ಸೋಮವಾರ, ನವೆಂಬರ್ 29, 2021
20 °C
ಬಾಲಸುಬ್ರಹ್ಮಣ್ಯಂ ಅಗಲಿ ಒಂದು ವರ್ಷ

ಪುಸ್ತಕ ಅನಾವರಣ: ಎಸ್‌ಪಿಬಿ ಸಾಧನೆ ನೆನಪಿಸುವ ‘ಸ್ವರ ಸಾಮ್ರಾಟ’

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕನ್ನಡ, ತೆಲುಗು, ತಮಿಳು ಸೇರಿ 16 ಭಾಷೆಗಳಲ್ಲಿ ಹಾಡಿರುವ ಹಲವು ಭಾಷೆಗಳಲ್ಲಿ ಅಭಿನಯಿಸಿರುವ, ಕಂಠದಾನ ಮಾಡಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕಾಲದಲ್ಲಿ ಲೀನವಾಗಿ ಸೆ.25ಕ್ಕೆ ವರ್ಷ ತುಂಬುತ್ತಿದೆ. ಅವರ ಸಾಧನೆಯ ಹಾದಿಯನ್ನು ಅನಾವರಣಗೊಳಿಸುವ ಕೃತಿ ‘ಸ್ವರ ಸಾಮ್ರಾಟ ಎಸ್‌.ಪಿ. ಬಾಲಸುಬ್ರಹ್ಮಣ್ಯಂ’ ಹೊರ ಬರುತ್ತಿದೆ.

ದಾವಣಗೆರೆಯ ಹಿರಿಯ ಪತ್ರಕರ್ತ ವಿ. ಹನುಮಂತಪ್ಪ ಬರೆದಿರುವ ಈ ಕೃತಿ ಬದುಕಿನ ವೈಯಕ್ತಿಕ ವಿವರಗಳಿಗಿಂತ ಎಸ್‌.ಪಿ.ಬಿ ಅವರು ಸ್ವರ ಸಾಮ್ರಾಟರಾದ ಹಾದಿಯನ್ನು ಕಟ್ಟಿಕೊಟ್ಟಿದೆ. ಕಳೆದ ಶತಮಾನದ 80ರ ದಶಕ ಹೊತ್ತಿಗೆ ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್‌, ತೆಲುಗಿನಲ್ಲಿ ಘಂಟಸಾಲ ವೆಂಕಟೇಶ್ವರ ರಾವ್‌, ತಮಿಳಿನ ಟಿ.ಎಂ. ಸೌಂದರರಾಜನ್‌ ಹೀಗೆ ಸುತ್ತಮುತ್ತಲ ರಾಜ್ಯಗಳ ಎಲ್ಲ ಗಾಯಕರು ಸಾಧನೆಯ ತುತ್ತತುದಿಗೆ ಏರಿ ಇಳಿಯುತ್ತಿದ್ದ ಸಮಯ. ಈ ನಿರ್ವಾತವನ್ನು ತುಂಬಲೆಂದೇ ಆವಿರ್ಭವಿಸಿ ಬಂದವರಂತೆ ಕಾಣಿಸಿಕೊಂಡವರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ. ಮುಂದಿನ ಎರಡು ದಶಕಗಳ ಕಾಲ ಎಸ್‌ಪಿಬಿಯವರದ್ದಾಗಿದ್ದನ್ನು ಈ ಕೃತಿ ಎತ್ತಿತೋರಿಸುತ್ತದೆ.

17ನೇ ವಯಸ್ಸಿನಲ್ಲಿ ಡ್ರಾಮಾ ಮ್ಯೂಸಿಕ್‌ ಸ್ಪರ್ಧೆಯಲ್ಲಿ ಹಾಡಿದ್ದು, ಎಸ್‌. ಜಾನಕಿ ನುಡಿದ ಭವಿಷ್ಯದಿಂದ ಹಿಡಿದು ಪ್ರತಿ ಘಟನೆಗಳನ್ನು ದಾಖಲಿಸುತ್ತಾ ಹೋಗುವುದರ ಜತೆಗೆ ಬಾಲ್ಯದಿಂದ ಸಾಯುವವರೆಗಿನ ಎಲ್ಲ ಛಾಯಾ ಚಿತ್ರಗಳ ಸಂಗ್ರಹವನ್ನೇ ‘ಸ್ವರ ಸಾಮ್ರಾಟ’ ನೀಡುತ್ತಿದೆ.

ವಿದ್ಯೆಯೊಂದಿಗೆ ಸಂಗೀತ ಕಲಿತಿದ್ದು, ಕೋದಂಡ ಪಾಣಿಯವರ ಭವಿಷ್ಯ, ತಲೆಮಾರಿನ ಗಾಯಕರೊಂದಿಗಿನ →ಸಂಬಂಧ, ರಿಯಾಲಿಟಿ ಶೋದಲ್ಲಿ ಪಡೆದ ಯಶಸ್ಸು, ಡಬ್ಬಿಂಗ್‌ ಆರ್ಟಿಸ್ಟ್‌, ನಟ, ಸಂಗೀತ ನಿರ್ದೇಶನ, ಹಿಂದಿಯಲ್ಲಿ ಮಿಂಚಿದ ಎಸ್‌ಪಿಬಿ, ಕನ್ನಡದೊಂದಿಗಿನ ಅನುಬಂಧ, ಸೋಲೊ ಹಾಡಿನಲ್ಲೂ ಪಡೆದ ಯಶಸ್ಸು, ವಿಷ್ಣು–ಎಸ್‌ಬಿಪಿ ಕಾಂಬಿನೇಶನ್‌, ಭಾವಗೀತೆಗಳ ಮೆರುಗು, ಭಕ್ತಿ ಗೀತೆಗಳ ಭಾವಪರವಶತೆ, ದಾವಣಗೆರೆಯ ನಂಟು, ದಾವಣಗೆರೆಯ ಚಿಂದೋಡಿ ಲೀಲಾ, ಚಿಂದೋಡಿ ಬಂಗಾರೇಶ್‌ ನಿರ್ಮಿಸಿ ನಿರ್ದೇಶಿಸಿದ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಸಿನಿಮಾದ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದ ನೆನಪು, ಮಠಗಳ ನಂಟು, ಕಷ್ಟದಲ್ಲಿದ್ದ ಕಲಾವಿದನಿಗೆ ಮಾಡಿದ ಸಹಾಯಗಳ ವಿವರಗಳು ಇಲ್ಲಿ ಸಿಗುತ್ತವೆ.

ಮೇರುನಟ ರಾಜ್‌ಕುಮಾರ್‌ ಸಹಿತ ಹಲವಾರು ನಟರ ಎದೆಯೊಳಗಿನ ಅಭಿಪ್ರಾಯ, ಹಂಸಲೇಖರಂಥ ಮೇರು ಸಂಗೀತ ಸಾಹಿತಿಗಳ ಮನದಾಳದ ಮಾತುಗಳು, ಬಾಲಸುಬ್ರಹ್ಮಣ್ಯಂ–ಪಿ.ಸುಶೀಲ ಗಾಯನ ಜುಗಲ್‌ಬಂದಿ, ‘ತರಿಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇಯ್ತಿತ್ತು...’ ಹಾಡು ಮೊದಲು ಸುಲಭ ಅನ್ನಿಸಿ ಹಾಡಲು ಆರಂಭಿಸಿದಾಗಲೇ ಗೊತ್ತಾದ ಸಂಕಷ್ಟದಿಂದ ಹಿಡಿದು ಕಷ್ಟವಾದ ಹಲವು ಹಾಡುಗಳ ವಿವರಣೆಗಳು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಕ್ರಿಕೆಟ್‌ ಪ್ರೀತಿಯಿಂದ ಹಿಡಿದು ಮನುಷ್ಯಪ್ರೀತಿವರೆಗೆ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಪ್ರತಿಭೆಯ ಬಹುಮುಖವನ್ನು ಅನಾವರಣಗೊಳಿಸುವ ಈ ಕೃತಿ ಸೆ.25ರಂದೇ ಲೋಕಾರ್ಪಣೆಗೊಳ್ಳುವ ಮೂಲಕ ಎಸ್‌ಪಿಬಿ ನೆನಪನ್ನು ಚಿರಸ್ಥಾಯಿ ಮಾಡುತ್ತಿದೆ ಎಂದು ಬಿಡುಗಡೆಯ ಹೊಣೆ ಹೊತ್ತಿರುವ ‘ಜಿಲ್ಲೆ ಸಮಾಚಾರ ಬಳಗ’ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು