಲು ಗಣಿಗಾರಿಕೆಗೆ ನೋಟಿಸ್‌

ವಿಶ್ವನಾಥ ಡಿ.

ಹರಪನಹಳ್ಳಿ: ಬಳ್ಳಾರಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಪರಿಣಾಮ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿದ್ದ ಘಟಕಗಳು ಸ್ಥಗಿತಗೊಂಡಿದ್ದು, ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮಗಳನ್ನು ಪತ್ತೆಹಚ್ಚಿ ತಡೆಗಟ್ಟಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಪರವಾನಗಿ ಪಡೆದು ನಡೆಸುತ್ತಿರುವ ಎಲ್ಲ ಘಟಕಗಳಿಗೂ ಗಂಭೀರವಾದ 13 ಅಂಶಗಳ ಸಮಜಾಯಿಷಿ ನೋಟಿಸ್ ಜಾರಿ ಮಾಡಿದ್ದಾರೆ.

ಚಟ್ನಿಹಳ್ಳಿ, ಉಚ್ಚಂಗಿದುರ್ಗ, ಹಿರೇಮೇಗಳಗೆರೆ, ಸತ್ತೂರು, ಚೌಡಾಪುರ, ಗ್ರಾಮಗಳ ಸುತ್ತ ಅಂದಾಜು ಒಟ್ಟು 40 ಇವೆ. ಸರಿಯಾದ ದಾಖಲಾತಿ, ವ್ಯವಸ್ಥೆಯಿಲ್ಲದ 25 ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಕ್ವಾರಿ ಇಲ್ಲದೇ ಇರುವ ಕಾರಣಕ್ಕೆ ಕೆಲ ಕ್ರಷರ್‌ ಘಟಕಗಳನ್ನು ನಿಲ್ಲಿಸಲಾಗಿದೆ. ಹರಪನಹಳ್ಳಿ, ಅನಂತನಹಳ್ಳಿ, ಕಂಭಟ್ರಹಳ್ಳಿ, ಮಾದಾಪುರ, ಮೆಳ್ಳೆಕಟ್ಟೆ, ಮಾಚಿಹಳ್ಳಿ ಸರ್ವೆ ನಂಬರ್‍ ವ್ಯಾಪ್ತಿಯಲ್ಲಿರುವ ಘಟಕಗಳಲ್ಲು ಉತ್ಪನ್ನ ಕಡಿಮೆಯಾಗಿದೆ.

ಅರಸೀಕೆರೆಯ ತಿಮ್ಲಾಪುರ ಗ್ರಾಮದ ಬಳಿಯ 3 ಎಕರೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ ಘಟಕಕ್ಕೂ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ‘ತಾಲ್ಲೂಕಿನ 23 ಘಟಕಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಪ್ರತಿಕ್ರಿಯೆ ಬಂದ ಮೇಲೆ ವರದಿ ಸಲ್ಲಿಸಲಾಗುವುದು’ ಎಂದು ತಹಶೀಲ್ದಾರ್ ಎಲ್.ಎಂ.ನಂದೀಶ್ ತಿಳಿಸಿದರು.

ಹುಣಸೋಡು ಘಟನೆ ಬಳಿಕ ಎಲ್ಲ ಕಲ್ಲು ಗಣಿಗಾರಿಕೆ ನಿಲ್ಲಿಸಲಾಗಿದೆ. ಸಮಗ್ರ ತನಿಖೆ ಆಗುವ ತನಕ ಪರವಾನಗಿ ಪಡೆದವರಿಗೆ ಮಾತ್ರ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕು ಎಂದು ಮಾಲೀಕರೊಬ್ಬರು ತಿಳಿಸಿದರು.

‘ನಮ್ಮ ಕ್ರಷರ್‌ ಘಟಕ ಪರವಾನಗಿ ಪಡೆದಿದೆ. ಯಾವುದೇ ನಿಯಮ ಉಲ್ಲಂಘಿಸಿಲ್ಲ. ನಮ್ಮ ಘಟಕದಲ್ಲಿ ಸ್ಫೋಟಕ ಸಿಕ್ಕಿಲ್ಲ. ರಸ್ತೆಗಿಂತ ದೂರವಿದೆ. ಆದರೂ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ನಾವು ಉತ್ತರಿಸುತ್ತೇವೆ. ಅಧಿಕಾರಿಗಳೇ ಸ್ಥಳ ಪರಿಶೀಲನೆ ನಡೆಸಬೇಕು’ ಎಂದು ಕ್ರಷರ್ ಘಟಕದ ಮಾಲೀಕರೊಬ್ಬರು ಪ್ರತಿಕ್ರಿಯಿಸಿದರು.

ವಟ್ಲಹಳ್ಳಿ ಮೈನಿಂಗ್: ತಾಲ್ಲೂಕಿನ ವಟ್ಲಹಳ್ಳಿ ಗ್ರಾಮದ ಗುಡ್ಡದಲ್ಲಿ ಮ್ಯಾಂಗನೀಸ್ ಕಲ್ಲು ಅಗೆಯುತ್ತಿದ್ದು, ಗುಡ್ಡವನ್ನೇ ಸವೆಸುತ್ತಿದ್ದಾರೆ. ಗ್ರಾಮದ ಸುತ್ತಮುತ್ತ ದೂಳು ಆವರಿಸುತ್ತಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ನಿಯಮ ಮೀರಿ ಗಣಿಗಾರಿಕೆ ಮಾಡಲಾಗುತ್ತಿದೆ. ಗುಡ್ಡದ ಪರಿಸರ ನಾಶಪಡಿಸಬಾರದು. ವನ್ಯಜೀವಿಗಳಿಗೆ, ಸುತ್ತಮುತ್ತಲ ಗ್ರಾಮಗಳಿಗೆ ತೊಂದರೆ ಆಗದಂತೆ ತಾಲ್ಲೂಕು ಆಡಳಿತ ಜಾಗೃತಿ ವಹಿಸಬೇಕು. ಇಲ್ಲದಿದ್ದರೆ ಕಪ್ಪತ್ತಗುಡ್ಡದ ಮಾದರಿ ಹೋರಾಟ ಮಾಡಬೇಕಾಗುತ್ತದೆ ಎಂದು ಕಾರ್ಮಿಕ ಮುಖಂಡ ಗುಡಿಹಳ್ಳಿ ಹಾಲೇಶ್ ತಿಳಿಸಿದರು.

***

ಕಲ್ಲು ಕ್ವಾರಿ, ಕ್ರಷರ್ ಗಣಿಗಾರಿಕೆ ಬಂದ್

ಎಚ್.ವಿ. ನಟರಾಜ್

ಚನ್ನಗಿರಿ: ಹುಣಸೋಡು ಸ್ಫೋಟ ಪ್ರಕರಣದ ನಂತರ ರಾಜ್ಯದ ಇತರೆಡೆ ನಡೆದಂತೆ ಚನ್ನಗಿರಿ ತಾಲ್ಲೂಕಿನಲ್ಲಿಯೂ ಕ್ವಾರಿ, ಕ್ರಷರ್‌ ಬಂದ್‌ ಆಗಿದೆ.

ಸಂತೇಬೆನ್ನೂರು ಹಾಗೂ ಉಬ್ರಾಣಿ ಹೋಬಳಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ವಾರಿಗಳಲ್ಲಿ ನಡೆಯುತ್ತಿದೆ. ಉಳಿದಂತೆ ಉಬ್ರಾಣಿ ಹೋಬಳಿಯ ಮಾವಿನಹೊಳೆ ಹಾಗೂ ಮಲ್ಲೇಶ್ವರ ಗ್ರಾಮಗಳಲ್ಲಿ ನಡೆಯುತ್ತಿದ್ದವು.

ಎರಡು ಹೋಬಳಿಗಳು ಸೇರಿ 11 ಕಲ್ಲು ಕ್ವಾರಿಗಳು ಹಾಗೂ ಕ್ರಷರ್‌ಗಳು ಇವೆ. ಈಗ ಎಲ್ಲವೂ ಬಂದ್‌ ಆಗಿವೆ.ಏಕಾಏಕಿ ಕಲ್ಲು ಗಣಿಗಾರಿಕೆ ಕಾರ್ಯ ಸ್ಥಗಿತಗೊಂಡಿರುವುದರಿಂದ ರಸ್ತೆ, ಚರಂಡಿ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳು ಲಭ್ಯ ಇಲ್ಲ. ಇದರಿಂದ ಕಲ್ಲು ಗಣಿಗಾರಿಕೆಯ ಕಾರ್ಮಿಕರು ಮತ್ತು ನಿರ್ಮಾಣ ಕಾಮಗಾರಿಗಳ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನುಭವಿಸಿದ ತೊಂದರೆ ಮತ್ತೆ ಈಗ ಮರುಕಳಿಸಿದೆ ಎಂಬುದು ಕಾರ್ಮಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT