ಶನಿವಾರ, ಜೂನ್ 25, 2022
25 °C
ಧಾರವಾಡ ಅಪಘಾತ: ಚೆಲ್ಲಾಪಿಲ್ಲಿಯಾಗಿ ಬಿದ್ದ ಶವಗಳು, ಕಿಮ್ಸ್‌ಲ್ಲಿ ಕುಟುಂಬದವರ ಆಕ್ರಂದನ

ನಮ್ಮವರೆಲ್ಲ ಕಣ್ಣೆದುರೇ ನರಳಿ ಪ್ರಾಣ ಬಿಟ್ಟರು: ಅಪಘಾತದಲ್ಲಿ ಬದುಕುಳಿದವರ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸಾವು ಎದುರಿಗೆ ಬಂದ ಕ್ಷಣವದು! ಏನಾಗಬಹುದು ಎಂದು ಊಹಿಸುವಷ್ಟರಲ್ಲಿ, ಗಾಡಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಶಾಕ್‌ನಿಂದ ಎಚ್ಚೆತ್ತು ನೋಡಿದಾಗ ಎದುರಿಗೇ ನಮ್ಮವರದ್ದೇ ಹೆಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ರಕ್ತದ ಮಡುವಿನಲ್ಲಿ...!’

ಧಾರವಾಡದ ಬಾಡ ಕ್ರಾಸ್‌ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದ ಟೆಂಪೊ ಟ್ರ್ಯಾಕ್ಸ್‌ ಅಪಘಾತದಲ್ಲಿ ಒಂಬತ್ತು ಮಂದಿ ಮೃತಪಟ್ಟು, ಮೊಣಕೈಯಷ್ಟೇ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾದೇವಿ ಹುಲಮನಿ ಅವರು ಹೇಳುವ ಮಾತಿದು.

‘ಮನಸೂರು ಮಠದಲ್ಲಿ ಕಾಕನ ಮಗನ ನಿಶ್ಚಿತಾರ್ಥ ಮುಗಿಸಿ ಟೆಂಪೋದಲ್ಲಿ ನಾಲ್ಕು ಕಿ.ಮೀ. ದೂರದಲ್ಲಿರುವ ನಿಗದಿ ಗ್ರಾಮಕ್ಕೆ ತೆರಳುತ್ತಿದ್ದೇವು. ಮಠದಿಂದ ಹೊರಟು ಐದು ನಿಮಿಷವಾಗಿದೆ ಅಷ್ಟೇ, ಚಾಲಕ ಗಾಡಿಯನ್ನು ಒಮ್ಮಿಂದೊಮ್ಮೆಲೆ ಜೋರಾಗಿ ಓಡಿಸಲು ಆರಂಭಿಸಿದ. ನಿಧಾನ ಓಡಿಸು ಎನ್ನುವಷ್ಟರಲ್ಲಿ ಮುಂದಿರುವ ವಾಹನ ಹಿಮ್ಮೆಟ್ಟಿಸಲು ಮತ್ತಷ್ಟು ಜೋರಾಗಿ ಓಡಿಸಿದ. ಆಗಲೇ ನಮಗೆಲ್ಲ ಜೀವಭಯ ಆರಂಭವಾಗಿತ್ತು. ಸಾವು ಎದುರಿಗೇ ಬಂದಿದೆ ಎನ್ನುವಷ್ಟು ಆತಂಕ ಮನೆ ಮಾಡಿತ್ತು. ಅರೆಕ್ಷಣದಲ್ಲಿ ಗಾಡಿ ಮರಕ್ಕೆ ಡಿಕ್ಕಿ ಹೊಡೆದಾಗಿತ್ತು. ಎಚ್ಚರತಪ್ಪಿ ಬಿದ್ದ ನಾನು, ಸ್ವಲ್ಪ ಹೊತ್ತು ಬಿಟ್ಟು ಕಣ್ಬಿಟ್ಟಾಗ ಎದುರಿಗೆ ಶವಗಳು...’ ಎಂದು ಅವರು ಅಪಘಾತದ ಭೀಕರ ಕ್ಷಣ ಬಿಚ್ಚಿಟ್ಟರು.

‘ಸಣ್ಣಗೆ ಮಳೆ ಸುರಿಯುತ್ತಿದ್ದು, ರಸ್ತೆಯೆಲ್ಲ ಒದ್ದೆಯಾಗಿತ್ತು. ಟ್ರ್ಯಾಕ್ಸಿಯಲ್ಲಿ ಹಾಕಿದ್ದ ಹಾಡು ಕೇಳುತ್ತ ಅಲ್ಲೇ ಕಣ್ಮುಚ್ಚಿದ್ದೆ. ಐದಾರು ಸೆಕೆಂಡ್‌ ಗಾಡಿ ಅತ್ತಿತ್ತ ಹರಿದಾಡಿತು. ಏನಾಗಿದೆ ಎನ್ನುವಷ್ಟರಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿತ್ತು. ಅಲ್ಲಲ್ಲೇ ನರಳಾಡುತ್ತ ಇಬ್ಬರು ಪ್ರಾಣಬಿಟ್ಟರು’ ಎಂದು ಹೊಟ್ಟೆ ಮತ್ತು ಗಲ್ಲಕ್ಕೆ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುಳಾ ಮರಿಗೌಡರ ನಡುಗುವ ಸ್ವರದಲ್ಲಿ ಭಯಾನಕ ಸನ್ನಿವೇಶದ ಕ್ಷಣ ಕಣ್ಮುಂದೆ ಇಟ್ಟರು.

‘ಮದುವೆಯನ್ನು ಊರಿನ ಹುಡುಗನ ಮನೆಯಲ್ಲಿಯೇ ಇಟ್ಟುಕೊಳ್ಳಲಾಗಿತ್ತು. ಆದರೆ, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಟುಂಬದವರು ಮನಸೂರು ಮಠದಲ್ಲಿ ನಡೆಸಲು ನಿರ್ಧರಿಸಿದರು. ಊರಲ್ಲಿಯೇ ನಡೆದಿದ್ದರೇ ಒಂಬತ್ತು ಮಂದಿಯ ಜೀವ ಉಳಿದಿರುತ್ತಿತ್ತು. ವಿಧಿ ಬರಹ ಬದಲಾಯಿಸಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ’ ಎಂದು ನಿಗದಿ ಗ್ರಾಮಸ್ಥ ಬಸವರಾಜ್ ಬೋಳಶೆಟ್ಟಿ ಕಣ್ಣೀರು ಹಾಕಿದರು.

‘ಟ್ರ್ಯಾಕ್ಸಿ ಚಾಲಕ ಎರಡು ಬಾರಿ ಮನಸೂರಿಂದ ನಲವತ್ತು ಮಂದಿಯನ್ನು ಒಯ್ದು ನಿಗದಿ ಗ್ರಾಮಕ್ಕೆ ಬಿಟ್ಟು ಬಂದಿದ್ದ. ಆದರೆ, ಮೂರನೇ ಬಾರಿ ಬಿಡಲು ಬಂದವನು ಬೇರೆ ಚಾಲಕನಾಗಿದ್ದ. ಅವನ ಅಜಾರೂಕತೆ, ಅತಿವೇಗ ಹಾಗೂ ಮುಂದಿರುವ ವಾಹನ ಹಿಮ್ಮೆಟ್ಟುವ ಹುಚ್ಚು ಸಾಹಸಕ್ಕಿಳಿದು ಹೀಗಾಗಿದೆ’ ಎಂದು ಕುಟುಂಬದವರು ಆರೋಪಿಸುತ್ತಾರೆ.

ಸಚಿವ ಶಂಕರಪಾಟೀಲ ಮುನೇನಕೊಪ್ಪ ಕಿಮ್ಸ್‌ಗೆ ಭೇಟಿ ಮಾಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಮೃತ ಕುಟುಂಬದ ಸದಸ್ಯರಿಗೆ ಹಾಗೂ ಗಾಯಾಳುಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.

ಧಾವಿಸಿದ ಸಂಬಂಧಿಗಳು

ಗಾಯಾಳುಗಳನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಮದುವೆ ಮನೆ ಹಾಗೂ ಕಲ್ಯಾಣ ಮಂಟಪದಲ್ಲಿ ಇದ್ದ ಕುಟುಂಬದವರು ಹಾಗೂ ಪರಿಚಯದವರು ಶನಿವಾರ ಬೆಳ್ಳಂಬೆಳಿಗ್ಗೆಯೇ ತಂಡೋಪ ತಂಡವಾಗಿ ಕಿಮ್ಸ್‌ಗೆ ಧಾವಿಸಿದರು. ತುರ್ತು ಚಿಕಿತ್ಸಾ ಘಟಕದ ಮುಂಭಾಗ ಜನಸಾಗರವೇ ನೆರೆದಿತ್ತು. ಅವರನ್ನು ನಿಯಂತ್ರಿಸಲು ಒಂದು ಸಿಎಆರ್‌ ತುಕಡಿ ನಿಯೋಜನೆ ಮಾಡಲಾಗಿತ್ತು.

ತಾಯಿಯ ಆಕ್ರಂದನ; ಬಂಧುಗಳ ಆಕ್ರೋಶ

ಅಪಘಾತದಲ್ಲಿ ಮೃತಪಟ್ಟವರಲ್ಲಿನ ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್‌ ಶವಾಗಾರಕ್ಕೆ ತರಲಾಗಿತ್ತು. ಕಿಮ್ಸ್‌ಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಮೃತಪಟ್ಟಿದ್ದರು. ಮೃತಪಟ್ಟವರನ್ನು ಗುರುತಿಸಲು ಕುಟುಂಬದವರನ್ನು ಪೊಲೀಸ್‌ ಸಿಬ್ಬಂದಿ ಶವಗಾರಕ್ಕೆ ಕರೆದಾಗ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. 11 ವರ್ಷದ ಮಗ(ಮಹೇಶ್ವರ)ನನ್ನು ಕಳೆದುಕೊಂಡ ತಾಯಿ ಅನ್ನಪೂರ್ಣ ಅವರ ನರಳಾಟ ಮನಕುಲುವಂತಿತ್ತು. ‘ಸತ್ತ ಮಗನ ದೇಹ ನೋಡುವ ಶಕ್ತಿ ನನ್ನಲ್ಲಿ ಇಲ್ಲ’ ಎಂದು ಎದೆಗೆ ಹೊಡೆದುಕೊಳ್ಳುತ್ತಿದ್ದ ದೃಶ್ಯ ನೆರೆದವರ ಕಣ್ಣಂಚು ಒದ್ದೆ ಮಾಡಿಸಿತ್ತು.

‘ಒಂದೇ ಊರಿನ ರೈತ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿದ್ದರೂ, ಯಾವೊಬ್ಬ ಜನಪ್ರತಿನಿಧಿಯೂ ಬಂದಿಲ್ಲ. ಗಣ್ಯ ವ್ಯಕ್ತಿಗಳು ಮೃತಪಟ್ಟರೇ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ’ ಎಂದು ಶವಗಳನ್ನು ಕೊಂಡೊಯ್ಯುವಾಗ ಸಂಬಂಧಿಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕಿಮ್ಸ್‌ನಲ್ಲಿ ಇಬ್ಬರ ಸಾವು

ಅಪಘಾತದಲ್ಲಿ ಗಾಯಗೊಂಡ 13 ಮಂದಿಯನ್ನು ರಾತ್ರೋರಾತ್ರಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಅವರಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಚೆನ್ನವ್ವ ಬಂಕಾಪುರ(45), ಮನುಶ್ರೀ ದಾಸನಕೊಪ್ಪ(16) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ತಲೆಗೆ ತೀವ್ರಪೆಟ್ಟು ಬಿದ್ದಿರುವ ಐದು ವರ್ಷದ ಆರಾಧ್ಯ ಎಚ್‌. ಮತ್ತು 13 ವರ್ಷದ ಮುತ್ತು ಮರಿಗೌಡರ ಆರೋಗ್ಯ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣ ಪುಟ್ಟ ಗಾಯವಾಗಿದ್ದ ಉಳಿದ ಒಂಬತ್ತು ಮಂದಿಗೆ ತುರ್ತು ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು