ಗುರುವಾರ , ಆಗಸ್ಟ್ 18, 2022
25 °C

ದಾವಣಗೆರೆಯಲ್ಲಿ ಮೂರು ದಿನ ಶಿವಸಂಚಾರ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಇಲ್ಲಿನ ಸ್ನೇಹ ಬಳಗದಿಂದ ಏ.26ರಿಂದ 28ವರೆಗೆ ಶಿವಸಂಚಾರ ನಾಟಕೋತ್ಸವ ವಿದ್ಯಾನಗರದ ನೂತನ್ ಕಾಲೇಜು ಪಕ್ಕದ ಮೈದಾನದಲ್ಲಿ ನಡೆಯಲಿದೆ’ ಎಂದು ಸ್ನೇಹ ಬಳಗದ ಸಂಚಾಲಕ ಹಾಗೂ ನಿವೃತ್ತ ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಹೇಳಿದರು.

‘ಏ.26ರಂದು ಸಂಜೆ 6ಕ್ಕೆ ತರಳಬಾಳು ಶಾಖಾ ಮಠದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಉದ್ಘಾಟನೆಯ ಬಳಿಕ ಚಂದ್ರಶೇಖರ ತಾಳ್ಯ ರಚನೆಯ ಛಾಯಾ ಭಾರ್ಗವಿ ನಿರ್ದೇಶನದ ‘ವಕ್ಕಲಿಗ ಮುದ್ದಣ್ಣ’ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ಹೇಳಿದರು.

‘ಏ.27ರಂದು ಸಂಜೆ 6ಕ್ಕೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹಾಗೂ ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ’ ಕುರಿತು ನಿವೃತ್ತ ಅಧೀಕ್ಷಕ ಎಂಜಿನಿಯರ್‌ ಜಿ.ಎಸ್. ಉಮಾಪತಿ ಉಪನ್ಯಾಸ ನೀಡುವರು. ಅಂದು ಸಂಜೆ ಲಿಂಗದೇವರು ಹಳೇಮನೆ ರಚನೆಯ ಜಗದೀಶ್ ಆರ್. ನಿರ್ದೇಶನದ ‘ಗಡಿಯಂಕ ಕುಡಿಮುದ್ದ’ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ಹೇಳಿದರು.

‘ಏ.28ರಂದು ಸಂಜೆ ಬಿ.ಆರ್. ಹರಿಷಿಣಗೋಡಿ ರಚನೆಯ ವೈ.ಡಿ. ಬಾದಾಮಿ ನಿರ್ದೇಶನದಲ್ಲಿ ‘ಬಸ್ ಕಂಡಕ್ಟರ್’ ಪ್ರದರ್ಶನ ನಡೆಯಲಿದ್ದು, ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ಉದ್ಯಮಿಗಳಾದ ಎಸ್.ಎಸ್. ಬಕ್ಕೇಶ್, ಅಣಬೇರು ರಾಜಣ್ಣ, ಮಾಜಿ ಶಾಸಕ ಬಿ.ಪಿ. ಹರೀಶ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಕುಟುಂಬ ನಮ್ಮ ಸಂಸ್ಕೃತಿ’ ಕುರಿತು ಕುಟುಂಬ ಪ್ರಮೋದ್‌ನ ಮುಖ್ಯಸ್ಥ ಕೆ.ಎಸ್. ರಮೇಶ್ ಉಪನ್ಯಾಸ
ನೀಡಲಿದ್ದಾರೆ.  ಕೊರೊನಾ ಕಾರಣದಿಂದ ನಾಟಕೋತ್ಸವ ಪ್ರದರ್ಶನ ಇರಲಿಲ್ಲ. ಸಾಣೇಹಳ್ಳಿಗೆ ಮೀಸಲಾಗಿದ್ದ ‌ಶಿವಸಂಚಾರ ನಾಟಕೋತ್ಸವವನ್ನು ನಗರದಲ್ಲೂ ತರುವ ಉದ್ದೇಶದಿಂದ ಈ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ವಿದ್ಯಾನಗರದ 30ಕ್ಕೂ ಹೆಚ್ಚು ಕುಟುಂಬಗಳು ನಾಟಕ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುತ್ತಿವೆ’ ಎಂದರು.

‘ನೂತನ್ ಕಾಲೇಜು ಪಕ್ಕದ ಖಾಲಿ ಜಾಗ ಸದಾ ಕಸ ಪ್ಲಾಸ್ಟಿಕ್‌ನಿಂದ ತುಂಬಿಹೊಗಿತ್ತು. ಸಾಂಸ್ಕೃತಿಕ ಚಟುವಟಿಕೆ ನಡೆಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ಪರಿಸರ ಸ್ವಚ್ಛತೆ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

ಮುದೇಗೌಡ್ರ ವಿಶ್ವನಾಥ್, ಬೂದಿಹಾಳ್ ಶಿವಕುಮಾರ್, ರೇವಣಸಿದ್ದಪ್ಪ, ಮಲ್ಲೇಶ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು