ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳೆಂದರೆ ಮೂಗುಮುರಿವ ಕಾಲವಲ್ಲ: ಕೆ.ಎಚ್‌. ವಿಜಯ ಕುಮಾರ್

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿದ ಕೆ.ಎಚ್‌. ವಿಜಯ ಕುಮಾರ್
Last Updated 25 ಜನವರಿ 2021, 2:20 IST
ಅಕ್ಷರ ಗಾತ್ರ

ದಾವಣಗೆರೆ: ಒಂದು ಕಾಲದಲ್ಲಿ ಮೊದಲ ಮಗು ಹೆಣ್ಣಾದರೆ ಮೂಗುಮುರಿಯುತ್ತಿದ್ದರು. ಎರಡನೇಯದ್ದೂ ಹೆಣ್ಣಾದರೆ ಸೊಸೆಗೆ ಹಿಂಸೆ ಆರಂಭವಾಗುತ್ತಿತ್ತು. ಮೂರನೇಯದ್ದೂ ಹೆಣ್ಣಾದರೆ ವಂಶೋದ್ಧಾರಕ ಬೇಕು ಎಂದು ಎರಡನೇ ಮದುವೆ ನಡೆಯುತ್ತಿತ್ತು. ಈಗ ಕಾಲ ಬದಲಾಗಿದೆ. ಹೆಣ್ಣಿಗೆ ಪ್ರಾಮುಖ್ಯ ಸ್ಥಾನ ಸಿಕ್ಕಿದೆ. ಅದಕ್ಕೆ ಸರ್ಕಾರದ ಅನೇಕ ಯೋಜನೆಗಳು ಮತ್ತು ಅರಿವು ಕಾರ್ಯಕ್ರಮಗಳು ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯ ಕುಮಾರ್ ತಿಳಿಸಿದರು.

ಇಲ್ಲಿನ ಶ್ರೀರಾಮನಗರದಲ್ಲಿರುವ ಬಾಲಕಿಯರ ಬಾಲ ಮಂದಿರದಲ್ಲಿ ಭಾನುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಶಕ್ತಿ ಕೇಂದ್ರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರಿಗೂ ಹೆಣ್ಣು ಮಕ್ಕಳ ಮೇಲೆ ಒಲವು ಹೆಚ್ಚಾಗಿದೆ. ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇದೆ. ಬ್ರೂಣ ಲಿಂಗಪತ್ತೆ ನಿಷೇಧ ಮಾಡಿರುವುದರಿಂದ ಪ್ರಸವಪೂರ್ವದಲ್ಲೇ ಹೆಣ್ಣುಬ್ರೂಣವನ್ನು ಕೊಲ್ಲುವುದು ತಪ್ಪಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದರಲ್ಲೂ ಆಸಕ್ತಿ ಪಾಲಕರು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ 15 ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಗಂಡು ಮಕ್ಕಳಿಗಿಂತ ಅಧಿಕವಿದೆ. ಅದೇ ರೀತಿ 15 ಜಿಲ್ಲೆಗಳಲ್ಲಿ ಭಾರಿ ಕಡಿಮೆ ಇದೆ. ಕೆಲವು ಜಿಲ್ಲೆಗಳಲ್ಲಿ 1000 ಗಂಡು ಮಕ್ಕಳಿಗೆ 760, 850 ಎಲ್ಲ ಇದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಹಿಂದೆ ಇದ್ದ ಪರಿಸ್ಥಿತಿಗಿಂತ ಈಗ ಸುಧಾರಣೆಯಾಗಿದೆ. ಈಗ 1000 ಗಂಡುಮಕ್ಕಳಿಗೆ 948 ಹೆಣ್ಣುಮಕ್ಕಳಿದ್ದಾರೆ. ಅದು ಸಮ ಪ್ರಮಾಣಕ್ಕೆ ತಲುಪಬೇಕಿದೆ ಎಂದು ವಿವರ ನೀಡಿದರು.

ಮಕ್ಕಳ ರಕ್ಷಣ ಘಟಕದ ಅಧಿಕಾರಿ ಕೆ.ಸಿ. ಬಸವರಾಜಯ್ಯ ಅಧ್ಯಕ್ಷತೆ ವಹಿಸಿ, ‘ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಅವರಿಗೆ ರಕ್ಷಣೆ ಇಲ್ಲ ಎಂಬ ಆತಂಕ ಮೂಡುತ್ತದೆ. ಹೀಗಾಗಿ, ನಾವುಗಳು ಮನೆಯಿಂದಲೇ ಹೆಣ್ಣು ಮಕ್ಕಳನ್ನು ಗೌರಿಸುವ ಮತ್ತು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವಂಥ ವಾತಾವರಣ ನಿರ್ಮಾಣ ಮಾಡುವ ಕೆಲಸ ಆಗಬೇಕು. ಸರ್ಕಾರದ ಕಾಯ್ದೆಗಳಿಂದ ಮತ್ತು ಜಾಗೃತಿಗಳಿಂದ ಬಹಳ ಬದಲಾವಣೆಯಾಗಿದೆ. ಇನ್ನಷ್ಟು ಆಗಬೇಕಿದೆ’ ಎಂದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಂಜುನಾಥ, ‘ಹೆಣ್ಣು ಮತ್ತು ಗಂಡಿನ ಪ್ರಮಾಣ ಸಮವಾಗಿದ್ದರೆ ಶೋಷಣೆ, ಹಿಂಸೆ ಕಡಿಮೆಯಾಗುತ್ತದೆ. ಇಂದಿಗೂ ಹೆಣ್ಣು ಮಕ್ಕಳ ಸಂಖ್ಯೆ ಭಾರಿ ಕೊರತೆ ಇರುವ ಪಂಜಾಬ್‌, ಗುಜರಾತ್‌ ಮತ್ತಿತರ ರಾಜ್ಯಗಳಿಗೆ ಬಿಜಾಪುರ, ಬಾಗಲಕೋಟೆ ಮುಂತಾದ ನಮ್ಮ ರಾಜ್ಯದ ಜಿಲ್ಲೆಗಳಿಂದ ಹೆಣ್ಣುಮಕ್ಕಳ ಸಾಗಾಟ ನಡೆಯುತ್ತಿದೆ’ ಎಂದು ತಿಳಿಸಿದರು.

ಮಹಿಳಾ ಪೊಲೀಸ್ ಠಾಣೆಯ ಪಿಎಸ್‍ಐ ಮಾಳಮ್ಮ, ಬಾಲ ಮಂದಿರದ ಪುಟಾಣಿ ಕಾವೇರಿ ಉಪಸ್ಥಿತರಿದ್ದರು. ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಶೋಭಾ ಸ್ವಾಗತಿಸಿದರು. ಮಕ್ಕಳ ಹಕ್ಕು ರಕ್ಷಣ ಘಟಕದ ಲೆಕ್ಕಾಧಿಕಾರಿ ಶೃತಿ ಎಚ್‌.ಎನ್‌. ಕಾರ್ಯಕ್ರಮ ನಿರೂಪಿಸಿದರು. ಬೇಟಿ ಬಜಾವೋ ಬೇಟಿ ಪಡಾವೋ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT