ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆ ಸಮೀಕ್ಷೆ; ಶಾಲೆಯಿಂದ ಹೊರಗುಳಿದ 2,173 ಮಕ್ಕಳು

7,665 ಜನ ‘ವಿಶೇಷ ಮಕ್ಕಳು’ ಪತ್ತೆ
Last Updated 11 ಜುಲೈ 2021, 4:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಶಾಲೆಯಿಂದ 2,173 ಮಕ್ಕಳು ಹೊರಗುಳಿದಿದ್ದು, 875 ಮಕ್ಕಳು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಎಂಬ ಮಾಹಿತಿ ಮನೆ, ಮನೆ ಸಮೀಕ್ಷೆಯಿಂದ ತಿಳಿದು ಬಂದಿದೆ.

ಪ್ರತಿ ಬಾರಿ ಶಿಕ್ಷಣ ಇಲಾಖೆಯೇ ಮನೆ ಮನೆ ಸಮೀಕ್ಷೆ ನಡೆಸುತ್ತಿತ್ತು. ಆದರೆ, ಈ ಬಾರಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಹೈಕೋರ್ಟ್‌ ಆದೇಶದನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದಾದ್ಯಂತ ‘ಮನೆ–ಮನೆ ಸಮೀಕ್ಷೆ’ ಕೈಗೊಳ್ಳಲಾಗಿದೆ. 0–18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ, ಅಂಗನವಾಡಿ ಅಥವಾ ಶಾಲೆಗೆ ನೋಂದಣಿ ಮಾಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 1,304 ಮತ್ತು ನಗರ ಪ್ರದೇಶದಲ್ಲಿ 867 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 216 ಮತ್ತು ನಗರ ಪ್ರದೇಶದಲ್ಲಿ 659 ಮಕ್ಕಳು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ಜತೆಗೆ 7,665 ‘ವಿಶೇಷ ಮಕ್ಕಳು’ ಸಮೀಕ್ಷೆಯಲ್ಲಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಒಟ್ಟು 3,43,311 ಕುಟುಂಬಗಳ ಪೈಕಿ 2,64,357 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. 2,55,962 ಮಕ್ಕಳ ಸಮೀಕ್ಷೆ ಮಾಡಲಾಗಿದೆ.

ಆ್ಯಪ್‌ ಮೂಲಕ ಸಮೀಕ್ಷೆ: ಹೌಸ್‌ ಟು ಹೌಸ್‌ ಚಿಲ್ಡರ್ನ್‌ ಸರ್ವೆ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಸ್ವಸಹಾಯ ಸಂಘದ ಒಬ್ಬರು ಸದಸ್ಯರು(ಕಡ್ಡಾಯ) ಹಾಗೂ ಒಬ್ಬರು ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನೊಳಗೊಂಡ ತಂಡ ಸಮೀಕ್ಷೆ ನಡೆಸುತ್ತಿದೆ ಎಂದು ಜಿಲ್ಲಾ
ಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಮೀಕ್ಷೆಗೆ ಕೋವಿಡ್‌ ಅಡ್ಡಿ: ಕಳೆದ ಸೆಪ್ಟೆಂಬರ್‌ನಲ್ಲಿಸಮೀಕ್ಷೆ ಆರಂಭಿಸಲಾಗಿದ್ದು, ಜುಲೈ 31ರೊಳಗೆ ಸಮೀಕ್ಷೆ ಮುಕ್ತಾಯಗೊಳ್ಳಲಿದೆ. ಈ ನಡುವೆ ಕೊರೊನಾ ಎರಡನೇ ಅಲೆ ಎದುರಾಗಿದ್ದರಿಂದ ಲಾಕ್‌ಡೌನ್‌ ಅವಧಿಯಲ್ಲಿ ಸಮೀಕ್ಷೆ ನಿಲ್ಲಿಸಲಾಗಿತ್ತು. ಇದೀಗ ಸಮೀಕ್ಷಾ ಕಾರ್ಯ ವೇಗ ಪಡೆದುಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಶೇ 90.80ರಷ್ಟು ಮತ್ತು ನಗರ ಭಾಗದಲ್ಲಿ ಶೇ 61ರಷ್ಟು ಪೂರ್ಣಗೊಂಡಿದೆ.

ಸಿಗದ ವಲಸೆ ಕಾರ್ಮಿಕರ ಮಕ್ಕಳ ಮಾಹಿತಿ

ವಿವಿಧ ನಗರ, ಮಹಾನಗರಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು ಲಾಕ್‌ಡೌನ್‌ ಅವಧಿಯಲ್ಲಿ ನಗರ, ಗ್ರಾಮೀಣ ಭಾಗಗಳಿಗೆ ಮರಳಿದ್ದರು. ಇದೀಗ ಲಾಕ್‌ಡೌನ್‌ ತೆರವಾಗಿದ್ದರಿಂದ ಮತ್ತೆ ಅವರೆಲ್ಲ ದುಡಿಮೆ ಅರಸಿ ವಲಸೆ ಹೋಗಿದ್ದು, ಲಾಕ್‌ಡೌನ್‌ ಅವಧಿಯಲ್ಲಿ ಸಮೀಕ್ಷಾ ಕಾರ್ಯ ಸ್ಥಗಿತಗೊಳಿಸಿದ್ದರಿಂದ ಅವರ ಮಕ್ಕಳ ಮಾಹಿತಿ ಸಂಗ್ರಹಿಸುವುದು ಅಧಿಕಾರಿಗಳಿಗೆ ಕಷ್ಟಸಾಧ್ಯವಾಗಿದೆ.

ಜಿಲ್ಲೆಯಲ್ಲಿರುವ ಎಲ್ಲ ವಲಸೆ ಕುಟುಂಬಗಳನ್ನು ಪತ್ತೆ ಹಚ್ಚಿ, ಅವರ ರೇಷನ್‌ ಕಾರ್ಡ್‌ ಮಾಹಿತಿ ಪಡೆಯಲಾಗುತ್ತದೆ. ಆ ಮೂಲಕ ಅವರ ಮಕ್ಕಳ ಮಾಹಿತಿಯೂ ಸಿಗಲಿದೆ. ಲಾಕ್‌ಡೌನ್‌ ವೇಳೆ ನಗರಕ್ಕೆ ಮರಳಿದ್ದ ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ಕೈಗೊಂಡಿರುವ ಅಧಿಕಾರಿಗಳು ತಿಳಿಸಿದರು.

***

ಲಾಕ್‌ಡೌನ್‌ ಅವಧಿಯಲ್ಲಿ ನಗರಕ್ಕೆ ಮರಳಿದ್ದ ವಲಸೆ ಕಾರ್ಮಿಕರ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.

-ಸುರೇಶ ಇಟ್ನಾಳ, ಆಯುಕ್ತ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

***

ಜಿಲ್ಲೆಯ ‘ವಿಶೇಷ ಮಕ್ಕಳ ಶೈಕ್ಷಣಿಕ ಸಾರ್ಮರ್ಥ ಗುರುತಿಸಲು ಬ್ರಿಡ್ಜ್‌ ಕೋರ್ಡ್‌ ನಡೆಸಲಾಗುತ್ತದೆ. ಶಾಲೆಗೆ ಪ್ರವೇಶ ಪಡೆಯಲು ಮಗು ಅರ್ಹವಾಗಿದ್ದರೆ, ಪ್ರವೇಶ ನೀಡಲಾಗುವುದು.

-ಮೋಹನ ಎಲ್‌. ಹಂಚಾಟೆ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT