ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಶಾಂತಿಸಾಗರದಲ್ಲಿ 20 ದಿನಗಳು ಮಾತ್ರ ನೀರು

Published 28 ಫೆಬ್ರುವರಿ 2024, 16:01 IST
Last Updated 28 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ದಾವಣಗೆರೆ: ಚನ್ನಗಿರಿ, ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಶಾಂತಿಸಾಗರದ ನೀರು ಬಳಕೆಯಾಗುತ್ತಿದ್ದು, ಮುಂದಿನ 20 ದಿನಗಳಿಗೆ ಮಾತ್ರ ನೀರಿನ ಸಂಗ್ರಹವಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವು ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ವಿಪತ್ತು ನಿರ್ವಹಣೆ ಕುರಿತು ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಗ್ರಾಮೀಣ ಕುಡಿಯುವ ನೀರು ಪೂರೈಕೆ ಎಂಜಿನಿಯರ್, ಪಶುಸಂಗೋಪನಾ ಇಲಾಖೆ, ಬೆಸ್ಕಾಂ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ನೀರಿನ ಸಂಗ್ರಹ ಇಳಿದಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬೆಸ್ಕಾಂನಿಂದ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿರುವುದರಿಂದ ರೈತರು ಅನಧಿಕೃತವಾಗಿ ಕೆರೆಯಲ್ಲಿನ ನೀರನ್ನು ಬಳಕೆ ಮಾಡುತ್ತಿದ್ದಾರೆ. ಅನಧಿಕೃತ ವಿದ್ಯುತ್ ಪರಿವರ್ತಕಗಳ ತೆರವು ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ’ ಎಂದು ಸೂಚಿಸಿದರು.

‘ಶಾಂತಿಸಾಗರದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಕಾಲುವೆ ಮೂಲಕ ನೀರು ಶೇಖರಣೆಗೆ ಕ್ರಮವಹಿಸಲಾಗುತ್ತದೆ’ ಎಂದರು.

ಕೇಂದ್ರ ಸ್ಥಾನ ಬಿಡುವಂತಿಲ್ಲ:

‘ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರು, ಮೇವು ಹಾಗೂ ಸಾಂಕ್ರಾಮಿಕ ಕಾಯಿಲೆಗಳು ಸೇರಿದಂತೆ ವಿಕೋಪದಿಂದಾಗುವ ಸಮಸ್ಯೆಗಳನ್ನು ಎದುರಿಸಲು ಅಧಿಕಾರಿಗಳು ಸದಾ ಸನ್ನದ್ದರಾಗಿರಬೇಕು. ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿವೆ ಎಂದು ಪರಿಶೀಲನೆ ನಡೆಸಿ ಆಳಕ್ಕೆ ಕೊರೆಯಬೇಕಾಗಿದ್ದಲ್ಲಿ ಅಂತಹ ಕೊಳವೆಬಾವಿಗಳ ವಿವರದೊಂದಿಗೆ ಪ್ರಸ್ತಾವವನ್ನು ಆಯಾ ತಾಲ್ಲೂಕು ತಹಶೀಲ್ದಾರರಿಗೆ ಸಲ್ಲಿಸಬೇಕು’ ಎಂದರು.

ಸಹಾಯವಾಣಿ ಸ್ಥಾಪನೆ:

‘ಬರಗಾಲ ಇರುವುದರಿಂದ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ತಕ್ಷಣವೇ ಸಹಾಯವಾಣಿ ಆರಂಭಿಸಬೇಕು. ಜನರು ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆಯಾದಲ್ಲಿ ಮತ್ತು ಇತರೆ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳುವರು’ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದಾದ 169 ಗ್ರಾಮಗಳನ್ನು ಗುರುತಿಸಿದ್ದು, ಇದಕ್ಕಾಗಿ 171 ಕಡೆ ಖಾಸಗಿ ಬೋರ್‍ವೆಲ್ ಗುರುತಿಸಿ 89ಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್, ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರಿನ್ ಭಾನು ಎಸ್.ಬಳ್ಳಾರಿ, ಉಪವಿಭಾಗಾಧಿಕಾರಿ ಅಭಿಷೇಕ್, ದುರ್ಗಾಶ್ರೀ, ಡಿಡಿಎಲ್‍ಆರ್ ಭಾವನಾ ಹಾಗೂ ತಹಶೀಲ್ದಾರರು ಇದ್ದರು.

₹ 18.77 ಕೋಟಿ ಲಭ್ಯ

‘ಬರಗಾಲ ಎದುರಿಸಲು ತುರ್ತು ಕೆಲಸಗಳಿಗಾಗಿ ಅಂದರೆ ಕುಡಿಯುವ ನೀರು ಮೇವು ಪೂರೈಕೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹16.10 ಕೋಟಿ ಮತ್ತು ಎಲ್ಲಾ ತಹಶೀಲ್ದಾರರ ಖಾತೆಯಲ್ಲಿ ₹2.67 ಕೋಟಿ ಹಣವಿದ್ದು ಯಾವುದೇ ಅನುದಾನದ ಕೊರತೆ ಇಲ್ಲ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಟ್ಯಾಂಕರ್ ನೀರಿಗೆ ದರ ನಿಗದಿ

‘ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗಿದ್ದಲ್ಲಿ ಖಾಸಗಿ ಕೊಳವೆಬಾವಿ ಸಿಗದಿದ್ದಲ್ಲಿ ತಕ್ಷಣವೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು. ಈಗಾಗಲೇ ಗ್ರಾಮಗಳ ದೂರವನ್ನು ಆಧರಿಸಿ ಪ್ರತಿ ಟ್ಯಾಂಕರ್‌ಗೆ ಟ್ಯಾಂಕರ್‌ ₹500ರಿಂದ ₹ 900ರವರೆಗೆ ದರ ನಿಗದಿ ಮಾಡಲಾಗಿದೆ. ಟೆಂಡರ್ ಕರೆಯಲಾಗಿಲ್ಲ ಎಂದು ತಾಂತ್ರಿಕ ನೆಪವೊಡ್ಡಿ ಜನರಿಗೆ ನೀರು ಕೊಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT