ಶುಕ್ರವಾರ, ಸೆಪ್ಟೆಂಬರ್ 24, 2021
27 °C
ವಿಶೇಷ ಕೊರೊನಾ ವಾರಿಯರ್‌ ಪ್ರಶಸ್ತಿ ಸ್ವೀಕರಿಸಿದ ಶಾಸಕ ರೇಣುಕಾಚಾರ್ಯ

ನಾನು ಬೆಳೆಯಲು ಪತ್ರಿಕೆಗಳು ಕಾರಣ; ಶಾಸಕ ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ‘ನಾನು ಶಾಸಕನಾಗಿ, ಮಂತ್ರಿಯಾಗಿ ಬೆಳೆಯಲು ಪತ್ರಿಕೆಗಳೇ ಕಾರಣ. ಸ್ಥಳೀಯ ಪತ್ರಕರ್ತರು ಆರಂಭದಲ್ಲಿ ನನ್ನ ಕೆಲಸಗಳನ್ನು ಕುರಿತು ಬರೆದರು. ಟೀಕಿಸಿದರು. ತಪ್ಪುಗಳನ್ನು ಎತ್ತಿ ತೋರಿಸಿದರು. ತಿದ್ದಿ ತೀಡಿದರು’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಕೊರೊನಾ ವಾರಿಯರ್‌ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ಹೆಚ್ಚು ಓದಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ನನಗೆ ಯಾವ ಅನುಭವವೂ ಇಲ್ಲ. ಭಂಡ ಧೈರ್ಯ ಮಾಡಿ ತಾಲ್ಲೂಕಿನಾದ್ಯಂತ ಓಡಾಡಿ ಸಂಘಟನೆ ಮಾಡಿದೆ. ಚುನಾವಣೆಯಲ್ಲಿ ಗೆದ್ದು ಶಾಸಕನಾದೆ. ಕೆಲವರು ನಾನು ಮದವೇರಿದ ಆನೆ ಎನ್ನುತ್ತಾರೆ. ಆದರೆ, ನಾನು ಪಳಗಿದ ಆನೆ. ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿತಿದ್ದೇನೆ’ ಎಂದು ಹೇಳಿದರು.

‘ನನಗೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಗ್ಗೆ ನೋವಿದೆ. ಆದರೆ, ಹೈಕಮಾಂಡ್ ತೀರ್ಮಾನ ಪ್ರಶ್ನಿಸುವಂತಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದಾಗ ನನಗೂ ಸಚಿವ ಸ್ಥಾನ ಸಿಗಬಹುದು ಎಂದುಕೊಂಡಿದ್ದೆ. ಸಿಗದಿದ್ದಾಗ ನೋವಾಗಿದ್ದು ನಿಜ. ಹಾಗಂತ ಮಂತ್ರಿಗಿರಿಗಾಗಿ ಲಾಬಿ ಮಾಡಲಿಲ್ಲ. ನನಗೆ ಅಧಿಕಾರದ ಮೇಲೆ ಆಸೆ ಇಲ್ಲ. ನನ್ನ ಕೆಲಸ ಕಾರ್ಯಗಳನ್ನು ತಾಲ್ಲೂಕಿನ ಜನರು ಮೆಚ್ಚಿದ್ದಾರೆ. ನನ್ನ ಸೇವೆಯನ್ನು ಪರಿಗಣಿಸಿ ಪತ್ರಕರ್ತರ ಸಂಘವು ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದು ಭಾವುಕರಾಗಿ ಹೇಳಿದರು.

ತಹಶೀಲ್ದಾರ್ ಬಸವನಗೌಡ ಕೋಟೂರ, ಪಿಎಸ್‍ಐ ಬಸವನಗೌಡ ಬಿರಾದರ್, ಪುರಸಭೆ ಅಧ್ಯಕ್ಷ ಕೆ.ವಿ. ಶ್ರೀಧರ್ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ. ನಾಗರಾಜ್ ಉಪನ್ಯಾಸ ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮೃತ್ಯುಂಜಯ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ಟಿ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಕೆ.ಎಸ್. ಯೋಗೀಶ್ ಸ್ವಾಗತಿಸಿದರು. ಚಿನ್ಮಯ್ ಪಾಟೀಲ್ ಪ್ರಾರ್ಥಿಸಿದರು. ಗಾಯಕಿ ಎಂ.ಎ. ಸ್ಪಂದನಾ ಹಾಡಿದರು. ಪತ್ರಕರ್ತರಾದ ಚನ್ನೇಶ್ ಇದಿರುಮನೆ ವಂದನೆ ಸಲ್ಲಿಸಿದರು. ಪತ್ರಕರ್ತ ಎನ್.ಕೆ. ಆಂಜನೇಯ ಅವರು ಪ್ರಶಸ್ತಿ ಪ್ರದಾನದ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಪತ್ರಕರ್ತರಾದ ಎಚ್.ಕೆ. ಮಲ್ಲೇಶ್, ಯು.ಬಿ. ಜಯಪ್ಪ, ಹರೀಶ್ ಸಾಗೋನಿ, ನ್ಯಾಮತಿ ಸದಾಶಿವಯ್ಯ, ಫಲವನಹಳ್ಳಿ ಹಳದಪ್ಪ, ಕತ್ತಿಗೆ ರುದ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು