ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ಯಾಂತ್ರೀಕೃತ ಭತ್ತದ ಕೊಯ್ಲು ಆರಂಭಿಸಿದ ರೈತರು

Last Updated 26 ನವೆಂಬರ್ 2022, 3:58 IST
ಅಕ್ಷರ ಗಾತ್ರ

ಬಸವಾಪಟ್ಟಣ: ಇಲ್ಲಿಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಭದ್ರಾ ಮತ್ತು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಗಾಲದ ಹಂಗಾಮಿನಲ್ಲಿ ನಾಟಿ ಮಾಡಲಾಗಿದ್ದ 3,200 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೊಯ್ಲು ಆರಂಭವಾಗಿದೆ.

ಈ ಭಾಗದಲ್ಲಿ ಶೇ 90ರಷ್ಟು ಪ್ರದೇಶದಲ್ಲಿ ಆರ್‌.ಎನ್‌.ಆರ್‌ ಮತ್ತು ಶೇ 10ರಷ್ಟು ಪ್ರದೇಶದಲ್ಲಿ ಶ್ರೀರಾಮ್‌
ತಳಿಯ ಭತ್ತವನ್ನು ರೈತರು ನಾಟಿ ಮಾಡಿದ್ದಾರೆ. ಈ ಹಂಗಾಮಿನಲ್ಲಿ ಸಾಕಷ್ಟು ಮಳೆ ಬಿದ್ದಿರುವುದರಿಂದ ಯಾವುದೇ ರೋಗ ಬಾಧೆ ಭತ್ತಕ್ಕೆ ಕಂಡು ಬಂದಿಲ್ಲ. ಎಕರೆಗೆ 25 ಕ್ವಿಂಟಲ್‌ದಿಂದ 30 ಕ್ವಿಂಟಲ್‌ ಇಳುವರಿ ಬಂದಿದ್ದು, ರೈತರಲ್ಲಿ ಸ್ವಲ್ಪ ನೆಮ್ಮದಿ ಕಂಡು ಬಂದಿದೆ ಎಂದು ಕೃಷಿ ಅಧಿಕಾರಿ ಡಾ.ಡಿ.ಎಂ.ರಂಗಸ್ವಾಮಿ
ತಿಳಿಸಿದ್ದಾರೆ.

ಗಂಗಾವತಿ ಮತ್ತು ಆಂಧ್ರ ಪ್ರದೇಶದಿಂದ ಬಂದಿರುವ ಹಾಗೂ ಸ್ಥಳೀಯರ ಭತ್ತದ ಕೊಯ್ಲಿನ ಯಂತ್ರಗಳಿಂದ ಕಟಾವು ನಡೆಯುತ್ತಿದ್ದು, ಗಂಟೆಯೊಂದಕ್ಕೆ ₹ 2,600 ಬಾಡಿಗೆಯಂತೆ ಕೊಯ್ಲು ನಡೆಯುತ್ತಿದೆ. ಈ ಯಂತ್ರಗಳು ಗದ್ದೆಗಳು ಒಣಗಿದ್ದರೆ ಒಂದೂ ಕಾಲು ಗಂಟೆಗೆ ಒಂದು
ಎಕರೆ ಭತ್ತವನ್ನು ಕಟಾವು ಮಾಡಿದರೆ, ತೇವವಿದ್ದ ಗದ್ದೆಗಳಲ್ಲಿ ಒಂದೂವರೆ ಗಂಟೆ ಬೇಕಾಗುತ್ತದೆ. ಪ್ರತಿ ವರ್ಷ ಮಳೆಗಾಲದ ಭತ್ತದ ಕೊಯ್ಲಿನ ವೇಳೆಗೆ ಮಳೆ ಸಂಪೂರ್ಣ ನಿಲ್ಲುತ್ತಿತ್ತು. ಆದರೆ ಈ ವರ್ಷ ನವೆಂಬರ್‌ನಲ್ಲಿಯೂ ಮಳೆ ಸುರಿಯುತ್ತಿದ್ದು, ಕೊಯ್ಲಿಗೆ ತೊಂದರೆಯಾಗಿದೆ. ಕಟಾವು ಮಾಡಿದ ಭತ್ತವನ್ನು ಒಣಗಿಸಲು ರೈತರು ಪರದಾಡಬೇಕಿದೆ’ ಎಂದು ರೈತರು ತಿಳಿಸಿದ್ದಾರೆ.

‘ಈಗ ಖಾಸಗಿ ವ್ಯಾಪಾರಿಗಳು ಒಂದು ಕ್ವಿಂಟಲ್‌ ಭತ್ತಕ್ಕೆ ₹ 2,150 ದರದಂತೆ ಖರೀದಿಸುತ್ತಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ದಿನ ದಿನಕ್ಕೂ ಕುಸಿತವಾಗುತ್ತಿದೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಒಂದು ಎಕರೆ ಭತ್ತದ ಬೆಳೆಗೆ ₹ 25,000ಕ್ಕೂ ಹೆಚ್ಚು ಖರ್ಚು ಬರುತ್ತಿದ್ದು, ಕೇಂದ್ರ ಸರ್ಕಾರ ಒಂದು ಕ್ವಿಂಟಲ್‌ ಭತ್ತಕ್ಕೆ ₹ 1,940 ನಿಗದಿಪಡಿಸಿದೆ. ಆದರೆ ಇಡೀ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ಈವರೆಗೂ ಆರಂಭಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹ 2,800ನ್ನು ನಿಗದಿಪಡಿಸಿ ಖರೀದಿಸಬೇಕು’ ಎಂದು ರೈತ ಸಂಘದ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಎಸ್‌.ಆರ್‌. ರವಿಕುಮಾರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT