ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನವಿ: ಪೊಲೀಸರ ಹಕ್ಕುಗಳಿಗೆ ಕತ್ತರಿ

ಕೆಎಸ್‌ಪಿ (ಡಿಪಿ) ನಿಯಮಗಳಿಗೆ ತಿದ್ದುಪಡಿ ತರುತ್ತಿರುವ ಸರ್ಕಾರ
Last Updated 20 ಸೆಪ್ಟೆಂಬರ್ 2022, 2:49 IST
ಅಕ್ಷರ ಗಾತ್ರ

ದಾವಣಗೆರೆ: ಯಾವುದೋ ಕಾರಣಗಳಿಂದ ಪೊಲೀಸ್‌ ಸಿಬ್ಬಂದಿಯ ಇನ್‌ಕ್ರೀಮೆಂಟ್‌ ಮತ್ತು ಬಡ್ತಿ ತಡೆಹಿಡಿದರೆ ಅದನ್ನು ಪ್ರಶ್ನಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆ.ಎ.ಟಿ)ಗೆ ಮೇಲ್ಮನವಿ ಸಲ್ಲಿಸುವ ಹಕ್ಕಿಗೆ ಕತ್ತರಿ ಹಾಕಲು ಸರ್ಕಾರ ಮುಂದಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್‌ (ಡಿಸಿಪ್ಲಿನರಿ ಪ್ರೊಸಿಡಿಂಗ್ಸ್‌) ತಿದ್ದುಪಡಿ ನಿಯಮ–2022ರ ಕರಡನ್ನು ಸರ್ಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನೂ ಆಹ್ವಾನಿಸಿದೆ.

ತಪ್ಪಿತಸ್ಥ ಸಿಬ್ಬಂದಿಗೆ ವಿಧಿಸಲಾಗುವ ದಂಡನೆಯು, ನಿಯಮ 4 ‘ಎ’ ಮತ್ತು ಅದರ ಉಪನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಯಾಗಿದ್ದಲ್ಲಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶವಿಲ್ಲ ಎಂದು ಕರಡು ಪ್ರತಿಯಲ್ಲಿ ನಮೂದಿಸಲಾಗಿದೆ.

ನಿಯಮ ಜಾರಿಯಾದಲ್ಲಿ ಇನ್ನು ಮುಂದೆ ಆಪಾದಿತ ಸಿಬ್ಬಂದಿಯು ತಮ್ಮ ಇನ್‌ಕ್ರೀಮೆಂಟ್‌ ಮತ್ತು ಬಡ್ತಿ ತಡೆಹಿಡಿದಾಗ ಮನವಿ ಸಲ್ಲಿಸುವಂತಿಲ್ಲ.

ಸರ್ಕಾರಗಳಿಗೆ ಅಧಿಕಾರಿಯ ಸೇವೆಗಳನ್ನು ಹೊಂದಿರುವ ವ್ಯಕ್ತಿ, ಸಂಸ್ಥೆ ಅಥವಾ ಪ್ರಾಧಿಕಾರಕ್ಕೆ ನಿರ್ಲಕ್ಷ್ಯ ಅಥವಾ ಆದೇಶಗಳ ಉಲ್ಲಂಘನೆ ಮಾಡಿದರೆ ಉಂಟಾದ ಆರ್ಥಿಕ ನಷ್ಟದ ಸಂಪೂರ್ಣ ಅಥವಾ ಭಾಗಶಃ ವಸೂಲಾತಿ ಮಾಡಲಾಗುತ್ತದೆ. ಅಂತಹ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

‘ಮೇಲಧಿಕಾರಿಗಳು ವಿವೇಚನಾ ಅಧಿಕಾರವನ್ನು ಬಳಸದೇ ಪೂರ್ವಗ್ರಹ ಪೀಡಿತರಾಗಿ, ಯಾರದೋ ಮಾತನ್ನು ಕೇಳಿ ಮನಸಿಗೆ ಬಂದಹಾಗೆ ಶಿಸ್ತು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಹೆಚ್ಚಾಗಿದೆ. ಈ ರೀತಿಯ ಧೋರಣೆಯನ್ನು ಮೇಲ್ಮನವಿ ಸಲ್ಲಿಸುವ ಮೂಲಕ ಪ್ರಶ್ನಿಸಿ, ನ್ಯಾಯ ಪಡೆಯುತ್ತಿದ್ದೆವು. ಹೊಸ ನಿಯಮ ಜಾರಿಗೆ ಬಂದರೆ ಹಕ್ಕಿನಿಂದ ವಂಚಿತರಾಗಲಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ
ತಿಳಿಸಿದರು.

‘ಕರಡು ಪ್ರತಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಗಳಿದ್ದಲ್ಲಿ, ಅವುಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಸೆ.21 ಆಕ್ಷೇಪ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಕರಡನ್ನು ವಾಪಸ್‌ ಪಡೆಯದೇ ಇದ್ದರೆ ಪೊಲೀಸ್‌ ಸಿಬ್ಬಂದಿಗೆ ಸಂಕಷ್ಟ ಎದುರಾಗಲಿದೆ’ ಎಂದು ಕರ್ನಾಟಕ ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್‌ ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಪೊಲೀಸ್‌ ಸಿಬ್ಬಂದಿಯ ತಾಳ್ಮೆಯನ್ನು ಪರೀಕ್ಷಿಸಲು ಹೊರಟಿದೆ. ಹಿರಿಯ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯದ್ದರಿಂದ, ವಿನಾಕಾರಣ ಶಿಸ್ತು ಕ್ರಮ ಕೈಗೊಳ್ಳುವುದು ಮಾಮೂಲಿ. ಅದನ್ನು ಪ್ರಶ್ನಿಸಬಾರದು ಎಂದೇ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಪೊಲೀಸ್‌ ಇಲಾಖೆಗೆ ಸೇರಿದ ಮೇಲೆ ಮುಷ್ಕರ, ಪ್ರತಿಭಟನೆ ನಡೆಸುವಂತಿಲ್ ಎಂಬ ನಬಿಯಮವೂ ಇದೆ. ಯಾರೂ ಪ್ರತಿಭಟಿಸುವುದಿಲ್ಲ ಎಂಬ ಧೈರ್ಯದಿಂದಲೇ ಈ ಕಾನೂನು ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಅವರುಆರೋಪಿಸಿದರು.

‘ಬೇರೆ ಇಲಾಖೆಗಳಿಗೆ ಅನ್ವಯವಾಗದ ನಿಯಮಗಳು ಪೊಲೀಸ್ ಇಲಾಖೆಗೆ ಏಕೆ’ ಎಂದು ಪ್ರಶ್ನಿಸಿದ ಅವರು, ಈ ತಿದ್ದುಪಡಿ ನಿಯಮವನ್ನು ಜಾರಿಗೆ ತರಬಾರದು. ಮೇಲಧಿಕಾರಿಗಳು ಕ್ರಮ ಕೈಗೊಂಡಾಗ ಅದನ್ನು ಪ್ರಶ್ನಿಸಿ ಮೂರು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಲು ಇದ್ದ ಅವಕಾಶವನ್ನು ಮುಂದುವರಿಸಬೇಕು ಎಂದು ಅವರು
ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT