ಶನಿವಾರ, ಡಿಸೆಂಬರ್ 14, 2019
20 °C

ಮಹದಾಯಿ ಅಧಿಸೂಚನೆ ಹೊರಡಿಸಲು 10 ದಿನ ಗಡುವು ನೀಡಿದ ಎನ್‌.ಎಚ್‌.ಕೋನರಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹದಾಯಿ ಯೋಜನೆ ಕುರಿತು ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಮೀನಮೇಷ ಮಾಡುತ್ತಿದ್ದು, ಈ ಕುರಿತು ಹತ್ತು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಎಚ್ಚರಿಕೆ ನೀಡಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕರ್ನಾಟಕದಲ್ಲಿ 25 ಜನ ಸಂಸದರು ಹಾಗೂ ಇಬ್ಬರು ಸಚಿವರಿದ್ದರೂ, ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಮಹದಾಯಿ ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆ ಎಂದು ಬಿಜೆಪಿ ನಾಯಕರು ದೊಡ್ಡಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಟೀಕಿಸಿದರು.

‘ಉಪ ಚುನಾವಣೆ ಮುಗಿದ ಕೆಲ ದಿನಗಳಲ್ಲಿ ಮಹದಾಯಿ ವಿಚಾರ ಕುರಿತು ರೈತ ಸಂಘ, ಕನ್ನಡಪರ ಸಂಘಟನೆಗಳು, ಮಹದಾಯಿ ಕಳಸಾ ಬಂಡೂರಿ ಯೋಜನೆಯ ಎಲ್ಲ ಹೋರಾಟಗಾರರನ್ನು ಕರೆದು ಕೇಂದ್ರದ ವಿರುದ್ಧದ ಹೋರಾಟಕ್ಕೆ ಯೋಜನೆ ರೂಪಿಸಲಾಗುವುದು’ ಎಂದರು.

₹111 ಕೋಟಿ ಸಾಲ ಮನ್ನಾ

ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ರೈತರ ಸಾಲ ಮನ್ನಾ ಮಾಡಲಾಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ₹111 ಕೋಟಿಗೂ ಅಧಿಕ ರೈತರ ಬೆಳೆಸಾಲ ಮನ್ನಾ ಆಗಿದೆ. 16,611 ಕುಟುಂಬಗಳು ಇದರ ಪ್ರಯೋಜನ ಪಡೆದಿವೆ ಎಂದು ತಿಳಿಸಿದರು.

ಮೈತ್ರಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ರಾಜಕಾರಣದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ; ಮಿತ್ರರೂ ಅಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್‌ ಇಬ್ಬರೊಂದಿಗೆ ಅಧಿಕಾರ ಹಂಚಿಕೊಂಡ ಅನುಭವವಿದೆ. ಫಲಿತಾಂಶದ ಬಳಿಕ ಪಕ್ಷದ ಹಿರಿಯರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು