ದಾವಣಗೆರೆ: ‘ವೀರಶೈವ– ಲಿಂಗಾಯತದ ನಡುವೆ ಭೇದವಿಲ್ಲ; ಎರಡೂ ಒಂದೇ. ಸಾಮಾಜಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸಲು ಸಮುದಾಯ ಒಟ್ಟಾಗಿರುವ ಅಗತ್ಯವಿದೆ..’ ಎಂಬುದನ್ನು ನಿರಂತರವಾಗಿ ಪ್ರತಿಪಾದಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಪ್ರಬಲವಾಗಿ ವಿರೋಧಿಸಿದ್ದರು.

ಶಾಮನೂರು ಶಿವಶಂಕರಪ್ಪ 2012ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗುತ್ತಿದ್ದಂತೆಯೇ ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ ಮುನ್ನೆಲೆಗೆ ಬಂದಿತ್ತು. 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಕೂಗು ಜೋರಾಗಿ ಕೇಳಲಾರಂಭಿಸಿತು. ಇದಕ್ಕೆ ನೀರೆರೆದ ಅಪವಾದಕ್ಕೆ ಸರ್ಕಾರವೂ ಗುರಿಯಾಯಿತು. ಪ್ರತ್ಯೇಕ ಧರ್ಮದ ಬಗ್ಗೆ ಆರಂಭದಲ್ಲಿ ಒಲವು ಇಟ್ಟುಕೊಂಡಿದ್ದ ಶಾಮನೂರು ಶಿವಶಂಕರಪ್ಪ ನಿರಂತರ ಚರ್ಚೆಯ ಬಳಿಕ ಸ್ಪಷ್ಟ ನಿಲುವು ತಳೆದರು. ಈ ನಿರ್ಧಾರಕ್ಕೆ ಕೊನೆಯವರೆಗೂ ಬದ್ಧರಾಗಿದ್ದರು.

120 ವರ್ಷಗಳ ಇತಿಹಾಸ ಹೊಂದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಅಧ್ಯಕ್ಷರಾಗಿ ಆಯ್ಕೆಯಾದ ಶಾಮನೂರು ಶಿವಶಂಕರಪ್ಪ, 13 ವರ್ಷಗಳಿಂದ ಸಾರಥ್ಯ ವಹಿಸಿದ್ದಾರೆ. ರಾಜಕೀಯ, ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸು ಸಮುದಾಯದ ಸಂಘಟನೆಯಲ್ಲಿಯೂ ದಕ್ಕಿದೆ. ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುತ್ತ ಬಂದ ಇವರು, ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ವಿಫಲಗೊಳಿಸಲು ಮಹಾಸಭಾದ ಹೆಸರನ್ನು ‘ವೀರಶೈವ–ಲಿಂಗಾಯತ’ ಎಂಬುದಾಗಿ ತಿದ್ದುಪಡಿ ಮಾಡಿದರು.

‘ಪ್ರತ್ಯೇಕ ಧರ್ಮದ ಬೇಡಿಕೆ’ಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದರು. ಈ ವಿಚಾರದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿ ಕಾಂಗ್ರೆಸ್ ಸರ್ಕಾರದ ನಡೆಯನ್ನು ಬಹಿರಂಗವಾಗಿ ಟೀಕಿಸಿದರು. ವೀರಶೈವ–ಲಿಂಗಾಯತ ಸಮುದಾಯದ ಹಿತಾಸಕ್ತಿ ಕಾಪಾಡಲು ತಮ್ಮದೇ ಪಕ್ಷದ ನಾಯಕರನ್ನು ಎದುರು ಹಾಕಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾಗಿದ್ದ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಶಾಮನೂರು ಅವರ ಈ ಅಚಲ ನಿರ್ಧಾರ ವೀರಶೈವ ಮಠಾಧೀಶರಲ್ಲಿ ಭರವಸೆಯ ಬೆಳಕು ಮೂಡಿಸಿತ್ತು.

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪೆಟ್ಟು ನೀಡಿತು ಎಂಬ ವಿಶ್ಲೇಷಿಸಲಾಯಿತು. ‘ಪ್ರತ್ಯೇಕ ಧರ್ಮದ ಹೋರಾಟ ಮುಗಿದ ಅಧ್ಯಾಯ’ ಎನ್ನುತ್ತ 2019ರ ಬಳಿಕ ಸಮುದಾಯ ಸಂಘಟನೆಗೆ ಒತ್ತು ನೀಡಿದರು. ಆಗ ಮೀಸಲಾತಿಗೆ ಆಗ್ರಹಿಸಿ ಒಳಪಂಗಡಗಳು ಪ್ರತ್ಯೇಕವಾಗಿ ಬೀದಿಗೆ ಇಳಿದವು. ಇದನ್ನು ಸಾವಧಾನದಿಂದಲೇ ಗಮನಿಸಿದ ಶಾಮನೂರು ಶಿವಶಂಕರಪ್ಪ ವೀರಶೈವ–ಲಿಂಗಾಯತ ಒಳಪಂಗಡ ಒಗ್ಗಟ್ಟಿನಿಂದ ಇರಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಸಮುದಾಯವನ್ನು ಒಗ್ಗೂಡಿಸಲು ಮಠಾಧೀಶರೊಂದಿಗೆ ನಿರಂತರವಾಗಿ ಚರ್ಚಿಸಿದರು. ಪಂಚಪೀಠಗಳ ಮಠಾಧೀಶರನ್ನು ಒಂದೇ ವೇದಿಕೆಗೆ ತಂದು ದಾವಣಗೆರೆಯಲ್ಲಿ ಸಮ್ಮೇಳನ ಆಯೋಜಿಸಿ ಯಶಸ್ಸು ಕಂಡರು. ‘ಗುರು ಮತ್ತು ವಿರಕ್ತ ಪರಂಪರೆ ಒಟ್ಟಾದರೆ ಸಮುದಾಯದ ಶಕ್ತಿ ಇನ್ನಷ್ಟು ಹೆಚ್ಚುತ್ತದೆ’ ಎಂಬ ಬಲವಾದ ನಂಬಿಕೆ ಇವರಲ್ಲಿತ್ತು. ವಯಸ್ಸಿನಲ್ಲಿ ಹಿರಿಯರಾದ ಇವರ ಸಲಹೆಗಳಿಗೆ ಮಠಾಧೀಶರೂ ತಲೆದೂಗುತ್ತಿದ್ದರು.

‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ’ದ 24ನೇ ಮಹಾಸಂಗಮವನ್ನು ದಾವಣಗೆರೆಯಲ್ಲಿ 2023ರ ಡಿಸೆಂಬರ್ 23 ಮತ್ತು 24ರಂದು ಆಯೋಜಿಸಿದ್ದರು. ಗುರು ಮತ್ತು ವಿರಕ್ತ ಪರಂಪರೆ ಒಂದಾಗಬೇಕು ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದ ಶಾಮನೂರು ಶಿವಶಂಕರಪ್ಪ, ವೀರಶೈವ ಪೀಠಾಚಾರ್ಯ, ಶಿವಾಚಾರ್ಯರ ಶೃಂಗವನ್ನು 2025ರ ಜುಲೈ 21, 22ರಂದು ಸಂಘಟಿಸಿ ಯಶಸ್ಸು ಕಂಡಿದ್ದರು. ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಉಜ್ಜಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಒಂದೇ ವೇದಿಕೆಗೆ ತರುವಲ್ಲಿ ಯಾಶಸ್ವಿಯಾಗಿದ್ದರು.

ಜಾತಿ ಗಣತಿಗೆ ಪ್ರಬಲ ವಿರೋಧ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ್ ನೇತೃತ್ವದಲ್ಲಿ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಗೆ ಶಾಮನೂರು ಶಿವಶಂಕರಪ್ಪ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಆಯೋಗದ ವರದಿ ಅನುಷ್ಠಾನಗೊಳ್ಳದಂತೆ ಪ್ರಭಾವ ಬೀರಿದವರಲ್ಲಿ ಶಿವಶಂಕರಪ್ಪ ಪ್ರಮುಖರು. ಸಮೀಕ್ಷೆಯ ವರದಿ ಸಿದ್ಧವಾದ ಬಳಿಕ ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾ ಪ್ರಬಲ ವಿರೋಧ ವ್ಯಕ್ತಪಡಿಸಿತು.

ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ವರದಿ ಅನುಷ್ಠಾನಕ್ಕೆ ನಡೆಸಿದ ಯತ್ನಕ್ಕೂ ತಕರಾರು ಮಾಡಿತು. ಪ್ರಬಲ ಸಮುದಾಯಗಳ ಜೊತೆಗೂಡಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತರುವಲ್ಲಿ ಶಿವಶಂಕರಪ್ಪ ಯಶಸ್ವಿಯಾಗಿದ್ದರು. ‘ವೀರಶೈವ–ಲಿಂಗಾಯತ ಹಾಗೂ ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ’ ಎಂದು ಗುಡುಗಿದ್ದರು. ಇತ್ತೀಚೆಗೆ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೂ ಶಿವಶಂಕರಪ್ಪ ಅಸಮಾಧಾನ ಹೊರಹಾಕಿದ್ದರು.

ಪಕ್ಷ ಮೀರಿದ ಸಮುದಾಯ ಪ್ರೇಮ

ಶಾಮನೂರು ಶಿವಶಂಕರಪ್ಪ ಅವರು ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ವೀರಶೈವ–ಲಿಂಗಾಯತ ಸಮುದಾಯದ ಪರವಾಗಿದ್ದರು. ಅವರ ಸಮುದಾಯದ ಪ್ರೇಮ ರಾಜಕೀಯ ಪಕ್ಷ ಚೌಕಟ್ಟು ಮೀರಿತ್ತು. ಇದೇ ಕಾರಣಕ್ಕೆ ಹಲವು ಬಾರಿ ಸ್ವಪಕ್ಷೀಯರ ಕೆಂಗಣ್ಣಿಗೂ ಗುರಿಯಾಗಿದ್ದರು. 2021ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗೆ ಇಳಿಸುವ ಪ್ರಯತ್ನ ನಡೆದಾಗ ಶಾಮನೂರು ಶಿವಶಂಕರಪ್ಪ ಬೆನ್ನಿಗೆ ನಿಂತರು. ‘ಅಖಿಲ ಭಾರತ ವೀರಶೈವ ಮಹಾಸಭಾ ಯಡಿಯೂರಪ್ಪ ಅವರ ಬೆಂಬಲಕ್ಕಿದೆ’ ಎಂಬುದನ್ನು ಬಹಿರಂಗವಾಗಿ ಘೋಷಣೆ ಮಾಡಿದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನೂ ಆಯ್ಕೆ ಮಾಡಿ’ ಎಂದು 2024ರ ಜನವರಿಯಲ್ಲಿ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.