ಬುಧವಾರ, ಸೆಪ್ಟೆಂಬರ್ 29, 2021
21 °C
ಟ್ಯಾಂಕರ್ ಮೂಲಕ ನಿತ್ಯವೂ ನೀರು ಪೂರೈಕೆ, ನಗರ ಪ್ರದೇಶಗಳಲ್ಲೂ ಕಣ್ಗಾವಲು

ಶಿವಮೊಗ್ಗ ಜಿಲ್ಲೆ: 93 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮುಂಗಾರು ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಜಿಲ್ಲೆಯ 93 ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಈ ಗ್ರಾಮಗಳಿಗೆ ಈಗಾಗಲೇ 2,942 ಟ್ಯಾಂಕರ್ ನೀರು ಸರಬರಾಜು ಮಾಡಲಾಗಿದೆ. ಭದ್ರಾವತಿ ತಾಲೂಕಿನ 3 ಗ್ರಾಮಗಳು, ಹೊಸನಗರದ 13, ಸಾಗರದ 55, ಶಿಕಾರಿಪುರದ 10, ಶಿವಮೊಗ್ಗದ 7 ಹಾಗೂ ಸೊರಬದ 6 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಮಳೆಗಾಲ ಆರಂಭವಾಗುವವರೆಗೂ ಅಗತ್ಯ ಪ್ರಮಾಣದ ನೀರು ಪೂರೈಸಲಾಗುವುದು. ಯಾವುದೇ ಗ್ರಾಮಗಳಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಟ್ಯಾಂಕರ್ ಮೂಲಕ ನೀರು ಒದಗಿಸಲು ಸ್ಥಳೀಯ ಪಂಚಾಯಿತಿಗಳಿಗೆ ಆದೇಶಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಶಿಕಾರಿಪುರ ತಾಲ್ಲೂಕಿನ 22, ಹೊಸನಗರ ತಾಲೂಕಿನ 2 ಕೊಳವೆಬಾವಿ ಸೇರಿ 24 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗಿದೆ. ಅಲ್ಲಿಂದ ಸಮಸ್ಯೆ ಇರುವ ಗ್ರಾಮಗಳ ಜನರಿಗೆ ನೀರು ಪೂರೈಸಲಾಗುತ್ತಿದೆ.
ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿಲ್ಲ. ಆದರೂ, ನಿರಂತರ ನಿಗಾ ವಹಿಸಬೇಕು. ಅಗತ್ಯ ಕಂಡುಬಂದರೆ ಟ್ಯಾಂಕರ್ ನೀರು ಪೂರೈಕೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಹುಗ್ರಾಮ ಯೋಜನೆಗಳ ತ್ವರಿತ ಅನುಷ್ಠಾನ:

ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಶಿವಮೊಗ್ಗ ತಾಲ್ಲೂಕಿನ ಬುಳ್ಳಾಪುರ ಹಾಗೂ ಇತರೆ 17 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ವೇಗ ಪಡೆಯಬೇಕು. ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿ ಮತ್ತು ಇತರ 8 ಗ್ರಾಮಗಳ ಯೋಜನೆ, ಸಾಗರ ತಾಲ್ಲೂಕಿನ ಸಾಗರ ಹಾಗೂ ಇತರ 28 ಗ್ರಾಮಗಳ ಯೋಜನೆ, ಸಾಗರ ತಾಲ್ಲೂಕಿನ ಗೌತಮಪುರ ಹಾಗೂ ಇತರೆ 127   ಗ್ರಾಮಗಳ ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ಸ್ಥಳದ ತೊಡಕುಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಸೂಚಿಸಿದರು.

ಬಿತ್ತನೆ ಬೀಜ ಗೊಬ್ಬರ, ದಾಸ್ತಾನು:

ಹಿಂಗಾರು ಮಳೆ ಜಿಲ್ಲೆಯಲ್ಲಿ ಸಂಪೂರ್ಣ ಕೈಕೊಟ್ಟಿತ್ತು. ಇದರಿಂದ ಮಳೆಯಾಧಾರಿತ ಹಿಂಗಾರು ಬಿತ್ತನೆ ಸಾಧ್ಯವಾಗಲಿಲ್ಲ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಮೇವು ಲಭ್ಯವಿದೆ. ರೈತರಿಂದ ಇದುವರೆಗೂ ಮೇವಿನ ಕಿಟ್‌ಗಳಿಗೆ ಬೇಡಿಕೆ ಬಂದಿಲ್ಲ. ಮುಂಗಾರು ಬಿತ್ತನೆಗೆ 35 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಅಗತ್ಯವಿದೆ. ಸಾಕಷ್ಟು ಪ್ರಮಾಣದ ಬಿತ್ತನೆ ಬೀಜಗಳು ಹಾಗೂ 36 ಸಾವಿರ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಮಳೆ ಬಿದ್ದ ತಕ್ಷಣ ಬಿತ್ತನೆ ಬೀಜ ವಿತರಣೆ ಕಾರ್ಯ ಆರಂಭಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಕಿರಣಕುಮಾರ್ ಮಾಹಿತಿ ನೀಡಿದರು.

900 ಗ್ರಾಮಗಳಲ್ಲಿ ರುದ್ರಭೂಮಿಗೆ ಜಾಗ ಇಲ್ಲ:

ಜಿಲ್ಲೆಯ 900 ಗ್ರಾಮಗಳಲ್ಲಿ ರುದ್ರಭೂಮಿಗೆ ಸ್ಥಳದಕೊರತೆ ಇದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.

ಕೆಲವು ಪಡಿತರ ಅಂಗಡಿಗಳಲ್ಲಿ ಬಯೊಮೆಟ್ರಿಕ್‌ಗೆ ಹಣ ಪಡೆಯುತ್ತಿದ್ದಾರೆ ಎಂದು ದೂರುಗಳು ಬಂದಿವೆ. ಶುಲ್ಕ ಪಡೆಯದಂತೆ ಎಚ್ಚರಿಕೆ ನೀಡಲಾಗಿದೆ. ಸೂಚನೆ ಮೀರಿದರೆ ಅಂತಹ ಪರಿತರ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಶಿವರಾಮೇಗೌಡ, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್‌.ಟಿ.ಶೇಖರ್‌ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು