ಶನಿವಾರ, ಡಿಸೆಂಬರ್ 5, 2020
24 °C
11ನೇ ದಿನಕ್ಕೆ ಕಾಲಿಟ್ಟ ಧರಣಿ, ತಟ್ಟೆ ಬಾರಿಸಿ ವಿನೂತನ ಪ್ರತಿಭಟನೆ

ಶಿಷ್ಯವೇತನಕ್ಕೆ ಆಗ್ರಹ: ವೈದ್ಯಕೀಯ ವಿದ್ಯಾರ್ಥಿಗಳಿಂದ ಸೇವೆ ಸ್ಥಗಿತ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 16 ತಿಂಗಳುಗಳಿಂದ ಬಾಕಿ ಇರುವ ಶಿಷ್ಯವೇತನಕ್ಕೆ ಪಟ್ಟು ಹಿಡಿದಿರುವ ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರಕ್ಕೆ ಸೇವೆ ಸ್ಥಗಿತ ಎಚ್ಚರಿಕೆ ನೀಡಿದ್ದಾರೆ. 

ಶಿಷ್ಯವೇತನಕ್ಕಾಗಿ 11 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರಕ್ಕೆ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಗುರುವಾರ ‘ನಮ್ಮ ಕೂಗು ಸರ್ಕಾರಕ್ಕೆ ಕೇಳಿಸಲಿ’ ಎಂದು ತಟ್ಟೆ ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಧರಣಿ 11 ನೇ ದಿನಕ್ಕೆ ಕಾಲಿಟ್ಟ ಪ್ರಯುಕ್ತ ಬೆಳಿಗ್ಗೆ 11 ಗಂಟೆಗೆ 11 ನಿಮಿಷಗಳ ಕಾಲ ತಟ್ಟೆ ಬಾರಿಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಾಕಿ ಇರುವ ಶಿಷ್ಯವೇತನವನ್ನು ಕೂಡಲೇ ನೀಡಬೇಕು. ಇಲ್ಲದಿದ್ದರೆ ಕೋವಿಡ್‌ –19 ಸೇವೆ ಹೊರತುಪಡಿಸಿ ಎಲ್ಲ ವೈದ್ಯಕೀಯ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದರು. 

ತಟ್ಟೆ ಬಾರಿಸುವ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳು ‘ಮೇಲೆ ಬಿಳಿ ಬಟ್ಟೆ ಒಳಗೆ ಖಾಲಿ ಹೊಟ್ಟೆ’, ‘ಜೀವ ಉಳಿಸುವ ವೈದ್ಯರ ಜೀವ ಹಿಂಡುವ ಸರ್ಕಾರ’, ‘ನ್ಯಾಯ ಬೇಕು’ ಎಂಬ ಘೋಷಣೆ ಕೂಗಿದರು. 

‘11 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಬೇಡಿಕೆ ಈಡೇರಿಸಲು ಕ್ರಮ ಕೈಗೊಂಡಿಲ್ಲ. ಬಿಸಿಲಿನಲ್ಲಿ ಪ್ರತಿನಿತ್ಯ ಧರಣಿ ನಡೆಸುತ್ತಿರುವ ಕಾರಣ ಹಲವು ವಿದ್ಯಾರ್ಥಿನಿಯರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ನೇತ್ರದಾನ, ರಕ್ತದಾನ ಶಿಬಿರ, ಶ್ರಮದಾನ ಮೂಲಕ ಜಾಗೃತಿ ಮೂಡಿಸಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಸರ್ಕಾರಕ್ಕೆ ನಾವು ಗುಲಾಮಗಿರಿ ಮಾಡುತ್ತಿರುವಂತಾಗಿದೆ. ಎರಡು ದಿನಗಳಲ್ಲಿ ಬಾಕಿ ಶಿಷ್ಯವೇತನ ನೀಡದಿದ್ದರೆ ಕೋವಿಡ್‌ ಸೇವೆ ಹೊರತುಪಡಿಸಿ ಎಲ್ಲ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ವಿದ್ಯಾರ್ಥಿ ಡಾ. ರಾಹುಲ್‌ ಹೇಳಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ಶಿಷ್ಯವೇತನ ನೀಡಲು ಆಗುವುದಿಲ್ಲ ಎಂದು ಹೇಳಿಕೆ ನೀಡುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿಕೆ ನೀಡಬಹುದಿತ್ತು. ಹಾಗೆ ಮಾಡಿಲ್ಲ. 16 ತಿಂಗಳುಗಳಿಂದ ನಮ್ಮನ್ನು ಗುಲಾಮರಂತೆ ಸರ್ಕಾರ ನಡೆಸಿಕೊಂಡಿದೆ.  239 ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ಅಮಾನವೀಯ’ ಎಂದು ವಿದ್ಯಾರ್ಥಿ ಡಾ. ಹರೀಶ್‌ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ವಿದ್ಯಾರ್ಥಿಗಳು, ಕಾಲೇಜು ಸರ್ಕಾರಕ್ಕೆ ಈವರೆಗೆ ಪಾವತಿಸಿರುವ ಕ್ಲಿನಿಕಲ್‌ ಸೌಲಭ್ಯದ ಶುಲ್ಕವನ್ನು ಪರಿಗಣಿಸಿ ಸರ್ಕಾರವೇ ಶಿಷ್ಯವೇತನ ಭರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಡಾ. ಶಿವಾನಿ, ಡಾ. ನಿರೂಪ್‌, ಡಾ. ಸುಧಾಕರ್‌, ಡಾ. ಅಂಕಿತ್‌, ಡಾ. ನಿಧಿ, ಡಾ. ದೀಪ, ಡಾ. ದೀಪಶ್ರೀ ಸೇರಿ ವಿದ್ಯಾರ್ಥಿಗಳು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು