ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ವಿಳಂಬ; ಸಂಕಷ್ಟದಲ್ಲಿ ಅಂಗನವಾಡಿಗಳು

ಪರಿಸ್ಥಿತಿ ನಿಭಾಯಿಸುವುದೇ ಕಾರ್ಯಕರ್ತೆಯರಿಗೆ ಸವಾಲು
Published 14 ಜುಲೈ 2023, 5:04 IST
Last Updated 14 ಜುಲೈ 2023, 5:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದೆಡೆ ಟೊಮೆಟೊ ಸೇರಿ ಇತರ ತರಕಾರಿ ದರ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಸರ್ಕಾರದಿಂದ ಸಕಾಲಕ್ಕೆ ಹಣ ಬಿಡುಗಡೆಯಾಗದೇ ಅಂಗನವಾಡಿ ಕೇಂದ್ರಗಳ ನಿರ್ವಹಣೆ ಕಷ್ಟಕರವಾಗಿದೆ.

ಮಕ್ಕಳು, ಗರ್ಭಿಣಿ, ಬಾಣಂತಿಯರು ಅಪೌಷ್ಟಿಕ ಸಮಸ್ಯೆ ನಿವಾರಿಸಲೆಂದೇ ಅಂಗನವಾಡಿ ಕೇಂದ್ರಗಳ ಮೂಲಕ ಅವರಿಗೆ ಮೊಟ್ಟೆ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ನೀಡುತ್ತಿದೆ. ಆದರೆ ತರಕಾರಿ ದರ ಏರಿಕೆ, ಸಿಲಿಂಡರ್ ಸೌಲಭ್ಯ ಕೊರತೆ, ಅನುದಾನ ವಿಳಂಬದ ಸಮಸ್ಯೆ ಕಾಡುತ್ತಿದೆ.

‘ಏನಾದ್ರೂ ಮಾಡಿ ಅಡುಗೆ ಮಾಡಬೇಕಲ್ಲರ‍್ರಿ... ಅಕಡೆ ತರಕಾರಿ ದರ ಮುಗಿಲ ಮುಟ್ಟಾತದ, ಇಲಾಖೆಯವ್ರು ಡಿಸೆಂಬರ್‌ನಿಂದ ತರಕಾರಿ ಬಿಲ್‌, ಏಪ್ರಿಲ್‌ನಿಂದ ಸಿಲಿಂಡರ್‌ ಗ್ಯಾಸ್‌ ಬಿಲ್‌ ಕೊಟ್ಟಿಲ್ಲರ‍್ರಿ. ಎರಡ ತಿಂಗಳಿನಿಂದ ನಮಗ್ ಪಗಾರ್‌ನೂ ಕೊಟ್ಟಿಲ್ಲ, ಊರಾಗ ಸಾಲ ಮಾಡಿ ಅಂಗನವಾಡಿ ನಡಸುದಾಗೇದ್ರಿ’ ಎಂದು ಧಾರವಾಡ ತಾಲ್ಲೂಕಿನ ಅಮ್ಮಿನಬಾವಿಯ ಅಂಗನವಾಡಿ ಕಾರ್ಯಕರ್ತೆ ಶಿವಲೀಲಾ ಹುಲ್ಲೂರ ತಿಳಿಸಿದರು.

‘ಮೊದ್ಲ ಸಾಂಬರ್‌ ಮಾಡಾಕ ನಾಲ್ಕೈದ್‌ ಟೊಮೆಟೊ ಬಳಸ್ತಿದ್ವಿ, ಈಗ ಬೆಲೆ ದಿಢೀರನೆ ಹೆಚ್ಚಾಗಿದ್ದರಿಂದ ಒಂದೇ ಟೊಮೆಟೊ ಬಳಸಬೇಕಿದೆ. ಹುಣಸೆಹಣ್ಣನ್ನೇ ಹೆಚ್ಚ ಬಳಸ್ತಿದೀವಿ. ನಮ್ಮ ಕೇಂದ್ರದಾಗ 18 ಮಕ್ಕಳು, 9 ಗರ್ಭಿಣಿಯರು, 6 ಬಾಣಂತಿಯರು ಅದಾರ. ಸಾಲಾ ಮಾಡೆರೆ ಇವರಿಗೆ ಊಟ ಹಾಕು ಪರಿಸ್ಥಿತಿ ಅದ. ನಮ್ ಸಂಕಷ್ಟದ ಬಗ್ಗೆ ಇಲಾಖೆಯವ್ರಿಗೂ ಹೇಳಿವಿ, ಆದ್ರ ಕಿವಿಗೊಡವಲ್ರು’ ಎಂದು ಅಳಲು ತೋಡಿಕೊಂಡರು.

ಮೊಟ್ಟೆ, ಹಾಲು ಬಂದ್‌: ‘ಸರ್ಕಾರವು ಅಂಗನವಾಡಿ ಕೇಂದ್ರದ ಒಂದು ಮಗುವಿನ ಘಟಕ ವೆಚ್ಚಕ್ಕೆ ₹8, ಗರ್ಭಿಣಿ, ಬಾಣಂತಿಯರ ಘಟಕ ವೆಚ್ಚಕ್ಕೆ ₹21 ನೀಡುತ್ತಿದೆ. ಇದರಲ್ಲಿ ತರಕಾರಿ ಖರೀದಿಗಾಗಿ ಪ್ರತಿ ಮಗುವಿಗೆ ₹1, ಗರ್ಭಿಣಿ, ಬಾಣಂತಿಯರಿಗೆ ₹2 ನೀಡಲಾಗುತ್ತದೆ. ನಮ್ಮ ಕೇಂದ್ರದಲ್ಲಿ 23 ಮಕ್ಕಳು, ಗರ್ಭಿಣಿ, ಬಾಣಂತಿಯರು ಸೇರಿ 22 ಜನ ಇದ್ದಾರೆ. ಸದ್ಯ ತರಕಾರಿಗಳ ದರ ಏರಿಕೆಯಿಂದ ಇಲಾಖೆ ಕೊಡುತ್ತಿರುವ ಹಣ ಸಾಕಾಗುತ್ತಿಲ್ಲ’ ಎಂದು ಧಾರವಾಡ ತಾಲ್ಲೂಕಿನ ಕಲ್ಲೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕಸ್ತೂರಿ ಅಗಸಿಮನಿ ಹೇಳಿದರು.

‘ಟೆಂಡರ್‌ ಮೂಲಕ ಪೂರೈಕೆಯಾಗುತ್ತಿರುವ ಮೊಟ್ಟೆ ಸಕಾಲಕ್ಕೆ ಬರುತ್ತಿಲ್ಲ. ಮೊದಲೆಲ್ಲ 200 ಎಂ.ಎಲ್‌ ಹಾಲು ಕೊಡಲಾಗುತ್ತಿತ್ತು. ಆದರೆ, ಕಳೆದ ಜನವರಿಯಿಂದ ಅದನ್ನೂ ಪೂರೈಸುತ್ತಿಲ್ಲ’ ಎಂದರು.

ಅಳ್ನಾವರ ತಾಲ್ಲೂಕಿನ ಕುಂಬಾರಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಊಟ ಮಾಡುತ್ತಿರುವ ಮಕ್ಕಳು
ಅಳ್ನಾವರ ತಾಲ್ಲೂಕಿನ ಕುಂಬಾರಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಊಟ ಮಾಡುತ್ತಿರುವ ಮಕ್ಕಳು

ಸಾಲ ಪಡೆದು ಅಂಗನವಾಡಿ ನಿರ್ವಹಣೆ

‘ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ₹11000 ಮತ್ತು ಸಹಾಯಕಿಯರಿಗೆ ₹5500 ಮಾಸಿಕ ಗೌರವಧನ ನೀಡುತ್ತಿದೆ. ಅದೂ ಸಕಾಲಕ್ಕೆ ಸಿಗುತ್ತಿಲ್ಲ. ಸರಾಸರಿ ₹9000 ಹಣವನ್ನು ಕುಟುಂಬ ಆಪ್ತರ ಬಳಿ ಪಡೆಯುತ್ತೇವೆ. ತರಕಾರಿ ಮಾರುವವರ ಬಳಿ ಸಾಲ ಪಡೆದು ಅಂಗನವಾಡಿ ಕೇಂದ್ರ ನಿರ್ವಹಿಸುತ್ತಿದ್ದೇವೆ’ ಎಂದು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದರು.

ಬರಿದಾದ ಅಕ್ಷಯಪಾತ್ರೆ

ಅಂಗನವಾಡಿ ಮಕ್ಕಳಿಗೆ ಸ್ಥಳೀಯ ದಾನಿಗಳ ನೆರವಿನಿಂದ ತರಕಾರಿ ಹೊಂಚುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಇಲಾಖೆ ‘ಅಕ್ಷಯಪಾತ್ರೆ’ ಎಂಬ ಪರಿಕಲ್ಪನೆ ರೂಪಿಸಿದೆ. ಆದರೆ ಇದರ ಬಗ್ಗೆ ಪ್ರಚಾರ ಮಾಡದ ಕಾರಣ ಬಹುತೇಕ ಅಂಗನವಾಡಿಗಳಲ್ಲಿ ‘ಅಕ್ಷಯಪಾತ್ರೆ’ಯಾಗಿ ಅಳವಡಿಸಿರುವ ಪಾತ್ರೆಗಳು ತರಕಾರಿ ಕಾಣದೆ ಸದಾ ಬರಿದಾಗಿಯೇ ಇವೆ. ದಾನಿಗಳ ಮೂಲಕ ತರಕಾರಿಯ ನೆರವು ಹರಿದು ಬಂದರೆ ಕಾರ್ಯಕರ್ತೆಯರು ಕೊಂಚ ನಿರಾಳರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT